ADVERTISEMENT

ಗರ್ಭಿಣಿಯರ ಸಾವು: ಕಾರಣ ಪತ್ತೆಹಚ್ಚಲು ಡಿಸಿ ಸೂಚನೆ

ವಿವಿಧ ಕಾರಣ, ನ್ಯೂನ್ಯತೆಗಳಿಂದ ಹತ್ತು ಗರ್ಭಿಣಿಯರು ಮೃತಪಟ್ಟ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 16:47 IST
Last Updated 27 ನವೆಂಬರ್ 2020, 16:47 IST
ಡಾ. ರಾಗಪ್ರಿಯಾ ಆರ್.,
ಡಾ. ರಾಗಪ್ರಿಯಾ ಆರ್.,   

ಯಾದಗಿರಿ: ಜಿಲ್ಲೆಯಲ್ಲಿ ಮೃತಪಡುವ ಗರ್ಭಿಣಿಯ ದೇಹವನ್ನು ಇನ್ನೂ ಮುಂದೆ ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ನಡೆಸಿ, ಮರಣಕ್ಕಿಡಾಗುವ ನಿಖರ ಕಾರಣಗಳನ್ನು ಪತ್ತೆ ಹಚ್ಚುವಂತೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್., ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಹಾಗೂ ಎಲ್ಲಾ ತಾಲ್ಲೂಕು ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 2020ರ ಏಪ್ರಿಲ್‍ನಿಂದ ಸೆಪ್ಟೆಂಬರ್ ವರೆಗೆ ವಿವಿಧ ನ್ಯೂನ್ಯತೆಗಳು ಹಾಗೂ ವಿವಿಧ ಕಾರಣಗಳಿಂದ ಹತ್ತು ಗರ್ಭಿಣಿಯರು ಮೃತಪಟ್ಟಿದ್ದಾರೆ. ಅವರು ಮೃತಪಡಲು ನಿಖರ ಕಾರಣಗಳೇನು ಎಂಬುದನ್ನು ತಿಳಿಯಬೇಕಿದೆ. ಸರ್ಕಾರಿ ಮತ್ತು ಖಾಸಗಿ ಅಸ್ಪತ್ರೆಗಳಲ್ಲಿ ಗರ್ಭಿಣಿ ರೋಗಿಯ ಹಾಗೂ ಹೊರ ರೋಗಿಗಳ ಸಂಪೂರ್ಣ ಮಾಹಿತಿಯನ್ನು ಕಂಪ್ಯೂಟರ್ ಮತ್ತು ಅಸ್ವತ್ರೆಯ ಮಾಹಿತಿ ಪುಸ್ತಕಗಳಲ್ಲಿ ವರದಿ ಮಾಡುವಂತೆ ಸೂಚಿಸಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ರಕ್ತದಾನ ಶಿಬಿರ ಏರ್ಪಡಿಸಬೇಕು. ಶಿಬಿರಗಳಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಲು ಅಗತ್ಯ ಪ್ರಚಾರ ಕೈಗೊಳ್ಳಬೇಕು ಎಂದು ಆರೋಗ್ಯಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಜಿಲ್ಲೆಯ ಎಲ್ಲಾ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಒದಗಿಸಿಕೊಡಬೇಕು. ಜಿಲ್ಲೆಯಲ್ಲಿ ಗರ್ಭಿಣಿಯರ ಮರಣ ಪ್ರಮಾಣ ಕಡಿಮೆ ಮಾಡಲು ಜಿಲ್ಲೆಯ ಎಲ್ಲಾ ಆರೋಗ್ಯ ಅಧಿಕಾರಿಗಳು ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಶ್ರಮಿಸಬೇಕು ಎಂದು ಹೇಳಿದರು.

ADVERTISEMENT

ಜಿಲ್ಲೆಯ ಕೆಲವು ಕುಟುಂಬಗಳಲ್ಲಿ ಮೂರು ಮತ್ತು ನಾಲ್ಕು ಮಕ್ಕಳಿಗಿಂತಲೂ ಹೆಚ್ಚಿನ ಮಕ್ಕಳಿದ್ದು, ಆ ಕುಟುಂಬದವರಿಗೆ ಕುಟುಂಬ ಕಲ್ಯಾಣ ಯೋಜನೆಗಳ ಕುರಿತು ಆರೋಗ್ಯ ಅಧಿಕಾರಿಗಳು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅರಿವು ಮೂಡಿಬೇಕು ಎಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.