ಯಾದಗಿರಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬೆಳಕಿನ ಹಬ್ಬವಾದ ದೀಪಾವಳಿ ಸಂಭ್ರಮ ಕಳೆಗಟ್ಟುತ್ತಿದೆ. ಸಾರ್ವಜನಿಕರು ಸಂಭ್ರಮದಿಂದ ಹಬ್ಬ ಆಚರಿಸಲು ಮಾರುಕಟ್ಟೆಯಲ್ಲಿ ಸೋಮವಾರ ಖರೀದಿಯ ಭರಾಟೆ ಜೋರಾಗಿತ್ತು.
ದೀಪಾವಳಿ ಹಬ್ಬದ ಭಾಗವಾದ ಲಕ್ಷ್ಮಿಪೂಜೆ, ನರಕ ಚತುರ್ದಶಿ, ಬಲಿಪಾಡ್ಯಮಿ ಸಿದ್ಧತೆಗಳು ಜೋರಾಗಿವೆ. ವರ್ತಕ ಲಕ್ಷ್ಮಿಪೂಜೆಗೆ ಅಗತ್ಯವಾದ ಸಿದ್ಧತೆಗಳು ಪೂರ್ಣಗೊಂಡಿವೆ.
ನಗರದ ನೇತಾಜಿ ಸುಭಾಷ್ ವೃತ್ತ, ಹೊಸಳ್ಳಿ ಕ್ರಾಸ್, ರೈಲ್ವೆ ನಿಲ್ದಾಣ ರಸ್ತೆ, ಗಂಜ್ ವೃತ್ತದಲ್ಲಿ ಹಬ್ಬಕ್ಕೆ ಬೇಕಾಗಿರುವ ಸಾಗ್ರಿಗಳ ಖರೀದಿಯಲ್ಲಿ ಜನರು ನಿರತವಾಗಿದ್ದರು. ಗ್ರಾಮೀಣ ಭಾಗದಿಂದ ಬೈಕ್, ಆಟೊಗಳಲ್ಲಿ ಆಗಮಿಸಿದ ಜನರು ಬಟ್ಟೆ, ಪಟಾಕಿ, ಹೂವು, ಹಣ್ಣು, ಪೂಜಾ ಸಾಮಾಗ್ರಿಗಳ ಖರೀದಿಯಲ್ಲಿ ತೊಡಗಿಸಿಕೊಂಡಿರುವುದು ಸಾಮಾನ್ಯವಾಗಿತ್ತು.
ಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ಆಕಾಶ ಬುಟ್ಟಿ ದೀಪಗಳು, ಹಣತೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಸಾರ್ವಜನಿಕರು ಸಾಂಪ್ರದಾಯಿಕ ಮಣ್ಣಿನ ದೀಪಗಳ ಖರೀದಿಗೂ ಉತ್ಸಾಹ ತೋರುತ್ತಿದ್ದಾರೆ. ನಗರದ ಅಂಗಡಿ, ಬೀದಿಗಳಲ್ಲಿ ಮಣ್ಣಿನ ದೀಪಗಳ ಮಾರಾಟ ಕಂಡುಬಂತು. ₹ 10ಕ್ಕೆ ನಾಲ್ಕು ಹಣತೆಗಳಿಂದ ₹ 20 ಎರಡು ಹಣತೆಗಳ ವರೆಗೆ ಮಾರಾಟ ಆದವು.
ಲಕ್ಷ್ಮಿ ಪೂಜೆಯಲ್ಲಿ ಹಣುಗಳು ಬಹು ಅಗತ್ಯವಾಗಿವೆ. ಒಂದು ಡಜನ್ ಬಾಳೆ ಹಣ್ಣು ₹ 50 ದರದಲ್ಲಿ ಮಾರಾಟ ಆಗುತ್ತಿದೆ. ಒಂದು ಕೆ.ಜೆ. ಪೇರಲ ಹಣ್ಣಿಗೆ ₹ 50 ಇದೆ. ಐದು ದಾಳಿಂಬೆಗೆ ₹ 100, ಐದು ಮೊಸಂಬಿ ಹಣ್ಣಿಗೆ ₹ 100, ನಾಲ್ಕು ಸೇಬು ಹಣ್ಣಿಗೆ ₹ 100 ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.
ದಟ್ಟ ಹಳದಿ, ಕಿತ್ತಳೆ, ಬಿಳಿ, ಕೇಸರಿ, ಕೆಂಪು, ಗೋಲ್ಡನ್ ಬಣ್ಣದ ದುಂಡು– ದುಂಡಾದ ಚೆಂಡು ಹೂವುಗಳು ಮಾರುಕಟ್ಟೆಯಲ್ಲಿ ರಾರಾಜಿಸಿದವು. ಚಂಡು ಹೂವು ಜತೆಗೆ ಬಿಳಿ ಮತ್ತು ಹಳದಿ ಬಣ್ಣದ ಸೇವಂತಿ, ಗುಲಾಬಿ, ಕಾಕಡ, ಮಲ್ಲಿಗೆ ಹೂವುಗಳ ಹೂವಿನ ವ್ಯಾಪಾರದ ಘಮಲು ಜೋರಾಗಿತ್ತು.
ಬೂದುಗುಂಬಳ ಗಾತ್ರದ ಆಧಾರದ ಮೇಲೆ ₹ 20ಯಿಂದ ₹200 ರವರೆಗೆ ಮಾರಾಟ ಮಾಡಲಾಗುತ್ತಿದೆ. ಜೋಡಿ ಕಬ್ಬು, ಬಾಳೆದಿಂಡಿಗೆ ₹ 100 ನಿಗದಿಪಡಿಸಲಾಗಿದೆ. 5 ನಿಂಬೆ ಹಣ್ಣಿಗೆ ₹ 20, ಜೋಡಿ ಕಬ್ಬಿಗೆ ₹ 50, ಪೂಜೆಗೆ ಬೇಕಾದ ತೆಂಗಿನ ಕಾಯಿ ₹ 50, ಪ್ರತಿ 50 ಗ್ರಾಂ ಕುಂಕುಮ, ಕೇಸರಿ, ಭಂಡಾರ ₹ 30ಯಂತೆ ಮಾರಾಟ ಆಗುತ್ತಿರುವುದು ಕಂಡುಬಂತು.
ಪಟಾಕಿಗಳ ಖರೀದಿಯೂ ಜೋರು
ಬೆಳಕಿನ ಹಬ್ಬವಾದ ದೀಪಾವಳಿ ಅಂಗವಾಗಿ ನಗರದಲ್ಲಿ ಪಟಾಕಿಗಳ ಖರೀದಿ ಭರಾಟೆಯೂ ಜೋರಾಗಿದೆ. ನಗರದ ರಾಯಚೂರು ರಸ್ತೆ ಬದಿಯ ಖಾಲಿ ಜಾಗದಲ್ಲಿ 20ಕ್ಕೂ ಹೆಚ್ಚು ಪಟಾಕಿ ಮಳಿಗೆಗಳು ತಲೆ ಎತ್ತಿವೆ. ಮಕ್ಕಳು ವಯಸ್ಕರು ಸೇರಿದಂತೆ ವಿವಿಧ ವಯೋಮಾನದವರು ಮಳಿಗೆಗಳಿಗೆ ಭೇಟಿ ನೀಡಿ ಬಗೆಬಗೆಯ ಪಟಾಕಿಗಳನ್ನು ಖರೀದಿ ಮಾಡುತ್ತಿದ್ದಾರೆ. ಗಸದಲ್ಲಿ ಚಿತ್ತಾರ ಮೂಡಿಸುವ ಹೂಮಳೆಗರೆವಂಥಾ ದೃಶ್ಯ ಸೃಷ್ಟಿಸುವ ನೈಫ್ ಪಟಾಕಿ ಆಟಂ ಬಾಂಬ್ ಸುತುಳಿ ಆಟಂ ಬಾಂಬ್ ಬೀಡಿ ಆಟಂ ಬಾಂಬ್ ಲಕ್ಷ್ಮೀ ಪಟಾಕಿ ಗಿಟಾರ್ ಡಕ್ ಫ್ಯಾಂಟಸಿ ಪಟಾಕಿ ರಾಕೆಟ್ ಫ್ಲವರ್‌ಪಾಟ್ ಸೇರಿದಂತೆ ಬಗೆ ಬಗೆಯ ಪಟಾಕಿಗಳು ಮಾರಾಟ ಆಗುತ್ತಿವೆ. ‘ಕಳೆದ ವರ್ಷಕ್ಕಿಂತ ಈ ಬಾರಿ ಅಂಗಡಿಗಳ ಸಂಖ್ಯೆ ಹೆಚ್ಚಾಗಿದೆ. ಕುಟುಂಬ ಸಮೇತರಾಗಿ ಬಂದು ತಮಗೆ ಬೇಕಾದ ಪಟಾಕಿಗಳನ್ನು ಜನರು ಖರೀದಿ ಮಾಡುತ್ತಿದ್ದಾರೆ. ಆನ್‌ಲೈನ್ ಇರುವುದು ಮಾರಾಟಕ್ಕೆ ಸ್ವಲ್ಪ ಹೊಡೆತ ಬಿದ್ದಿದೆ. ಬಟ್ಟೆ ವ್ಯಾಪಾರಿಗಳಿಗೆ ಹೊಲಿಸಿಕೊಂಡರೆ ಪಟಾಕಿ ವ್ಯಾಪಾರಿಗಳು ಪರವಾಗಿಲ್ಲ’ ಎನ್ನುತ್ತಾರೆ ಪಟಾಕಿ ವರ್ತಕ ಮಂಜುನಾಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.