ಸುರಪುರ: ನಗರದ ಪುರಾತನ ಬಯಲು ಹನುಮಾನ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಸಹಸ್ರ ದೀಪೋತ್ಸವವು ಅದ್ದೂರಿಯಾಗಿ ನೆರವೇರಿತು.
ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಗ್ಯಾನ್‍ಚಂದ ಜೈನ್ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ‘ದೀಪ ಬೆಳಕಿನ ಸಂಕೇತ. ಕತ್ತಲೆ, ಅಂಧಕಾರ ದೂರವಾಗಿ ಎಲ್ಲೆಲ್ಲೂ ಪ್ರಕಾಶ ಮೂಡಿ ಜೀವನ ಸಂತಸದಿಂದ ಅರಳುತ್ತದೆ’ ಎಂದು ಹೇಳಿದರು.
‘ದೇಗುಲಗಳಲ್ಲಿ ಪೂಜೆ, ಪುನಸ್ಕಾರ, ದೀಪೋತ್ಸವದಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಸಂಸ್ಕಾರ ಬೆಳೆಯುತ್ತದೆ. ಕಾರಣ ತಾಯಿಂದಿರು ತಮ್ಮ ಚಿಕ್ಕಚಿಕ್ಕ ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆ ತರಬೇಕು’ ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ ಅರವಿಂದಕುಮಾರ ಮಾತನಾಡಿ, ‘ದೀಪೋತ್ಸವದಲ್ಲಿ ಬಳಸುವ ಹತ್ತಿಯ ಬತ್ತಿ, ಎಣ್ಣೆ, ಹಣತೆ ಎಲ್ಲವೂ ಆರೋಗ್ಯದಾಯಕ. ದೀಪದಿಂದ ಉರಿಯುವ ಹೊಗೆಯಿಂದ ಪರಿಸರ ಶುದ್ಧವಾಗುತ್ತದೆ’ ಎಂದು ಹೇಳಿದರು.
ಪ್ರಧಾನ ಅರ್ಚಕ ಕೃಷ್ಣಭಟ್ಟ ಜೋಷಿ ಶ್ರೀರಾಮ ಕಥಾ ಶ್ರವಣ ಮಾಡಿದರು. ವೇಣುಗೋಪಾಲ ಮಹಿಳಾ ಭಜನಾ ಮಂಡಳಿ, ರಾಮಧ್ಯಾನ ರಘುವೀರ ತೀರ್ಥ ಮಹಿಳಾ ಭಜನಾ ಮಂಡಳಿ ಸದಸ್ಯರು ದೇವರನಾಮ ಹಾಡಿದರು. ಭಕ್ತರಿಗೆ ಶ್ರೀರಾಮ ಪ್ರಸಾದ ಮತ್ತು ಪುಳಿಯೋಗರೆ ವಿತರಿಸಲಾಯಿತು.
ಸಮಿತಿ ಸದಸ್ಯರಾದ ಲಕ್ಷ್ಮೀನಾರಾಣ ಜೋಷಿ, ಕೃಷ್ಣ ದರಬಾರಿ, ರಾಘವೇಂದ್ರ ಭಕ್ರಿ, ವೆಂಕಟೇಶ ಹುದ್ದಾರ, ಸುಧೀರ ಕೋಸ್ಗಿ, ನಾರಾಯಣ ಕವಿತಾಳ, ಶ್ರೀನಿವಾಸ ಕಠಾರೆ, ಅಂಬರೇಶ ನಾಯ್ಕೋಡಿ, ಮಲ್ಲಿಕಾರ್ಜುನ ಹೊಟ್ಟಿ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.