ಯಾದಗಿರಿ: ನಗರದ ಹೊಸ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ಐದು ಕಡೆ ಶನಿವಾರ ಕೋ–ವ್ಯಾಕ್ಸಿನ್ ಲಸಿಕೆಗೆ ಚಾಲನೆ ನೀಡಲಾಯಿತು. ಬೆಳಿಗ್ಗೆಯಿಂದಲೇ ಆರೋಗ್ಯ ಇಲಾಖೆ ಸಿಬ್ಬಂದಿ ಸರದಿಯಲ್ಲಿ ಬಂದು ಕುಳಿತ್ತಿದ್ದರು.
ಶಹಾಪುರ ತಾಲ್ಲೂಕು ಆಸ್ಪತ್ರೆ, ಸುರಪುರ ತಾಲ್ಲೂಕು ಆಸ್ಪತ್ರೆ ಮತ್ತು ನಗರ ಆರೋಗ್ಯ ಕೇಂದ್ರ, ಯರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆಚಿಕಿತ್ಸೆ ನೀಡಲಾಯಿತು. ಶನಿವಾರ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಸರ್ಕಾರದ ನಿರ್ದೇಶನದಂತೆ ಲಸಿಕೆ ನೀಡುವ ಪ್ರಕ್ರಿಯೆ ನಡೆಸಲಾಯಿತು.
ಮೊದಲ ದಿನ 5 ಲಸಿಕಾ ಕೇಂದ್ರಗಳಲ್ಲಿ247 ಜನರಿಗೆ ಲಸಿಕೆ ನೀಡಲಾಗಿದ್ದು, ಶೇ 55ರಷ್ಟು ಗುರಿ ಸಾಧನೆಯಾಗಿದೆ. ಗ್ರೂಪ್ ಡಿ ಸಿಬ್ಬಂದಿ, ನರ್ಸ್, ಲ್ಯಾಬ್ ಟೆಕ್ನಿಷಿಯನ್, ವೈದ್ಯರು ಸೇರಿದಂತೆ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ.
ಲಸಿಕೆ ಪಡೆದವರಿಗೆ 28 ದಿನಗಳ ನಂತರ ಮತ್ತೆ ಎರಡನೇ ಡೋಸ್ ಪಡೆಯಬೇಕಾಗಿದೆ. ಈ ಕುರಿತು ಎಸ್‍ಎಂಎಸ್ ಸಂದೇಶ ಕಳುಹಿಸಲಾಗುತ್ತದೆ.
ಪ್ರಥಮ ಹಂತದಲ್ಲಿ ಲಸಿಕೆ ನೀಡಲು 6,438 ಕೋವಿಡ್ ವಾರಿಯರ್ಸ್ ಗುರುತಿಸಲಾಗಿದೆ. ಶನಿವಾರ ಜಿಲ್ಲೆಯಲ್ಲಿ 445 ವಾರಿಯರ್ಸ್‌ಗಳಿಗೆ ಕೋವಿಡ್-19 ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಈಗಾಗಲೇ 3,000 ಲಸಿಕೆ ಜಿಲ್ಲೆಗೆ ಬಂದಿದೆ.
ಶಾಸಕರಿಂದ ಚಾಲನೆ: ನಗರದ ನೂತನ ಜಿಲ್ಲಾಸ್ಪತ್ರೆಯ ಲಸಿಕೆ ಕೇಂದ್ರದಲ್ಲಿ ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು,ಕೋವಿಡ್ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ನೀಡಿರುವ ಸಲಹೆ-ಸೂಚನೆಗಳನ್ನು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸಲಹೆ ನೀಡಿದರು.
ಕೋವಿಡ್-19 ಸಂದರ್ಭದಲ್ಲಿ ಕೊರೊನಾ ವಿರುದ್ಧ ಹೋರಾಡಿದ ವಿವಿಧಇಲಾಖೆಯ ವಾರಿಯರ್ಸ್ ಮತ್ತು ಜನಸಾಮಾನ್ಯರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿ ಲಸಿಕೆಯನ್ನು ಒದಗಿಸಿಕೊಟ್ಟ ಪ್ರಧಾನಮಂತ್ರಿ ನರೇದ್ರ ಮೋದಿಯವರಿಗೆ ಜಿಲ್ಲೆಯ ಜನತೆಯ ವತಿಯಿಂದ ಅಭಿನಂದನೆ ತಿಳಿಸಿದರು.
ಜಿಲ್ಲಾಸ್ಪತ್ರೆ ಸಹಾಯಕ ದರ್ಜೆ–2 (ಗ್ರೂಪ್ ‘ಡಿ’) ನೌಕರ ಅಶೋಕ ಅಗ್ನಿ ಮೊದಲ ಲಸಿಕೆ ಪಡೆದರು. ಆಸ್ಪತ್ರೆ ನರ್ಸ್ ಗಂಗಮ್ಮ ಚುಚ್ಚುಮದ್ದು ನೀಡಿದರು. ಅರ್ಧ ಗಂಟೆ ಕಾಲ ಚಿಕಿತ್ಸೆ ಪಡೆದವರನ್ನು ನಿಗಾವಹಿಸಲಾಗಿತ್ತು. ಸದ್ಯಕ್ಕೆ ಲಸಿಕೆ ಪಡೆದ ಫಲಾನುಭವಿಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ.
ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಮಾತನಾಡಿ, ಕೋವಿಡ್ ಲಸಿಕೆ ನೀಡಲು ಅಗತ್ಯವಿರುವ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಸರ್ಕಾರದ ಮಾರ್ಗಸೂಚಿಯಂತೆಕೊರೊನಾ ವಾರಿಯರ್ಸ್‌ಗಳಿಗೆಲಸಿಕೆ ನೀಡಲು ಕ್ರಮ ವಹಿಸಲಾಗುವುದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಇಂದುಮತಿ ಪಾಟೀಲ, ಜಿಲ್ಲಾ ಶಸ್ತ್ರ ಚಿಕಿತ್ಸಕ ಸಂಜೀವಕುಮಾರ ರಾಯಚೂರಕರ್, ಡಾ.ನೀಲಮ್ಮ ರೆಡ್ಡಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.
ಮೊದಲ ದಿನ ಲಸಿಕೆ ಪಡೆದವರು
ನೂತನ ಜಿಲ್ಲಾಸ್ಪತ್ರೆ; 40
ಶಹಾಪುರ ತಾಲ್ಲೂಕು ಆಸ್ಪತ್ರೆ;80
ಸುರಪುರ ತಾಲ್ಲೂಕು ಆಸ್ಪತ್ರೆ;61
ಸುರಪುರ ನಗರ ಆರೋಗ್ಯ ಕೇಂದ್ರ;36
ಪಿಎಚ್‌ಸಿ ಯರಗೋಳ;30
ಒಟ್ಟು;247
***
247 ಜನರಿಗೆ ಲಸಿಕೆ
ಮೊದಲ ದಿನ 5 ಕೇಂದ್ರಗಳಲ್ಲಿ 445 ಜನ ವಾರಿಯರ್ಸ್‌ಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ, 247 ಮಂದಿ ಲಸಿಕೆ ಪಡೆದಿದ್ದಾರೆ. ಶಹಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ 80 ಲಸಿಕೆ ಪಡೆದರೆ, ಯರಗೋಳದಲ್ಲಿ 30 ಜನರು ಚುಚ್ಚುಮದ್ದು ಪಡೆದಿದ್ದಾರೆ.
ಯಾದಗಿರಿ 100, ಶಹಾಪುರ 103, ಸುರಪುರ ತಾಲ್ಲೂಕು ಆಸ್ಪತ್ರೆ 99, ನಗರ ಆರೋಗ್ಯ ಕೇಂದ್ರ 99, ಯರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 44 ಕೊರೊನಾ ವಾರಿಯರ್ಸ್‌ಗಳಿಗೆ ಚಿಕಿತ್ಸೆ ನೀಡುವ ಗುರಿ ಹೊಂದಲಾಗಿತ್ತು.
***
ಲಸಿಕೆ ಬಗ್ಗೆ ಯಾವುದೇ ರೀತಿಯ ಭಯ, ಅಂತಕಕ್ಕೆ ಒಳಗಾಗದೆ ಕೋವಿಡ್ ಲಸಿಕೆಯನ್ನು ಪ್ರತಿಯೊಬ್ಬ ಕೊರೊನಾ ವಾರಿಯರ್ಸ್‌ಗಳು ಪಡೆಯಬೇಕು
- ವೆಂಕಟರೆಡ್ಡಿ ಮುದ್ನಾಳ, ಯಾದಗಿರಿಶಾಸಕ
***
ಆರೋಗ್ಯ ಇಲಾಖೆ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಖುಷಿಯಾಗಿ ಚುಚ್ಚುಮದ್ದು ಪಡೆಯಲು ಬಂದಿದ್ದರು. ಲಸಿಕೆ ಪಡೆದವಿಗೆ ಯಾವುದೇ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ನಮಗೂ ಖುಷಿಯಾಗಿದೆ
-ಡಾ.ಇಂದುಮತಿ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.