ADVERTISEMENT

ಯಾದಗಿರಿ: ಅನಧಿಕೃತ ಗೂಡಂಗಡಿ ತೆರವಿಗೆ ಆಗ್ರಹ

ಮನವಿ ಸಲ್ಲಿಸಿದರೂ ಸಮಸ್ಯೆಗೆ ಸಿಗದ ಪರಿಹಾರ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 4:02 IST
Last Updated 14 ಡಿಸೆಂಬರ್ 2021, 4:02 IST
ಶಹಾಪುರ ನಗರದ ಹಳೆ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಚಹಾ ಅಂಗಡಿ
ಶಹಾಪುರ ನಗರದ ಹಳೆ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಚಹಾ ಅಂಗಡಿ   

ಯಾದಗಿರಿ: ಜಿಲ್ಲೆಯ ಶಹಾಪುರ ನಗರದ ಪ್ರಮುಖ ವೃತ್ತ ಹಾಗೂ ರಸ್ತೆಗಳ ಎರಡೂ ಬದಿಯಲ್ಲಿರುವ ಅನಧಿಕೃತ ಗೂಡಂಗಡಿಗಳಿಂದಾಗಿ ತೊಂದರೆ ಅನುಭವಿಸುವಂತಾಗಿದೆ ವ್ಯಾಪಾರಿಗಳು ದೂರಿದ್ದಾರೆ.

ನಗರದ ಅಂಗಡಿ, ಕಾಂಪ್ಲೆಕ್ಸ್‌ಗಳ ಮುಂಭಾಗದಲ್ಲಿ ಎಲ್ಲೆಂದರಲ್ಲಿ ಗೂಡಂಗಡಿಗಳನ್ನು ನಿಲ್ಲಿಸಿ ವ್ಯಾಪಾರ ಮಾಡುತ್ತಿರುವುದರಿಂದ ಈ ಗೂಡಂಗಡಿಗಳ ಹಿಂಬದಿಯ ಮಳಿಗೆದಾರರು ಸಮಸ್ಯೆ ಅನುಭವಿಸುವಂತಾಗಿದೆ. ನಗರದ ಹಳೆಯ ಬಸ್ ನಿಲ್ದಾಣದ ಎದುರುಗಡೆ ಚಾಮನಾಳ ಕಾಂಪ್ಲೆಕ್ಸ್‌ನಲ್ಲಿ ಔಷಧ ಅಂಗಡಿ, ಆಸ್ಪತ್ರೆ, ಕ್ವಾಲಿಟಿ ಸ್ಯ್ಕಾನಿಂಗ್ ಸೆಂಟರ್ ಸೇರಿ ಇತರ ಅಂಗಡಿಗಳಿವೆ. ಇದರ ಎದುರುಗಡೆ ಅನಧಿಕೃತವಾಗಿ ಚಹಾ ಬಂಡಿ ಇಟ್ಟುಕೊಂರುವುದರಿಂದ ಹತ್ತಾರು ಜನ ಚಹಾ ಕುಡಿಯಲು ಬರುತ್ತಾರೆ. ಇದರಿಂದ ಔಷಧ ಅಂಗಡಿ, ಆಸ್ಪತ್ರೆ, ಸ್ಯ್ಕಾನಿಂಗ್ ಸೆಂಟರ್‌ ಮಹಿಳೆಯರು ಹೋಗಿ ಬರುಲು ಮುಜುಗರ ಅನುಭವಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ದೂರಿದ್ದಾರೆ.

ಚಹಾ ಬಂಡಿಗೆ ಚಹಾ ಕುಡಿಯಲು ಬರುವವರು ಧೂಮಪಾನ ಮಾಡುತ್ತಾರೆ. ಚಹಾ ಕಪ್‍ಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ತುಂಬಾ ಗಲೀಜಾಗುತ್ತಿದೆ. ಆಸ್ಪತ್ರೆಗೆ ಬರುವವರಿಗೆ ಅಲ್ಲಿನ ದುರ್ವಾಸನೆಯಿಂದ ಇನ್ನೂ ಬೇರೆ ಬೇರೆ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಆತಂಕದಲ್ಲಿಯೇ ಬಂದು ಹೋಗುತ್ತಿದ್ದಾರೆ. ಈ ಕುರಿತು ಹಲವರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎನ್ನುವುದು ವ್ಯಾಪಾರಿಗಳ ದೂರಾಗಿದೆ.

ADVERTISEMENT

‘ಗರ್ಭಿಣಿಯರು ಔಷಧ ಅಂಗಡಿಗೆ ಬರಲು ತೊಂದರೆಯಾಗುತ್ತಿದೆ. ಅಲ್ಲದೆ, ಗಲೀಜು ಜಾಸ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದೆ’ ಎನ್ನುತ್ತಾರೆ ನ್ಯೂ ಮೈಸೂರು ಮೆಡಿಕಲ್‌ ಮಾಲೀಕ ಮಹಮ್ಮದ್ ಖಾಜಾ ಹುಸೇನ್.

ಸಂಬಂಧಪಟ್ಟ ಇಲಾಖೆಯವರು ಕೂಡಲೇ ಪ್ರಮುಖ ರಸ್ತೆಗಳಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಗೂಡಂಗಡಿ ತೆರವುಗೊಳಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

*
ಈ ಹಿಂದೆ 2ಬಾರಿ ಗೂಡಂಗಡಿ ತೆರವುಗೊಳಿಸಲಾಗಿತ್ತು. ಮತ್ತೆ ಈಗ ಪೊಲೀಸ್‌ ಭದ್ರತೆಯಲ್ಲಿ ತೆರವುಗೊಳಿಸಲಾಗುವುದು
- ಓಂಕಾರ ಪೂಜಾರಿ, ಪೌರಾಯುಕ್ತ, ಶಹಾಪುರ ನಗರಸಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.