ADVERTISEMENT

ಯಾದಗಿರಿ| ಜಿಲ್ಲಾ ಮಟ್ಟದ ಕ್ರೀಡಾಕೂಟ: ಅದ್ವಾನಗಳ ನಡುವೆ ಸಾಗಿದ ಆಟೋಟಗಳು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 5:52 IST
Last Updated 14 ಅಕ್ಟೋಬರ್ 2025, 5:52 IST
<div class="paragraphs"><p>ಯಾದಗಿರಿಯ&nbsp; ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ&nbsp;ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟದ ಕ್ರೀಡಾಜ್ಯೋತಿಯನ್ನು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಸ್ವೀಕರಿಸಿದರು.&nbsp;</p></div>

ಯಾದಗಿರಿಯ  ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟದ ಕ್ರೀಡಾಜ್ಯೋತಿಯನ್ನು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಸ್ವೀಕರಿಸಿದರು. 

   

ಯಾದಗಿರಿ: ಬೆಳಿಗ್ಗೆ 10ಕ್ಕೆ ಶುರುವಾಗಬೇಕಿದ್ದ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ 11.45ಕ್ಕೆ ಆರಂಭವಾಯಿತು. ನೆತ್ತಿ ಸುಡುವ ಉರಿಬಿಸಿನಲ್ಲಿಯೇ ಕುಳಿತು ಕ್ರೀಡಾಪಟು ವಿದ್ಯಾರ್ಥಿಗಳು ವೇದಿಕೆ ಕಾರ್ಯಕ್ರಮ ವೀಕ್ಷಿಸಿದರು. ಗಂಟೆಗಟ್ಟಲೇ ಬಿಸಿಲಲ್ಲಿ ಕುಳಿತ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿಲ್ಲ. ಕಲ್ಲಿನ ದೊಡ್ಡ ಹರಳುಗಳ ಮೈದಾನದಲ್ಲಿ ಆಟವಾಡಿದ ವಿದ್ಯಾರ್ಥಿಗಳು...

ಇದು ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ 14/17 ವರ್ಷ ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ ನಡೆಯುತ್ತಿದ್ದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಕಂಡುಬಂದ ದೃಶ್ಯಗಳು.

ADVERTISEMENT

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಾರ್ಯಾಲಯ ಮತ್ತು ಯಾದಗಿರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಈ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾಂಗಣದಲ್ಲಿ ಕಂಡುಬಂದ ಅದ್ವಾನಗಳಿಗೆ ಮಕ್ಕಳನ್ನು ಕರೆತಂದಿದ್ದ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಮಕ್ಕಳ ಆಟವನ್ನು ನೋಡಲು ಬಂದಿದ್ದವರು ಬೇಸರ ವ್ಯಕ್ತಪಡಿಸಿದರು.‌

ಕ್ರೀಡಾಕೂಟಕ್ಕೆ ಚಾಲನೆ ಕೊಟ್ಟು ಕ್ರೀಡಾಜ್ಯೋತಿ ಹಸ್ತಾಂತರ, ಪ್ರತಿಜ್ಞಾವಿಧಿ ಬೋಧಿಸುವವರೆಗೂ ವಿದ್ಯಾರ್ಥಿಗಳು ತಾಳ್ಮೆಯಿಂದ ಕುಳಿತರು. ಗಣ್ಯರ ಭಾಷಣ ಆರಂಭ ಆಗುತ್ತಿದ್ದಂತೆ ಬಿಸಿಲಿನ ಪ್ರಖರತೆ ಹೆಚ್ಚಾಗಿ, ಕುಡಿಯಲು ನೀರು ಕೊಡದೆ ಇದ್ದಾಗ ಎದ್ದು ಹೊರಟರು. ಮುಜುಗರದಿಂದ ತಪ್ಪಿಸಿಕೊಳ್ಳಲು ಕೆಲವು ದೈಹಿಕ ಶಿಕ್ಷಣ ಶಿಕ್ಷಕರು ವಿದ್ಯಾರ್ಥಿಗಳನ್ನು ಗದರಿಸಿ ಕೂರಿಸುವ ಪ್ರಯತ್ನ ಮಾಡಿದ್ದರು. ಆದರೂ ವಿದ್ಯಾರ್ಥಿಗಳು ಕಾಲ್ಕಿತ್ತರು. 

‘ಇಂತಹ ಬಿಸಿನಲ್ಲಿ ನೀರು ಕೊಡದೆ ಕೂರಿಸಿದರೆ ಹೇಗೆ ಸರ್? ಕೆಲವು ಮಕ್ಕಳು ಬೆಳಿಗ್ಗೆ 7ಕ್ಕೆ ಬಂದು ಅಂಕಣಗಳಿಗೆ ಸುಣ್ಣದ ಮಾರ್ಕರ್ ಹಾಕಿದ್ದಾರೆ. ಮನೆಗೆ ಹೋಗಿ ವಾಪಸ್ ಬಂದಿದ್ದಾರೆ. ಅಂಕಣಗಳಿಗೆ ಮಾರ್ಕರ್‌ಗಳನ್ನು ಕ್ರೀಡಾಂಗಣ ಸಿಬ್ಬಂದಿಯೇ ಹಾಕಬೇಕಿತ್ತು. ಆದರೆ, ಯಾರೂ ಸಹಕಾರ ಕೊಡಲಿಲ್ಲ. ಮಕ್ಕಳಿಗೆ ದ್ರೋಹ ಆಗಬಾರದೆಂದು ಕ್ರೀಡಾಕೂಟದ ಹಿಂದಿನ ದಿನದ ರಾತ್ರಿ 7ರವರೆಗೆ ನಾವೇ ಮಾರ್ಕರ್ ಹಾಕಿ, ಬೆಳಿಗ್ಗೆ ಮತ್ತೆ ಬಂದು ಪೂರ್ಣಗೊಳಿಸಿದ್ದೇವೆ’ ಎಂದು ಶಿಕ್ಷಕರೊಬ್ಬರು ಹೇಳಿದರು.

ಯುವಜನ ಸೇವಾ ಇಲಾಖೆಯ ಅಸಹಕಾರ: ‘ಮಾರ್ಕರ್ ಹಾಕಿಕೊಡುವಂತೆ ಯುವಜನಸೇವಾ ಇಲಾಖೆಗೆ ಪತ್ರ ಬರೆದರೂ ಸಹಕಾರ ಸಿಗಲ್ಲಿಲ್ಲ. ನಮ್ಮ ಬಳಿ ಸಿಬ್ಬಂದಿ ಇಲ್ಲ ನೀವೇ ಹಾಕಿಕೊಳ್ಳಿ ಎಂದರು. ಪಿಯು ಕಾಲೇಜು ಕ್ರೀಡಾಕೂಟದ ಬಳಿಕ ಸ್ವಚ್ಛತೆಯೂ ಮಾಡಿಸಿರಲಿಲ್ಲ. ನಗರ ಸಭೆ ಸಿಬ್ಬಂದಿಯನ್ನು ಕರೆಯಿಸಿ ನಾವೇ ಸ್ವಚ್ಘಗೊಳಿಸಿದ್ದೇವೆ’ ಎಂದು ಡಿಡಿಪಿಐ ಕಚೇರಿಯ ಪ್ರಭಾರ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಅನಿಲಕುಮಾರ ತಿಳಿಸಿದರು.

ಬಾರದ ಆಂಬುಲೆನ್ಸ್, ಶಾಸಕರು ಕಿಡಿ: ‘ಪಂದ್ಯಾವಳಿ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಗಂಭೀರವಾಗಿ ಗಾಯವಾಗಿ ತ್ವರಿತ ಚಿಕಿತ್ಸೆಯ ಅಗತ್ಯ ಇದ್ದಾಗ ಆಂಬುಲೆನ್ಸ್‌ ಸೇವೆ ಕಲ್ಪಿಸಬೇಕು. ಆದರೆ, ಆಂಬುಲೆನ್ಸ್‌ ಏಕೆ ವ್ಯವಸ್ಥೆ ಮಾಡಿಲ್ಲ? ಈ ಹಿಂದೆ ನಡೆದಿದ್ದ ಕ್ರೀಡಾಕೂಟದಲ್ಲಿಯೂ ಹೇಳಿದ್ದೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ವೇದಿಕೆಯ ಭಾಷಣದ ನಡುವೆ ಕಿಡಿಕಾರಿದರು.

ಯಾದಗಿರಿ ನಗರದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಸರಕು ವಾಹನದಲ್ಲಿ ಬಂದಿದ್ದ ವಿದ್ಯಾರ್ಥಿಗಳು

‘ಪಠ್ಯದ ಜತೆಗೆ ಕ್ರೀಡೆಗೂ ಪ್ರಾತಿನಿಧ್ಯ ನೀಡಿ’ ‌

‘ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ಮಧ್ಯ ಪಾಠಕ್ಕೆ ಸೀಮಿತವಾಗದೆ ಪಠ್ಯದ ಜೊತೆಗೆ ಕ್ರೀಡೆಗೂ ಪ್ರಾತಿನಿಧ್ಯ ನೀಡಬೇಕು. ದೇಹ ಆರೋಗ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಕ್ರೀಡೆ ಸಹಕಾರಿ ಆಗುತ್ತದೆ’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು. ಕ್ರೀಡಾಜ್ಯೋತಿಯನ್ನು ಸ್ವೀಕರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಮಕ್ಕಳು ಪಠ್ಯದ ಜತೆಗೆ ಆಟೋಟಗಲ್ಲೂ ಪ್ರತಿಭೆ ತೋರಬೇಕು. ಸದೃಢ ಶರೀರದಲ್ಲಿ ಸದೃಢ ಮನಸ್ಸಿರುತ್ತದೆ. ಪುಸ್ತಕದ ಜ್ಞಾನದಿಂದ ಇಂದು ಏನೂ ಸಾಧನೆ ಮಾಡಲಾಗದು. ಪಠ್ಯೇತರ ವಿಷಯಗಳಲ್ಲಿಯೂ ತೊಡಗಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ‘ಕ್ರೀಡೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು ವಿದ್ಯಾರ್ಥಿಗಳು ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆಲ್ಲುವ ಗುರಿಯನ್ನೂ ಹೊಂದಬೇಕು. ಸೋಲು-ಗೆಲುವ ಸಾಮಾನ್ಯ. ಆದರೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ. ಸೋತವರು ಹತಾಶರಾಗಬಾರದು’ ಎಂದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್ ಡಿಡಿಪಿಐ ಚನ್ನಬಸಪ್ಪ ಮುಧೋಳ ಯುವಜನಸೇವಾ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಬಾವಿಹಳ್ಳಿ ಸರ್ಕಾರದ ವಿವಿಧ ಇಲಾಖೆ ಹಾಗೂ ಶಿಕ್ಷಕರ ಸಂಘಗಳ ಅಧ್ಯಕ್ಷರಾದ ರಾಯಪ್ಪಗೌಡ ಹುಡೇದ ಅಶೋಕ ಕುಮಾರ ಕೆಂಭಾವಿ ಅದೆಪ್ಪ ಬಾಗ್ಲಿ ಮಲ್ಲಯ್ಯ ಸಂಜೀವಿನಿ ಹಣಮಂತ ಹೊಸಮನಿ ಸುರೇಶ ಪೊಲೀಸ್ ಶರಣಗೌಡ ಯಂಕಪ್ಪ ದೊಡ್ಮನಿ ಭೀಮರಾಯ ಬೊಮ್ಮನ ಶ್ರೀಕಾಂತ ಉಪಸ್ಥಿತರಿದ್ದರು.

ಸರಕು ವಾಹನ ಏರಿಬಂದ ವಿದ್ಯಾರ್ಥಿಗಳು!

ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಕೆಲವು ಶಾಲೆಗಳ ಶಿಕ್ಷಕರು ಮಕ್ಕಳನ್ನು ತೆರೆದ ಸರಕು ವಾಹನಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಕರೆತಂದರು. ತಾಲ್ಲೂಕು ಮಟ್ಟದಲ್ಲಿ ವಿಜೇತರಾದ ಶಾಲಾ ಮಕ್ಕಳ ಪೈಕಿ ಬಹುತೇಕರು ಕ್ರೂಸರ್‌ಗಳಲ್ಲಿ ಬಂದಿದ್ದರು. ಮತ್ತೆ ಕೆಲವರು ಬುಲೆರೊ ಟಾಟಾ ಏಸ್‌ ತೆರೆದ ಸರಕು ವಾಹನಗಳಲ್ಲಿ ಕರೆತಂದರು. ಒಂದೊಂದು ವಾಹನದಲ್ಲಿ 15ರಿಂದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ವಾಹನದ ಹಿಂಬದಿಯ ಕೆಳಗಡೆ ಮತ್ತು ಹಲಗೆಯ ಮೇಲೂ ಕುಳಿತು ವಿದ್ಯಾರ್ಥಿಗಳು ಪ್ರಯಾಣಿಸಿ ಬಂದ ದೃಶ್ಯ ಕಂಡುಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.