
ಕೆಂಭಾವಿ: ಮಳೆಯಿಂದ ಹಾಳಾಗಿ ಅಳಿದುಳಿದ ಹತ್ತಿಯ ಗಿಡಿಗಳಲ್ಲಿ ಬಿಟ್ಟಿರುವ ಹತ್ತಿಯನ್ನು ಬಿಡಿಸಲು ಬೆಳೆಗಾರರಿಗೆ ಕೃಷಿ ಕೂಲಿ ಕಾರ್ಮಿಕರ ಕೊರತೆ ಕಾಡುತ್ತಿದೆ. ಮಾರುಕಟ್ಟೆಯಲ್ಲಿ ನಿರೀಕ್ಷಿತ ದರ ಇಲ್ಲದೆಯೂ ದುಪ್ಪಟ್ಟು ಕೂಲಿ ಹಣ ಕೊಟ್ಟು ಹತ್ತಿ ಬಿಡಿಸುವ ಅನಿವಾರ್ಯತೆಯೂ ಎದುರಾಗಿದೆ.
ಅತಿವೃಷ್ಟಿ ಮತ್ತು ಪ್ರವಾಹದಿಂದ ಈಗಾಗಲೇ ನಷ್ಟ ಅನುಭವಿಸಿರುವ ರೈತರು, ಈಗ ಕೂಲಿ ಕಾರ್ಮಿಕರಿಲ್ಲದೆ ಕಂಗಲಾಗಿದ್ದಾರೆ. ದೂರದ ಊರುಗಳಿಂದ ಕೃಷಿ ಕಾರ್ಮಿಕರನ್ನು ಕರೆತಂದು, ಹೆಚ್ಚಿನ ಕೂಲಿ ಕೊಟ್ಟು ಹತ್ತಿ ಬಿಡಿಸುತ್ತಿದ್ದಾರೆ.
ಜಮೀನಿನಲ್ಲಿ ಒಣಗಿ ನಿಂತ ಹತ್ತಿ ಬೆಳೆ ಸಂಪೂರ್ಣವಾಗಿ ಹಾಳಾಗುತ್ತದೆ ಎನ್ನುವ ಭಯದಿಂದ ಬೇರೆಡೆಯಿಂದ ಬೆಳೆಗಾರರು ಕೂಲಿಗಳನ್ನು ಆಟೊ, ಟಂಟಂ ಮೂಲಕ ಕರೆ ತರುತ್ತಿದ್ದಾರೆ. ಮತ್ತೆ ಕೆಲವರು ಹತ್ತಿ ಬಿಡಿಸುವ ಕೃಷಿ ಕಾರ್ಮಿಕರಿಗಾಗಿ ಸರದಿಯಲ್ಲಿ ಕಾಯುವ ಸ್ಥಿತಿ ಇದೆ. ಮಾರುಕಟ್ಟೆಗೆ ಬೇಗನೆ ಹತ್ತಿ ಮಾರಾಟ ಮಾಡಬೇಕೆಂದರೂ ಸಾಧ್ಯವಾಗುತ್ತಿಲ್ಲ.
ಸ್ಥಳೀಯ ಕಾರ್ಮಿಕರು ದೂರದ ಊರುಗಳಿಗೆ ಕೃಷಿಕಾರ್ಯಗಳಿಗೆ ತೆರಳುತ್ತಿದ್ದಾರೆ. ಹೀಗಾಗಿ, ಹತ್ತಿ ಬಿಡಿಸುವ ಕಾರ್ಮಿಕರನ್ನು ದೂರದ ಊರುಗಳಿಂದ ಕರೆತರುವುದು ಅನಿವಾರ್ಯವಾಗಿದೆ. ಎಲ್ಲಿ ಕಾರ್ಮಿಕರು ಬರಲು ಸಿದ್ಧರಿದ್ದಾರೆ ಎಂದು ಹುಡುಕಾಡುವ ಪರಿಸ್ಥಿತಿ ಬಂದಿದೆ. ಹತ್ತಿ ಬಿಡಿಸಿಕೊಂಡು ಕೃಷಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಹೆಣಗಾಡುವಂತೆ ಆಗಿದೆ ಎನ್ನುತ್ತಾರೆ ಬೆಳೆಗಾರರು.
ದೂರದ ಪ್ರದೇಶದಲ್ಲಿರುವ ಕೂಲಿ ಕಾರ್ಮಿಕರ ಮನೆಗೆ ಬೆಳೆಗಾರರೇ ಹೋಗಿ ಟಂಟಂ, ಕ್ರೂಷರ್, ಆಟೊ, ಟ್ರ್ಯಾಕ್ಟರ್‌ಗಳಲ್ಲಿ ಕರೆದುಕೊಂಡು ಬರುತ್ತಿದ್ದಾರೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ರಸ್ತೆಗಳಲ್ಲಿ ಕೂಲಿಕಾರ್ಮಿಕರನ್ನು ಹೊಂದಿರುವ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುವುದು ಸಾಮಾನ್ಯವಾಗಿದೆ.
‘ಕೂಲಿ ಕಾರ್ಮಿರು ಬೆಳಿಗ್ಗೆ 10.30ಕ್ಕೆ ಬಂದು ಸಂಜೆ 5ರ ವೇಳೆಗೆ ಮನೆಗಳತ್ತ ಮುಖಮಾಡುತ್ತಾರೆ. ಅದರು ನಡುವೆ ಒಂದಿಷ್ಟು ಊಟಕ್ಕೆ ಸಮಯ ತೆಗೆದುಕೊಳ್ಳುತ್ತಾರೆ. ಈ ಮೊದಲು ಮಹಿಳಾ ಕೃಷಿ ಕಾರ್ಮಿಕರಿಗೆ ದಿನಕ್ಕೆ ₹ 300 ಕೂಲಿ ಇತ್ತು. ಬೇಡಿಕೆ ಹೆಚ್ಚಾಗಿದ್ದರಿಂದ ₹ 400ರಿಂದ ₹ 500 ಕೂಲಿ ಕೇಳುತ್ತಿದ್ದಾರೆ’ ಎನ್ನುತ್ತಾರೆ ಬೆಳೆಗಾರರು.
‘ಕೃಷಿ ಕಾರ್ಮಿಕರ ಬೇಡಿಕೆಯಂತೆ ಒಂದು ಕೆ.ಜಿ. ಹತ್ತಿ ಬಿಡಿಸಲು ₹ 14ರಿಂದ ₹15 ಜೊತೆಗೆ ವಾಹನದ ಬಾಡಿಗೆಯೂ ಬೆಳೆಗಾರನೇ ಕೊಡಬೇಕು. ಒಬ್ಬ ಕೃಷಿ ಕಾರ್ಮಿಕ ದಿನಕ್ಕೆ 70 ರಿಂದ 80 ಕೆ.ಜಿ.ವರೆಗೆ ಹತ್ತಿ ಬಿಡಿಸುತ್ತಾರೆ. ದಿನಕ್ಕೆ ₹ 900 ರಿಂದ ₹ 1,000 ಸಂಪಾದನೆ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಹತ್ತಿ ದರ ₹ 6500ರಿಂದ ₹ 7,200 ನಡುವೆ ಇದೆ. ಇಷ್ಟೊಂದು ಹಣ ಖರ್ಚು ಮಾಡಿದೆ ಮೇಲೆ ಉಳಿಮೆ ಮಾಡಿ, ಬಿತ್ತಿ, ಗೊಬ್ಬರ ಹಾಕಿ, ಕಳೆ ಕೀಳಿ, ಔಷಧಿ ಹೊಡೆದ ಬೆಳೆಗಾರನಿಗೆ ಏನು ಉಳಿಯಬೇಕು’ ಎಂದು ಪ್ರಶ್ನೆ ಹಲವರಲ್ಲಿ ಮೂಡಿದೆ.
ನೀರಾವರಿ ಪ್ರದೇಶದ ರೈತರು ಬೇಸಿಗೆ ಬೆಳೆ ಬೆಳೆಯಲು ತ್ವರಿತ ಗತಿಯಲ್ಲಿ ಹತ್ತಿ ಬಿಡಿಸಿ ಮತ್ತೆ ಜಮೀನು ಹದ ಮಾಡಿಕೊಳ್ಳಲು ದುಪ್ಪಟ್ಟು ಹಣ ಕೊಟ್ಟು ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿರುವುದು ಸಣ್ಣ ರೈತರಿಗೆ ಸಂಕಷ್ಟ ತಂದಿದೆಕಾಂತಪ್ಪ ಕುಂಬಾರ ರೈತ
ದಿನಕ್ಕೆ 50ರಿಂದ 80 ಕೆ.ಜಿ ಹತ್ತಿ ಬಿಡಸಿದರೆ ₹ 800 ರಿಂದ ₹1100 ಕೂಲಿ ಹಣ ಸಿಗುತ್ತದೆ. ಹತ್ತಿ ಸೀಸನ್ ಮುಗಿದ ಮೇಲೆ ಎಂದಿನಂತೆ ದಿನಗೂಲಿಗೆ ದುಡಿಯುತ್ತೇವೆದೇವಕ್ಕೆಮ್ಮ ಕೃಷಿ ಕಾರ್ಮಿಕ ಮಹಿಳೆ