ADVERTISEMENT

ಕಕ್ಕೇರಾ: ಬಿಡದ ಮಳೆ: ನೆಲಕ್ಕುರುಳಿದ ಬೆಳೆ

ಕಟಾವು ಮಾಡಲು ಪರದಾಟ: ನೆರವಿಗೆ ಬರುವಂತೆ ಸರ್ಕಾರಕ್ಕೆ ರೈತರ ಮನವಿ

ಮಹಾಂತೇಶ ಸಿ.ಹೊಗರಿ
Published 20 ನವೆಂಬರ್ 2021, 12:58 IST
Last Updated 20 ನವೆಂಬರ್ 2021, 12:58 IST
ನಿರಂತರ ಮಳೆಯಿಂದಾಗಿ ಕಕ್ಕೇರಾದ ರೈತ ಮಾಳಪ್ಪ ಜಂಪಾ ಅವರ ಹೊಲದಲ್ಲಿ ಭತ್ತ ನೆಲಕ್ಕುರುಳಿದೆ
ನಿರಂತರ ಮಳೆಯಿಂದಾಗಿ ಕಕ್ಕೇರಾದ ರೈತ ಮಾಳಪ್ಪ ಜಂಪಾ ಅವರ ಹೊಲದಲ್ಲಿ ಭತ್ತ ನೆಲಕ್ಕುರುಳಿದೆ   

ಕಕ್ಕೇರಾ: ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣಕ್ಕೆ ಕಟಾವಿಗೆ ಬಂದ ಭತ್ತ ನೆಲಕ್ಕುರುಳಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.

‘10 ಎಕರೆಯಲ್ಲಿ ಭತ್ತ ಬೆಳೆದಿದ್ದೇವೆ.ಒಂದು ಎಕರೆಗೆ ಸುಮಾರು ₹20 ಸಾವಿರ ಖರ್ಚು ಮಾಡಿದ್ದೇವೆ. ಒಂದು ವಾರದಲ್ಲಿ ಭತ್ತ ಮಾರಾಟ ಮಾಡಿ ಸಾಲ ಮರುಪಾವತಿ ಮಾಡಬೇಕು ಎಂದುಕೊಂಡಿದ್ದೆವು. ಮಳೆ ನಮ್ಮ ಆಸೆಗೆ ತಣ್ಣೀರು ಎರಚಿದೆ’ ಎಂದು ರೈತ ಶಿವರಾಜ ಜಂಪಾ ಬೇಸರ ವ್ಯಕ್ತಪಡಿಸಿದರು.

‘ಕೋವಿಡ್ ಕಾರಣಕ್ಕೆ ಆರ್ಥಿಕವಾಗಿ ಜರ್ಜರಿತವಾಗಿರುವ ನಮಗೆ ಮಳೆ ಮತ್ತೆ ಪೆಟ್ಟು ನೀಡಿದೆ’ ಎಂದು ರೈತ ಮಾಳಪ್ಪ ತಿಳಿಸಿದರು.

ADVERTISEMENT

ತಿಂಥಣಿ, ದೇವಾಪುರ, ಆಲ್ದಾಳ, ದೇವತ್ಕಲ್ ಸೇರಿದಂತೆ ಅನೇಕ ಕಡೆಗಳಲ್ಲಿ ಕಟಾವಿಗೆ ಬಂದಿದ್ದ ಭತ್ತ ಸಂಪೂರ್ಣವಾಗಿ ನೆಲಕಚ್ಚಿದೆ. ಕಳೆದ ವಾರ ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಂದ ಭತ್ತ ರಾಶಿ ಯಂತ್ರಗಳು ಬಂದಿವೆ. ಭತ್ತ ಕಟಾವು ಆರಂಭಿಸಿವೆ. ಕಟಾವು ಮಾಡಿದ ಭತ್ತವನ್ನು ಒಣಗಿಸುವುದೇ ದೊಡ್ಡ ಸಮಸ್ಯೆಯಾಗಿದೆ.

‘ನಾನು ಬೇರೆಯವರಿಗೆ ಸೇರಿದ ನಾಲ್ಕು ಎಕರೆ ಹೊಲ ಗುತ್ತಿಗೆ ತೆಗೆದುಕೊಂಡು ಭತ್ತ ಬೆಳೆದಿದ್ದೆ. ಗಾಳಿ ಮತ್ತು ಮಳೆಗೆ ನೆಲಕ್ಕೆ ಬಾಗಿದೆ. ಕಟಾವು ಮಾಡಲೂ ಆಗುತ್ತಿಲ್ಲ. ಬೆಲೆ ಇಲ್ಲವಾಗಿದೆ’ ಎಂದು ರೈತ ಸಾಮಣ್ಣ ಜೋಗಾರ ಹೇಳಿದರು.

ಇನ್ನೊಂದು ವಾರ ಮಳೆ ಇದೇ ರೀತಿ ಮುಂದುವರಿದರೆ ತೊಗರಿ ಮತ್ತು ಹತ್ತಿಗೂ ತೊಂದರೆಯಾಗಲಿದೆ. ಜಿಲ್ಲಾಡಳಿತ ಕೂಡಲೇ ರೈತರ ನೆರವಿಗೆ ಬರಬೇಕು’ ಎಂದು ತಿಂಥಣಿ ಗ್ರಾಮ ಪಂಚಾಯಿತಿ ಸದಸ್ಯ ಭೈರಣ್ಣ ಅಂಬಿಗರ ಮನವಿ ಮಾಡಿದರು.

ಈಚೆಗೆ ಕಕ್ಕೇರಾ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸುಮಾರು ₹40 ಸಾವಿರ ಮೌಲ್ಯದ ಶೇಂಗಾ ಬೀಜ ತೆಗೆದುಕೊಂಡು ಬಿತ್ತನೆ ಮಾಡಿದ್ದೇನೆ. ಬೀಜಗಳು ಸಂಪೂರ್ಣವಾಗಿ ಕಳಪೆ ಗುಣಮಟ್ಟದಿಂದ ಕೂಡಿವೆ. ಏನು ಮಾಡಬೇಕು, ಯಾರಿಗೆ ಹೇಳಬೇಕು ಎಂದು ರೈತ ಚಿಕನಳ್ಳಿ ಮಾಳಿಂಗರಾಯ ಪ್ರಶ್ನೆ ಮಾಡಿದರು.

ಸತತ ಮಳೆಯಿಂದ ಕಂಗೆಟ್ಟಿರುವ ತರಕಾರಿ ಬೆಳೆದ ರೈತರು ಭೂಮಿಯಿಂದ ಬೇರ್ಪಡಿಸುವ ಗೋಜಿಗೆ ಹೋಗದೇ ಇರುವುದರಿಂದ ಸಂತೆಯಲ್ಲಿ ನಿರೀಕ್ಷಿಸಿದಷ್ಟು ತರಕಾರಿ ಗ್ರಾಹಕರ ಕೈಗೆ ದೊರೆಯಲಿಲ್ಲ.

ಮುಂಚಿತವಾಗಿ ಭತ್ತ ಬೆಳೆದ ಕಾರಣ ₹1500 ದರ ಇತ್ತು. ಮಳೆಯಲ್ಲಿ ತೊಯ್ದ ಕಾರಣ ₹1100 ಮಾರಾಟ ಮಾಡಿದ್ದೇನೆ ಎಂದು ರೈತ ಶರಣಪ್ಪ ಜಕಾತಿ ಹೇಳಿದರು.

*ನಾಲ್ಕು ದಿನಗಳಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ. ಕೈಗೆ ಬಂದ ಬೆಳೆ ಹೀಗೆ ನೀರಿನಲ್ಲಿ ಕೊಳೆಯುತ್ತಿರುವುದನ್ನು ನೋಡುತ್ತಿದ್ದರೆ ಸಂಕಟವಾಗುತ್ತದೆ. ಸರ್ಕಾರ ರೈತರ ನೆರವಿಗೆ ಬರಲಿ
- ಮಾಳಪ್ಪ ಜಂಪಾ, ರೈತ ನಿವಾಸಿ

* ನೆಲಕ್ಕೆ ಉರುಳಿದ ಭತ್ತವನ್ನು ಹೇಗೆ ಮಾರಾಟ ಮಾಡಬೇಕು. ಕೂಡಲೇ ಸರ್ಕಾರ ರೈತರಿಗೆಲ್ಲ ಪರಿಹಾರ ನೀಡಬೇಕು
- ಶಿವರಾಜ ಜಂಪಾ, ಸ್ಥಳೀಯ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.