ಹುಣಸಗಿ: ತಾಲ್ಲೂಕಿನಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಆರಿದ್ರಾ ಮಳೆಗೆ ಬಿತ್ತನೆ ಮಾಡಿದ್ದ ಹತ್ತಿ ಹಾಗೂ ತೊಗರಿ ಮಳೆ ಕೊರತೆಯಿಂದಾಗಿ ಬಾಡುವ ಹಂತಕ್ಕೆ ತಲುಪಿವೆ.
ತಾಲ್ಲೂಕಿನಲ್ಲಿ ಪೂರ್ವ ಮುಂಗಾರು ಚೆನ್ನಾಗಿ ಮಳೆಯಾಗಿದ್ದರಿಂದ ಈ ಬಾರಿ ರೈತರು ಹರ್ಷದಿಂದಲೇ ಹತ್ತಿ ಹಾಗೂ ತೊಗರಿ ಬಿತ್ತನೆ ಮಾಡಿದ್ದರು. ಬೆಳೆಯೂ ಚೆನ್ನಾಗಿ ಕಾಣಿಸಿಕೊಂಡಿದೆ. ಒಂದು ತಿಂಗಳ ಬಳಿಕ ಕಳೆಯು ತೆಗೆಯಲಾಗಿದ್ದು, ಸದ್ಯ ತೇವಾಂಶ ಕೊರತೆ ಎದುರಾಗಿದೆ. ಮೋಡ ಕವಿದ ವಾತಾವರಣ ಇರುತ್ತದೆ. ಆದರೆ ಇನ್ನೇನು ಮಳೆ ಬರುಬಹುದು ಎನ್ನುವಷ್ಟರಲ್ಲಿ ಮೋಡ ಚದುರಿಹೋಗುತ್ತಿವೆ ಎನ್ನುತ್ತಾರೆ ರೈತರು.
ಹುಣಸಗಿ ವಲಯದಲ್ಲಿ ಅಂದಾಜು 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಹಾಗೂ ತೊಗರಿ ಬಿತ್ತನೆ ಮಾಡಿದ್ದು, ತಾಲ್ಲೂಕಿನ ಕೊಡೇಕಲ್ಲ ವಲಯದಲ್ಲಿ 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಆದರೆ ಆಷಾಢ ಗಾಳಿ ಹಾಗೂ ಆರಿದ್ರಾ ಮಳೆ ಕೈಕೊಟ್ಟಿದ್ದು, ಬೆಳೆಗಳು ಗಾಳಿಗೆ ಮುದುಡುವ ಹಂತಕ್ಕೆ ಬಂದಿವೆ.
‘ತಾಲ್ಲೂಕಿನ ಕನಗಂಡನಹಳ್ಳಿ ಹಾಗೂ ಮಂಜಲಾಪುರ ಹಳ್ಳಿ ಗ್ರಾಮಗಳಲ್ಲಿ ಬಹುತೇಕ ರೈತರು ಮೃಗಶಿರಾ ಮಳೆಗೆ ಬಿತ್ತನೆ ಮಾಡಿದ್ದೇವು. ಮಳೆ ಇಲ್ಲದೇ ಮುಗಿಲು ನೋಡುವಂತಾಗಿದೆ’ ಎಂದು ರೈತರಾದ ಪ್ರಧಾನೆಪ್ಪ ಮೇಟಿ, ಅಂಬರೇಶ ಕಂಬಳಿ, ಕನಗಂಡಹನಹಳ್ಳಿ ಗ್ರಾಮದ ಚಂದ್ರಶೇಖರ ಗಡದ ಹೇಳುತ್ತಾರೆ.
‘ಕೊಡೇಕಲ್ಲ ವಲಯದಲ್ಲಿ ಕಳೆದ ಹದಿನೈದು ದಿನಗಳ ಕೆಳಗೆ ಅಲ್ಪ ಮಳೆಯಾಗಿತ್ತು. ಆ ಬಳಿಕ ಕಳೆ ತೆಗೆದು ಗೊಬ್ಬರವೂ ಹಾಕಿದ್ದು, ಮಳೆದ ದಾರಿ ನೋಡುತ್ತಿದ್ದೇವೆ’ ಎಂದು ರೈತ ಮಲ್ಲು ಜಂಗಳಿ ಹಾಗೂ ಬೊಮ್ಮನಗುಡ್ಡ ಗ್ರಾಮದ ಮಲ್ಲಣ್ಣ ಮೇಟಿ, ಬಸಣ್ಣ ಹೇಳಿದರು.
ತಾಲ್ಲೂಕಿನ ಮಾರಲಬಾವಿ, ಮಾಳನೂರು, ಕೋಳಿಹಾಳ, ಕೋಳಿಹಾಳ ತಾಂಡಾ, ಗುಂಡಲಗೇರಾ, ಅಗ್ನಿ, ಸೇರಿದಂತೆ ಇತರ ಗ್ರಾಮಗಳಲ್ಲಿ ರೈತರು ಮಳೆಗಾಗಿ ದೇವರ ಮೊರೆ ಹೋಗುತ್ತಿದ್ದು, ದೇವಸ್ಥಾನಗಳಲ್ಲಿ ಪ್ರಾರ್ಥನೆ ಮಾಡುತ್ತಿರುವುದಾಗಿ ಕೋಳಿಹಾಳ ಗ್ರಾಮದ ಹಿರಿಯ ಬಸವರಾಜ ಬೆಳ್ಳಿ ಮಾಹಿತಿ ನೀಡಿದರು.
ಜೂನ್ ತಿಂಗಳಲ್ಲಿ ವಾಡಿಕೆಯಂತೆ ಶೇ 79.97 ರಷ್ಟು ಮಳೆಯಾಗಿದೆ. ಆದರೆ ಜುಲೈ ಆರಂಭದಲ್ಲಿ ತಾಲ್ಲೂಕಿನಲ್ಲಿ ಶೇ 2ರಷ್ಟು ಮಳೆಯಾಗಿದೆ.– ರಾಮನಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.