ADVERTISEMENT

ಯಾದಗಿರಿ: ಬಿಸಿಲ ಬೇಗೆಯಿಂದ ಪಾರಾಗಲು ತಣ್ಣನೆಯ ಮಣ್ಣಿನ ಮಡಕೆಗೆ ಸಾರ್ವಜನಿಕರ ಮೊರೆ

ಬಿ.ಜಿ.ಪ್ರವೀಣಕುಮಾರ
Published 30 ಮಾರ್ಚ್ 2025, 7:35 IST
Last Updated 30 ಮಾರ್ಚ್ 2025, 7:35 IST
ಯಾದಗಿರಿ ನಗರದ ಮೆಥೋಡಿಸ್ಟ್‌ ಚರ್ಚ್‌ ಮುಂಭಾಗದಲ್ಲಿ ಮಡಿಕೆ ಮಾರಾಟ ಮಾಡುತ್ತಿರುವುದು 
ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ
ಯಾದಗಿರಿ ನಗರದ ಮೆಥೋಡಿಸ್ಟ್‌ ಚರ್ಚ್‌ ಮುಂಭಾಗದಲ್ಲಿ ಮಡಿಕೆ ಮಾರಾಟ ಮಾಡುತ್ತಿರುವುದು  ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ನಂತರ ಬಿಸಿಲಿನ ತಾಪ ಹೆಚ್ಚುತ್ತಿದೆ. ಇದರಿಂದ ನೈಸರ್ಗಿಕವಾಗಿ ತಣ್ಣನೆಯ ನೀರು ಕುಡಿಯಲು ಗ್ರಾಹಕರು ಮಣ್ಣಿನ ಮಡಕೆ ಮೊರೆ ಹೋಗಿದ್ದಾರೆ. ಇದರಿಂದ ಮಣ್ಣಿನ ಮಡಕೆಗಳಿಗೆ ಬೇಡಿಕೆ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ಪ್ರತಿದಿನವೂ ಬೆಳಿಗ್ಗೆ 8 ಗಂಟೆಯಿಂದಲೇ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಮಾರ್ಚ್‌ ತಿಂಗಳಲ್ಲಿ 37 ರಿಂದ 38 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ 41 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಜಿಲ್ಲೆಯಲ್ಲಿ ಬೆಳಗ್ಗಿನ ಜಾವ ಮಾತ್ರ ತಣ್ಣನೆಯ ಅನುಭವ ಆಗುತ್ತದೆ. ಮಧ್ಯಾಹ್ನ ಸೂರ್ಯ ನೆತ್ತಿಗೇರಿದರೆ ಬಿಸಿಲಿನ ಝಳ ಅನುಭವವಾಗುತ್ತದೆ. ಬೆಳಿಗ್ಗೆ 8 ಗಂಟೆಯಿಂದ ಶುರುವಾರ ಬಿಸಿಲಿನ ಜಳ ರಾತ್ರಿ 8 ಗಂಟೆಯಾದರೂ ಕಡಿಮೆಯಾಗುವುದಿಲ್ಲ.

ADVERTISEMENT

ಮಧ್ಯಾಹ್ನದ ವೇಳೆಯಲ್ಲಿ ಬೆಂಕಿಯಂತೆ ಬಿಸಿಲು ಭಾಸವಾಗುತ್ತಿದೆ. ಇನ್ನೂ ನಾಲ್ಕೈದು ದಿನಗಳಲ್ಲಿ ಏಪ್ರಿಲ್‌ ತಿಂಗಳು ಆರಂಭವಾಗಲಿದ್ದು, ಮೇ ತಿಂಗಳಲ್ಲಿ ಬಿಸಿಲಿನ ಝಳ ಇನ್ನಷ್ಟು ಹೆಚ್ಚುತ್ತದೆ. ಇದರಿಂದ ಮಣ್ಣಿನ ಮಡಕೆಗಳ ಬೇಡಿಕೆ ಹೆಚ್ಚಾಗುತ್ತಿದೆ.

ಗ್ರಾಹಕರ ಅಭಿರುಚಿ: ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಮಣ್ಣಿನ ಮಡಕೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಗೋಲಾಕಾರ, ಉದ್ದನೆಯ ಹೂಜಿ ಆಕಾರದ, ನಳ ಹೊಂದಿರುವ ಮಡಕೆಗಳು ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕುಂಬಾರರು ಮಡಕೆಗಳನ್ನು ಸಿದ್ಧ ಮಾಡಿದ್ದಾರೆ.

ನಗರದ ಮೆಥೋಡಿಸ್ಟ್‌ ಚರ್ಚ್‌ ಮುಂಭಾಗದಲ್ಲಿ ಐದು ಕುಂಬಾರರ ಕುಟುಂಬಗಳು ಮಡಕೆಗಳನ್ನು ಮಾರಾಟ ಮಾಡುತ್ತಿವೆ. ರಾಜಸ್ಥಾನ, ಮಹಾರಾಷ್ಟ್ರದಿಂದ ಮಣ್ಣಿನ ಮಡಕೆಗಳನ್ನು ಬೇಸಿಗೆ ಸೀಸನ್‌ಗಾಗಿ ಆಮದು ಮಾಡಿಕೊಳ್ಳಲಾಗಿದೆ. ಅದರಲ್ಲೂ ರಾಜಸ್ಥಾನದ ಮಣ್ಣಿನ ಮಡಕೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಆಕರ್ಷಕ ಬಣ್ಣಗಳಿಂದ ಕೂಡಿದ್ದು, ಗ್ರಾಹಕರು ಹೆಚ್ಚು ಖರೀದಿ ಮಾಡುತ್ತಿದ್ದಾರೆ.

ಕಪ್ಪು ಮಣ್ಣಿನ ಮಾಡಿದ ಮಡಕೆಗಳನ್ನು ರಾಯಚೂರು ಜಿಲ್ಲೆಯ ಲಿಂಗಸೂಗುರು ತಾಲ್ಲೂಕಿನ ಗುಡಗುಂಟಿ ಭಾಗದಿಂದ ಆಮದು ಮಾಡಿಕೊಂಡರೆ, ಕೆಂಪು ಬಣ್ಣದ ಮಡಕೆಗಳನ್ನು ಸ್ಥಳೀಯವಾಗಿ ತಯಾರಿಸಲಾಗಿದೆ.

‘ಬೇಸಿಗೆ ಬಂದರೆ ಬಡವರ ಫ್ರಿಡ್ಜ್‌ ಮಣ್ಣಿನ ಮಡಕೆಗೆ ಬೇಡಿಕೆ ಹೆಚ್ಚುತ್ತದೆ. ಬಣ್ಣ ಬಣ್ಣದ ಚಿತ್ತಾರದಲ್ಲಿ ಕಂಗೊಳಿಸುತ್ತಿರುವ ಮಡಕೆಗಳು ದಾರಿಹೋಕರನ್ನು ಕೈ ಬಿಸಿ ಕರೆಯುತ್ತಿವೆ. ರೆಫ್ರಿಜಿರೇಟರ್‌ಗಿಂತ ಮಣ್ಣಿನ ಮಡಕೆಯ ನೀರು ಆರೋಗ್ಯಕ್ಕೂ ಒಳ್ಳೆಯದು ಎಂಬ ಕಾರಣಕ್ಕೆ ಜನರು ಮಣ್ಣಿನ ಮಡಕೆಗೆ ಮಹತ್ವ ನೀಡುತ್ತಿದ್ದಾರೆ’ ಎಂದು ಹೇಳುತ್ತಾರೆ ಕುಂಬಾರರು.

ಗಾತ್ರ ವಿನ್ಯಾಸಕ್ಕೆ ತಕ್ಕಂತೆ ₹50 ರಿಂದ ₹300ರ ವರೆಗೆ ಬೆಲೆ ನಿಗದಿಪಡಿಸಲಾಗಿದೆ. ಗ್ರಾಹಕರು ಚೌಕಾಶಿ ಮಾಡಿ ಖರೀದಿಸುತ್ತಿದ್ದಾರೆ.  ಒಂದು ದಿನಕ್ಕೆ10 ರಿಂದ 12 ಮಡಕೆ ಮಾರಾಟವಾಗುತ್ತವೆ
ಭಾರತಿ ಕುಂಬಾರ ವ್ಯಾಪಾರಿ
ಬಿರು ಬಿಸಿಲಿಗೆ ತಣ್ಣನೆಯ ಕುಡಿಯುವ ನೀರು ದೇಹ ಬೇಡುತ್ತದೆ. ಹೀಗಾಗಿ ಮಣ್ಣಿನ ಮಡಕೆಯ ಮೊರೆ ಹೋಗಿದ್ದು ಖರೀದಿಗೆ ಬಂದಿದ್ದೇನೆ
ಮಹೇಶ ಅಂಬೇಡ್ಕರ್‌ ನಗರ ಗ್ರಾಹಕ

ಮಣ್ಣಿನ ವಾಟರ್ ಬಾಟಲ್, ನೈಸರ್ಗಿಕ ಫಿಲ್ಟರ್

ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಮಣ್ಣಿನ ಮಡಕೆಗಳು ಮಾರುಕಟ್ಟೆಗೆ ಬಂದಿವೆ. ಕೆಲ ಸಣ್ಣಪುಟ್ಟ ತಾಲ್ಲೂಕುಗಳಲ್ಲಿ ಇನ್ನೂ ಮಣ್ಣಿನ ಮಡಕೆಗಳಿಗೆ ಬೇಡಿಕೆ ಬಂದಿಲ್ಲ.

ಮಣ್ಣಿನ ಮಡಕೆಗಳ ಜೊತೆಗೆ ಮಣ್ಣಿನ ವಾಟರ್ ಬಾಟಲ್, ಮಣ್ಣಿನಿಂದ ತಯಾರಿಸಿದ ನೀರಿನ ನೈಸರ್ಗಿಕ ಫಿಲ್ಟರ್, ಮಗ್‌, ಚಹಾ ಕಪ್‌ ಹೀಗೆ ವಿವಿಧ ಬಗೆಯ ದಿನ ಬಳಕೆಯ ಸಾಮಾನುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.

800 ಎಂಎಲ್‌, 1 ಲೀಟರ್‌ ಮಣ್ಣಿನ ನೀರಿನ ಬಾಟಲ್‌ಗಳು ಹೆಚ್ಚು ಮಾರಾಟವಾಗುತ್ತಿವೆ. ಹಣತೆ, ಧೂಪಾರತಿ, ಹುಂಡಿ, ಒಲೆ ಕೂಡ ಮಾರಾಟಕ್ಕೆ ಇಡಲಾಗಿದೆ. ಇಷ್ಟು ದಿನ ಬರೀ ಒಂದೇ ಶೈಲಿಯಲ್ಲಿ ಮಡಕೆ ಖರೀದಿಸುತ್ತಿದ್ದ ಜನರು ಆಧುನಿಕ ಶೈಲಿಯ ಮಣ್ಣಿನ ವಸ್ತುಗಳಿಗೆ ಮಾರುಹೋಗಿದ್ದಾರೆ.

ಮಣ್ಣಿನ ಮಡಕೆಗಳಿಗೆ ₹250 ರಿಂದ ₹500 ತನಕ ದರ ಇದೆ. ಒಂದು ತಿಂಗಳಿನಿಂದ ಮಡಕೆಗಳ ಭರ್ಜರಿ ಮಾರಾಟ ನಡೆಯುತ್ತಿದೆ. ಸ್ಥಳೀಯವಾಗಿ ಸಿಗುವ ಮಣ್ಣಿನ ಮಡಕೆಗಳು ಕಪ್ಪು ಬಣ್ಣದಿವೆ. ರಾಜಸ್ಥಾನದಿಂದ ಆಮದಾಗಿರುವ ಮಡಕೆಗಳು ಕೆಂಪು ಮತ್ತು ವಿವಿಧ ಆಕಾರ, ಚಿತ್ತಾಕರ್ಷಕ ರಂಗೋಲಿಗಳಿಂದ ಕಂಗೊಳಿಸುತ್ತಿವೆ. 20 ಲೀಟರ್‌ ಸಾಮರ್ಥ್ಯದ ಈ ಮಡಿಕೆಗಳ ಮೇಲೆ ಚಿತ್ತಾರ ಬಿಡಿಸಲಾಗಿರುತ್ತದೆ. ನೋಡಲು ಆಕರ್ಷಕವಾಗಿರುತ್ತವೆ. ನಲ್ಲಿ ಕೂಡಿಸಲಾಗಿರುತ್ತದೆ. ಅಡ್ಡೊಣಗಿ (ಸ್ಟ್ಯಾಂಡ್) ಸಹಿತ ₹400 ಬೆಲೆ ಇದೆ.

ರಾಜಸ್ಥಾನ, ಅಹಮದಾಬಾದ್‌ನಿಂದ ಮಡಕೆಗಳನ್ನು ತರಿಸುತ್ತಾರೆ. ಅಲ್ಲಿನ ಮಣ್ಣು ಮಡಕೆಗೆ ಪ್ರಶಸ್ತವಾಗಿದೆ. ನೀರು ಹೆಚ್ಚು ತಂಪಾಗಿರುತ್ತದೆ. ನಾಲ್ಕೈದು ವರ್ಷದವರೆಗೂ ಬಾಳಿಕೆ ಬರುತ್ತದೆ ಎನ್ನುತ್ತಾರೆ ಕುಂಬಾರರು.

₹15-20 ಗೆ ಒಂದು ಗ್ಲಾಸ್, ₹200ರಿಂದ ₹250 ಮಣ್ಣಿನ ನೀರಿನ ಬಾಟಲ್, ಸಾಮಾನ್ಯ ಚಿಕ್ಕ ಗಡಿಗೆ ₹50-60, ಹೂವಿನ ಕುಂಡ ₹70-80 ದರ ಇದೆ.

ಯುಗಾದಿ, ಶಿವರಾತ್ರಿ, ಬೇಸಿಗೆ ಸಂದರ್ಭದಲ್ಲಿ ನಮ್ಮ ಮಡಿಕೆ, ಗಡಿಗೆಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಅಲ್ಲದೆ ಬೆಳಿಗ್ಗೆ ಮತ್ತು ಸಂಜೆ ಹೆಚ್ಚು ವ್ಯಾಪಾರ ಆಗುತ್ತದೆ ಎಂದು ಕುಂಬಾರರು ತಿಳಿಸುತ್ತಾರೆ.

‘ನಗರದ ಕುಂಬಾರ ವಾಡಿ 10–15 ಮನೆಗಳಿವೆ. ಇಲ್ಲಿ ಗೋದಾಮುನಲ್ಲಿ ಮಡಿಕೆಗಳನ್ನು ಸಂಗ್ರಹ ಮಾಡುತ್ತೇವೆ. ಆದರೆ, ನಮಗೆ ನಗರಸಭೆ ಸೇರಿದಂತೆ ಜಿಲ್ಲಾಡಳಿತದಿಂದ ಯಾವುದೇ ಮೂಲಸೌಲಭ್ಯ ಕಲ್ಪಿಸಿಲ್ಲ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.