
ಯಾದಗಿರಿ: ‘ಅತಿವೃಷ್ಟಿ ಹಾಗೂ ನೆರೆಯಿಂದಾಗಿ ಬೆಳೆಗಳನ್ನು ಕಳೆದುಕೊಂಡ ರೈತರಿಗೆ ರಾಜ್ಯ ಸರ್ಕಾರ ಪರಿಹಾರಧನವನ್ನು ಬಿಡುಗಡೆ ಮಾಡಿದೆ. ಪರಿಹಾರದ ಹಣ ಪಡೆಯದ ರೈತರಿಗೂ ಪರಿಹಾರ ಕಲ್ಪಿಸುವ ವ್ಯವಸ್ಥೆಯನ್ನು ತ್ವರಿತವಾಗಿ ಮಾಡಬೇಕು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಯಾದಗಿರಿ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಗತಿ ಪರಿಶೀನಾ ಸಭೆ ನಡೆಸಿ ಅವರು ಮಾತನಾಡಿದರು.
‘ಮಳೆ ಹಾಗೂ ನೆರೆಯಿಂದಾಗಿ ಲಕ್ಷಾಂತರ ರೈತರು ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಸಮೀಕ್ಷೆ ಮಾಡಿ ಸರ್ಕಾರವು ಪರಿಹಾರದ ಮೊತ್ತವನ್ನು ಪಾವತಿ ಮಾಡಿದೆ. ಕೆಲವು ರೈತರು ತಮಗೆ ಬೆಳೆ ಪರಿಹಾರದ ಹಣ ಬಂದಿಲ್ಲ ಎಂದು ಅಲೆದಾಡುತ್ತಿದ್ದಾರೆ. ನನಗೂ ಸಾಕಷ್ಟು ದೂರುಗಳು ಬಂದಿವೆ. ಈ ಬಗ್ಗೆ ಏನಾದರು ವ್ಯವಸ್ಥೆ ಮಾಡಿ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರದ ಹಣ ಸಿಗುವಂತೆ ಮಾಡಿ’ ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
‘ಜಿಲ್ಲಾ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡು ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಆರೋಗ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಅಧಿಕಾರಿ, ‘ರೋಗಿಗಳ ಭೇಟಿಯ ಹಾಗೂ ಹೆರಿಗೆ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ಸಿಬ್ಬಂದಿಯ ಕೊರತೆ ಇದೆ. ನಾವು ಕೇಳಿದಷ್ಟು ಔಷಧ ಸರಬರಾಜು ಆಗುತ್ತಿಲ್ಲ. ಶೇ 50ರಷ್ಟು ಔಷಧ ಕೇಳಿದರೆ, ಶೇ 20ರಷ್ಟು ಕೊಡುತ್ತಾರೆ. ಎಬಿಆರ್‌ಕೆ ಅನುದಾನ ಬಳಸಿಕೊಂಡು ಔಷಧವನ್ನು ಕೊಡುತ್ತಿದ್ದೇವೆ’ ಎಂದರು.
‘ಎರಡು ವರ್ಷಗಳ ಬಳಿಕ ಪೋಲಿಯೊ ಲಸಿಕೆ ಅಭಿಯಾನ ಮತ್ತೆ ಹಾಕಲಾಗುವುದು. ಡಿಸೆಂಬರ್ 21ರಿಂದ 24ರ ವರೆಗೆ ಲಸಿಕಾ ಅಭಿಯಾನ ನಡೆಸಲಾಗುವುದು. ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ಹಲವು ತಂಡಗಳು ಹಾಗೂ ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗಿದೆ’ ಎಂದು ಹೇಳಿದರು.
ವಡಗೇರಾ ತಾಲ್ಲೂಕಿನ ಕಸ್ತೂರಿ ಬಾ ವಸತಿ ಶಾಲೆಗೆ ಮಂಜೂರಾದ ಜಾಗವನ್ನು ಸರ್ವೆ ಮಾಡಿ ಗುರುತಿಸಿದ ಬಗ್ಗೆ ಕಿಡಿಕಾರಿದ ಶಾಸಕರು, ಸರ್ವೆ ಸಿಬ್ಬಂದಿ ಜೊತೆಗೆ ಫೋನ್‌ನಲ್ಲಿ ಮಾತನಾಡಿದರು. ‘ಮಂಗಳವಾರ ಬಿಇಒ, ಸರ್ವೆ ಸಿಬ್ಬಂದಿ, ಪಿಡಬ್ಲ್ಯುಡಿ ಎಂಜಿನಿಯರ್ ಒಟ್ಟಾಗಿ ಹೋಗಿ ಸರ್ವೆ ಕೆಲಸವನ್ನು ಪೂರ್ಣಗೊಳಿಸಬೇಕು’ ಎಂದು ತಾಕೀತು ಮಾಡಿದರು.
ಸಿಗದ ವಿದ್ಯುತ್ ಸಂಪರ್ಕ: ಕ್ಷೇತ್ರದ ಕೆಲವು ಅಂಗನವಾಡಿ ಕೇಂದ್ರಗಳಿಗೆ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಡೆಪಾಸಿಟ್ ಇರಿಸಿದ್ದರೂ ಮುಂದೆ ಬರುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಸಭೆಯಲ್ಲಿ ಪ್ರಸ್ತಾಪಿಸಿದರು. ಜೆಸ್ಕಾಂ ಎಂಜಿನಿಯರ್‌ಗೆ ಕರೆ ಮಾಡಿದ ಶಾಸಕರು, ಆದಷ್ಟು ಬೇಗ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್‌ಗಳಾದ ಸಿದ್ದಾರೂಢ, ಮಂಗಳಾ ಎಂ., ಸುರೇಶ ರಾಣಪ್ಪ ಅಂಕಲಗಿ, ಇಒಗಳಾದ ಬಸವರಾಜ, ಮಹಾದೇವ ಬಾಗಳಾಗಿ, ಮಲ್ಲಿಕಾರ್ಜುನ ಸಂಗವಾರ್ (ಪ್ರಭಾರ), ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
‘ವಡಗೇರಾ– ಹೈದರಾಬಾದ್: ಮತ್ತೆ ಬಸ್ ಸೇವೆ ಆರಂಭಿಸಿ’
‘ವಡಗೇರಾ ತಾಲ್ಲೂಕು ಕೇಂದ್ರವಾಗಿದ್ದು ಹೈದರಾಬಾದ್‌ಗೆ ನೇರ ಬಸ್ ಸೇವೆಯನ್ನು ಮತ್ತೆ ಆರಂಭಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಪ್ರಯಾಣಿಕರ ಬೇಡಿಕೆ ಇದ್ದಾಗಿಯೂ ಸೇವೆ ನಿಲ್ಲಿಸಿದ್ದು ಏಕೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಕೆಕೆಆರ್‌ಟಿಸಿ ಅಧಿಕಾರಿಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿ ಅಧಿಕಾರಿ ‘ಕಡಿಮೆ ಆದಾಯ ಬರುತ್ತಿದ್ದರಿಂದ ಸಂಚಾರವನ್ನು ಸ್ಥಗಿತಗೊಳಿಸಿ ಕಲಬುರಗಿ ಮಾರ್ಗವಾಗಿ ಬಿಡಲಾಗಿದೆ. ₹ 10 ಸಾವಿರದಷ್ಟು ಆದಾಯ ಬರುತ್ತಿದೆ’ ಎಂದರು. ‘ನನಗೆ ಬಂದ ಮಾಹಿತಿ ಪ್ರಕಾರ ₹ 15 ಸಾವಿರದಿಂದ ₹ 20 ಸಾವಿರ ವರೆಗೆ ಆದಾಯ ಬರುತ್ತಿದೆ. ವಡಗೇರಾದ ಬೇರೆ ಕಡೆಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಆದಾಯ ಬರುತ್ತಿದ್ದು ಅದನ್ನು ಸರಿದೂಗಿಸಿಕೊಂಡು ಹೈದರಾಬಾದ್‌ಗೆ ನೇರವಾಗಿ ಬಸ್ ಓಡಿಸಬೇಕು’ ಎಂದು ಶಾಸಕರು ತಾಕೀತು ಮಾಡಿದರು.
‘ಗೃಹಲಕ್ಷ್ಮಿ’ಯ ₹ 34 ಕೋಟಿ ಉಳಿಕೆ: ಶಾಸಕರು ಅಚ್ಚರಿ
‘ಗೃಹಲಕ್ಷ್ಮಿ’ ಯೋಜನೆಯಡಿ ಎಸ್‌ಸಿ ಎಸ್‌ಟಿ ಹಾಗೂ ಇತರೆ ಫಲಾನುಭವಿಗಳಿಗೆ ಹಣ ಜಮೆಯಾಗದೆ ₹ 34 ಕೋಟಿಯಷ್ಟು ಉಳಿದುಕೊಂಡಿದೆ ಎಂದು ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಹೇಳುತ್ತಿದ್ದಂತೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅಚ್ಚರಿ ವ್ಯಕ್ತಪಡಿಸಿದರು. ‘ಅಷ್ಟೊಂದು ದುಡ್ಡು ಉಳಿಸಿಕೊಂಡು ಏನು ಮಾಡುತ್ತಿದ್ದೀರಾ? ಹಣ ಬರುತ್ತಿಲ್ಲ ಎಂದು ಫಲಾನುಭವಿಗಳು ಕೇಳುತ್ತಿದ್ದಾರೆ. ಅಷ್ಟು ಹಣವನ್ನು ಅವರ ಖಾತೆಗಳಿಗೆ ಜಮೆ ಮಾಡಿದರೆ ನಮ್ಮ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ಆಗಬೇಕು’ ಎಂದು ಶಾಸಕರು ತಾಕೀತು ಮಾಡಿದರು.
ಮೊಬೈಲ್‌ನಲ್ಲಿ ಬ್ಯುಸಿ ಗುಸುಗುಸು ಮಾತು
ಶಾಸಕರು ಒಂದೊಂದು ಇಲಾಖೆಯ ಅಧಿಕಾರಿಗಳನ್ನು ಕರೆಯಿಸಿ ಪ್ರಗತಿಯ ಮಾಹಿತಿ ಪಡೆಯುತ್ತಿದ್ದರೆ ಕೆಲ ಅಧಿಕಾರಿಗಳು ತಮಗೇನೂ ಸಂಬಂಧವೇ ಇಲ್ಲ ಎಂಬಂತೆ ಮೊಬೈಲ್‌ನಲ್ಲಿ ಬ್ಯುಸಿ ಆಗಿದ್ದರು. ಕೆಲವರು ಗೂಗಲ್‌ನಲ್ಲಿ ಸರ್ಚ್ ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ಮಾಡುವಲ್ಲಿ ನಿರತವಾಗಿದ್ದರು. ಮತ್ತೆ ಕೆಲವರು ಗುಸುಗುಸು ಮಾತನಾಡುತ್ತಿದ್ದು ಇಒ ಬಸವರಾಜ ಅವರು ಮಾತನಾಡದಂತೆ ಸೂಚಿಸಿದರೂ ಕಿವಿಗೊಡಲಿಲ್ಲ. ಶಾಸಕರು ಕೋಪದಿಂದ ಮುಂದೆಯೇ ಕುಳುತ್ತಿದ್ದ ಅಧಿಕಾರಿಗೆ ಎದ್ದು ಹೊರ ಹೋಗುವಂತೆ ಗದರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.