ADVERTISEMENT

ಯಾದಗಿರಿ: ತರಕಾರಿ ಬೆಲೆ ಏರಿಕೆ, ಗ್ರಾಹಕರು ಕಂಗಾಲು

ನಗರದ ಏಳು ಕಡೆ ಮಾರುಕಟ್ಟೆ, ಹಳ್ಳಿಯಿಂದ ತರಲು ಪರದಾಟ

ಬಿ.ಜಿ.ಪ್ರವೀಣಕುಮಾರ
Published 1 ಏಪ್ರಿಲ್ 2020, 19:45 IST
Last Updated 1 ಏಪ್ರಿಲ್ 2020, 19:45 IST
ಯಾದಗಿರಿಯ ಪದವಿ ಮಹಾವಿದ್ಯಾಲಯ ಬಳಿ ತೆಗೆದಿರುವ ತರಕಾರಿ ಮಾರುಕಟ್ಟೆ
ಯಾದಗಿರಿಯ ಪದವಿ ಮಹಾವಿದ್ಯಾಲಯ ಬಳಿ ತೆಗೆದಿರುವ ತರಕಾರಿ ಮಾರುಕಟ್ಟೆ   

ಯಾದಗಿರಿ: ಕೊರೊನಾ ಸೋಂಕಿನ ಭೀತಿಯಿಂದ ಗೂಡ್ಸ್‌ ವಾಹನಗಳ ಒಡಾಟ ಕಡಿಮೆಯಾಗಿದ್ದು, ಇದರಿಂದ ತರಕಾರಿ ಬೆಲೆ ಹೆಚ್ಚಳವಾಗಿದೆ. ಗ್ರಾಹಕರು ಕಂಗಾಲಾಗಿದ್ದಾರೆ.

ಕೊರೊನಾ ಭೀತಿಯಿಂದ ಮನೆಯಲ್ಲಿ ಕುಳಿತು ತಿನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಲೆ ಹೆಚ್ಚಳದಿಂದ ಗ್ರಾಹಕರು ತೊಂದರೆಗೆ ಒಳಗಾಗಿದ್ದಾರೆ. ದುಡಿಯಲು ಕೆಲಸವಿಲ್ಲ. ಆದರೆ, ಹೊಟ್ಟೆಗೆ ಆಹಾರ ಬೇಕೇಬೇಕು. ಇದರಿಂದ ವ್ಯಾಪಾರಿಗಳು ಹೇಳಿದ್ದ ದರಕ್ಕೆ ತರಕಾರಿ ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ನಗರದ ಏಳು ಕಡೆ ಆಯಾ ಭಾಗದವರಿಗೆ ಅನುಕೂಲವಾಗಲೆಂದು ಜಿಲ್ಲಾಡಳಿತ, ನಗರಸಭೆಯವರು ತರಕಾರಿ ಮಾರುಕಟ್ಟೆ ಸ್ಥಾಪನೆ ಮಾಡಿದ್ದಾರೆ. ಆದರೆ, ವ್ಯಾಪಾರಿಗಳು ಇದರಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಒಂದೊಂದು ಭಾಗದಲ್ಲಿ ತರಕಾರಿ ತೆಗೆದುಕೊಂಡು ಹೋಗಿ ಮಾರಾಟ ಮಾಡುವ ಸ್ಥಿತಿ ಅನುಭವಿಸುತ್ತಿದ್ದಾರೆ.

ADVERTISEMENT

ಹಳ್ಳಿಗಳಿಂದ ವಾಹನ ತರಲು ಗ್ರಾಮಸ್ಥರು ಪೊಲೀಸರ ಲಾಠಿ ರುಚಿಗೆ ಭಯಪಟ್ಟಿದ್ದು, ಹೀಗಾಗಿ ತರಕಾರಿಗಳಲ್ಲಿ ಬೆಲೆ ಹೆಚ್ಚಳವಾಗಿದೆ. ₹10 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೆಟೊ ಈಗ ₹20 ರೂಪಾಯಿಗೆ ಬಿಕರಿಯಾಗುತ್ತಿದೆ. ಅದರಂತೆ ಮೆಣಸಿನಕಾಯಿಗೆ ಬೆಲೆ ಹೆಚ್ಚಳವಾಗಿದ್ದು, ಬೇಡಿಕೆಯೂ ಹೆಚ್ಚಳವಾಗಿದೆ.

ಸ್ಥಳೀಯವಾಗಿ ಸಿಗುವ ತರಕಾರಿ ಬೆಲೆ ಹೆಚ್ಚು ಏರಿಕೆಯಾಗಿಲ್ಲ. ಆದರೆ, ಬೇರೆ ಕಡೆಯಿಂದ ಬರುವ ತರಕಾರಿ ಬೆಲೆ ಹೆಚ್ಚಳವಾಗಿದೆ. ಬಿಟ್‌ರೂಟ್‌, ಬೀನ್ಸ್‌, ಆಲೂಗಡ್ಡೆ ಮತ್ತಿತರ ತರಕಾರಿ ಬೆಲೆ ಹೆಚ್ಚಳವಾಗಿದೆ.

ಗ್ರಾಮಸ್ಥರಿಗೆ ತೊಂದರೆ:ಹಳ್ಳಿಗಳಿಂದ ನಗರ ಪ್ರದೇಶಕ್ಕೆ ತರಕಾರಿ ತರಲು ವ್ಯಾಪಾರಿಗಳು ಪರದಾಡುತ್ತಿದ್ದಾರೆ. ಪೊಲೀಸರ ಕಾಟವೂ ಇದೆ. ಗೂಡ್ಸ್‌ ವಾಹನಗಳನ್ನು ಪೊಲೀಸರು ನಿಲ್ಲಿಸುತ್ತಿದ್ದಾರೆ. ಕೈಗೆ ಸಿಕ್ಕಿದ್ದನ್ನು ತೆಗೆದುಕೊಳ್ಳುತ್ತಾರೆ. ಕೆಲ ಪೊಲೀಸರು ವಾಹನ ಬಿಡಲು ಲಂಚ ಕೇಳುತ್ತಿದ್ದಾರೆ ಎಂದು ಚಿರಂಜೀವಿ ಶಾಲೆ ಹತ್ತಿರ ಇರುವ ವ್ಯಾಪಾರಿಗಳು ದೂರುತ್ತಾರೆ.

ಸೊಪ್ಪುಗಳು ಅಗ್ಗ:ಪುಂಡಿಪಲ್ಯ ₹10ಗೆ 2 ಕಟ್ಟು, ಪಾಲಕ ಸೊಪ್ಪು ₹10ಗೆ 4 ಕಟ್ಟು, ಮೆಂತೆ ಸೊಪ್ಪು ₹10 ಗೆ ಒಂದು ಕಟ್ಟು, ರಾಜಗಿರಿ ಸೊಪ್ಪು ₹10ಗೆ ಎರಡು ಕಟ್ಟು, ಈರುಳ್ಳಿ ಸೊಪ್ಪು ಕೇಜಿಗೆ ₹40 ಇದೆ.

ಹಣ್ಣುಗಳ ಬೆಲೆ:ಸೇಬು ₹100 ಕೇಜಿ, ಸಂತೂರ ₹50 ಕೇಜಿ, ಸಪೋಟ ₹40 ಕೇಜಿ, ಬಾಳೆಹಣ್ಣು ಡಜನ್ ₹40, ದ್ರಾಕ್ಷಿ ₹60 ಕೇಜಿ, ಕಲ್ಲಂಗಡಿ ಕೇಜಿ ₹20, ಖರ್ಬೂಜ ₹50 ಕೇಜಿ ಸೇರಿದಂತೆ ನಿಂಬೆಹಣ್ಣು ಗಾತ್ರದ ಆಧಾರದ ಮೇಲೆ ಬೆಲೆ ನಿಗದಿ ಪಡಿಸಲಾಗಿದೆ.

ಎಲ್ಲೆಲ್ಲಿವೆ ತರಕಾರಿ ಮಾರುಕಟ್ಟೆಗಳು:ಲಕ್ಷ್ಮಿರೈಸ್‌ ಮಿಲ್‌ ಹತ್ತಿಕುಣಿ ರಸ್ತೆ, ಸತೀಶ ವಾಣಿಜ್ಯ ಮಳಿಗೆ, ಚನ್ನಾರೆಡ್ಡಿ ಲೇಔಟ್‌, ಅಜೀಜ್‌ ಕಾಲೊನಿ ಉದ್ಯಾನ, ಚಿರಂಜೀವಿ ಶಾಲೆ ಹತ್ತಿರ, ಪದವಿ ಕಾಲೇಜು ಹತ್ತಿರ, ಜಾಮಾ ಲೇಔಟ್‌ ಬಳಿ ತರಕಾರಿ ಮಾರುಕಟ್ಟೆ ಸ್ಥಾಪನೆ ಮಾಡಲಾಗಿದೆ.

ಚಿರಂಜೀವಿ ಶಾಲೆ ಪಕ್ಕದಲ್ಲಿ ತೆಗೆದಿರುವ ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಕಬ್ಬಿಣದ ಸರಳುಗಳನ್ನು ಹಾಕಿದ್ದಾರೆ. ಇದರಿಂದ ಗ್ರಾಹಕರು ತಮಗೆ ಬೇಕಾದ ತರಕಾರಿಯನ್ನು ವ್ಯಾಪಾರಿಗಳಿಗೆ ಹೇಳಿದರೆ ಅವರೆ ತೂಕ ಮಾಡಿ ತಂದುಕೊಡುವ ವ್ಯವಸ್ಥೆ ಮಾಡಲಾಗಿದೆ. ನೀರು, ರಾತ್ರಿ ಹೊತ್ತು ಬೆಳಕು ಕಲ್ಪಿಸಲಾಗಿದೆ. ಇದು ನಗರದ ಮಧ್ಯಭಾಗದಲ್ಲಿ ಇರುವುದರಿಂದ ಹೆಚ್ಚಿನ ಜನಸಂಖ್ಯೆ ಬರುತ್ತಿದ್ದಾರೆ. ಅಲ್ಲದೆ ಇಲ್ಲಿಂದಲೇ ಬೇರೆ ಭಾಗಗಳಿಗೆ ತರಕಾರಿ ಸರಬರಾಜುಆಗುತ್ತದೆ.

***

ಇದಕ್ಕೂ ಮುಂಚೆ ಎರಡು ಕಡೆ ಮಾರುಕಟ್ಟೆ ಇತ್ತು. ಅಲ್ಲಿಗೆ ಆಟೊಗಳ ಮೂಲಕ ತರಕಾರಿ ಬರುತ್ತಿತ್ತು. ಆದರೆ, ಈಗ ವಾಹನ ಸೌಲಭ್ಯ ಇಲ್ಲದಿದ್ದರಿಂದ ಸಮಸ್ಯೆ ಅನುಭವಿಸುತ್ತಿದ್ದೇವೆ

- ಸಾಬಮ್ಮ ಮಾನಶಪ್ಪ ಮುದ್ನಾಳ, ವ್ಯಾಪಾರಿ

***

ತರಕಾರಿ ವಾಹನಗಳನ್ನು ಪೊಲೀಸರು ತಡೆಯುವಂತಿಲ್ಲ. ಲಂಚ ಕೇಳಿದ್ದರೆ ದಾಖಲೆ ಸಮೇತ ತರಕಾರಿ ವ್ಯಾಪಾರಿಗಳು ಮಾಹಿತಿ ನೀಡಿ. ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು
ಋಷಿಕೇಶ ಭಗವಾನ್‌ ಸೋನವಣೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.