ADVERTISEMENT

ಸುರಪುರ: ‘ವಿಜಯೋತ್ಸವಕ್ಕೆ ಸರ್ಕಾರದ ಹಣ ಬೇಡ’

ಸುರಪುರ ವಿಜಯೋತ್ಸವ; ಬಾಸ್ಕರರಾವ ಮುಡಬೂಳ ವಿಭಿನ್ನ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 6:24 IST
Last Updated 9 ಫೆಬ್ರುವರಿ 2023, 6:24 IST
ಸುರಪುರದ ಖಾಸಗಿ ಹೊಟೆಲ್‍ನಲ್ಲಿ ಬುಧವಾರ ಏರ್ಪಡಿಸಿದ್ದ ಸುರಪುರ ವಿಜಯೋತ್ಸವ ಕಾರ್ಯಕ್ರಮದಲ್ಲಿ ‘ಸುರಪುರ ಗಿರಿದುರ್ಗ ದರ್ಶನ’ ಪುಸ್ತಕ ಬಿಡುಗಡೆ ಮಾಡಲಾಯಿತು
ಸುರಪುರದ ಖಾಸಗಿ ಹೊಟೆಲ್‍ನಲ್ಲಿ ಬುಧವಾರ ಏರ್ಪಡಿಸಿದ್ದ ಸುರಪುರ ವಿಜಯೋತ್ಸವ ಕಾರ್ಯಕ್ರಮದಲ್ಲಿ ‘ಸುರಪುರ ಗಿರಿದುರ್ಗ ದರ್ಶನ’ ಪುಸ್ತಕ ಬಿಡುಗಡೆ ಮಾಡಲಾಯಿತು   

ಸುರಪುರ: ‘ಸುರಪುರ ವಿಜಯೋತ್ಸವ ಸರ್ಕಾರವೇ ಆಚರಿಸಲಿ ಎಂಬುದಕ್ಕೆ ನನ್ನ ಸಹಮತವಿಲ್ಲ. ಸರ್ಕಾರದ ಅನುದಾನ ಪಡೆದರೆ ಶಿಷ್ಟಾಚಾರ ಪಾಲಿಸಬೇಕಾಗುತ್ತದೆ. ವಿಜಯೋತ್ಸವ ರಾಜಕೀಯಗೊಳ್ಳುತ್ತದೆ’ ಎಂದು ಇತಿಹಾಸ ಸಂಶೋಧಕ ಭಾಸ್ಕರರಾವ ಮುಡಬೂಳ ವಿಭಿನ್ನ ಹೇಳಿಕೆ ನೀಡಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ಭೀಮರಾಯನಗುಡಿಯ ಸುರಪುರ ಇತಿಹಾಸ ಸಂಶೋಧನಾ ಕೇಂದ್ರ ಮತ್ತು ಓಕುಳಿ ಪ್ರಕಾಶನ ಏರ್ಪಡಿಸಿದ್ದ ‘ಸುರಪುರ ವಿಜಯೋತ್ಸವ’ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ
ನೀಡಿದರು.

‘ಸಾವರ್ಕರ್ ಬರೆದ ಪುಸ್ತಕದಲ್ಲಿ ನಾಲ್ವಡಿ ರಾಜಾ ವೆಂಕಟಪ್ಪನಾಯಕರ ಉಲ್ಲೇಖವಿದೆ. ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯ ಮತ್ತು ಸಾಲಾರಜಂಗ್ ಮ್ಯೂಸಿಯಂನಲ್ಲಿ ಸುರಪುರ ಇತಿಹಾಸದ ಬಗ್ಗೆ ವಿಪುಲ ಮಾಹಿತಿ ಸಿಗುತ್ತದೆ. ಶಂಶೋಧನಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕನ್ನಡ ಸಾಹಿತ್ಯ ಸಂಘದಿಂದ ಸುರಪುರ ಇತಿಹಾಸ ಕುರಿತು ಸಮಗ್ರ ಮಾಹಿತಿಯ ದೊಡ್ಡ ಸಂಪುಟವನ್ನು ಹೊರತರುತ್ತೇವೆ ಎಂದು ಹೇಳಿದ ಹೈಕೋರ್ಟ್ ವಕೀಲ ಜೆ. ಅಗಸ್ಟಿನ್, ಹಳೇ ಪೋಸ್ಟ್ ಆಫೀಸ್ ಕಟ್ಟಡದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು, ದೆಹಲಿಯ ಸ್ವಾತಂತ್ರ್ಯ ಉದ್ಯಾನದಲ್ಲಿ ನಾಲ್ವಡಿ ರಾಜಾ ವೆಂಕಟಪ್ಪನಾಯಕರ ಭಾವಚಿತ್ರ ಹಾಕಬೇಕು ಎಂದು ಆಗ್ರಹಿಸಿದರು.

ಹಳೇ ಆಸ್ಪತ್ರೆಯಲ್ಲಿ ಇರುವ ವಿಜಯಸ್ತಂಭಕ್ಕೆ ಮಾಲಾರ್ಪಣೆ ಮಾಡಿದ ನಂತರವೇ ಎಲ್ಲ ಸರ್ಕಾರಿ ಸಮಾರಂಭಗಳು ಆರಂಭವಾಗಬೇಕೆನ್ನುವ ನಿರ್ಣಯ ತೆಗೆದುಕೊಳ್ಳಬೇಕು. ಎಲ್ಲರೂ ಸೇರಿ ಈಗಿನ ನಾಲ್ವಡಿ ರಾಜಾ ವೆಂಕಟಪ್ಪನಾಯಕ ಅವರ ಪುತ್ಥಳಿಯನ್ನು ಇನ್ನಷ್ಟು ಪರಿಪೂರ್ಣವಾಗಿ ಕೆತ್ತಿಸಿ ಸ್ಥಾಪಿಸೋಣ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ ಅವರು ಹೇಳಿದರು.

ಲೇಖಕ ರಾಜಗೋಪಾಲ ವಿಭೂತಿ ಮಾತನಾಡಿ, ‘ಅವಿಭಜಿತ ಸುರಪುರ ತಾಲ್ಲೂಕು ಪ್ರಾಗೈತಿಹಾಸಿಕ ಕೇಂದ್ರವಾಗಿದೆ. ಡಾ. ಪೆದ್ದಯ್ಯ ಅವರಿಗೆ ಈ ಕುರಿತು ನಡೆಸಿದ ಸಂಶೋಧನೆಗೆ ಪದ್ಮಶ್ರೀ ಸೇರಿ ಅನೇಕ ಪುರಸ್ಕಾರಗಳು ಲಭಿಸಿವೆ. ಇನ್ನಷ್ಟು ಇತಿಹಾಸ ಬೆಳಕಿಗೆ ಬರಬೇಕು ಎಂದು ಅವರು ಹೇಳಿದರು .

ಸಾಹಿತಿಗಳಾದ ಸಿದ್ಧರಾಮ ಹೊನ್ಕಲ್, ಮಹ್ಮದ್ ಇಕ್ಬಾಲ್ ರಾಹಿ ಮತ್ತು ರಾಜಾ ಪಿಡ್ಡನಾಯಕ ಪ್ಯಾಪ್ಲಿ ಪ್ರಶ್ನೆಗಳನ್ನು ಕೇಳಿ ಸಂದೇಹಗಳನ್ನು ಬಗೆಹರಿಸಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ರಾಜ ವಂಶಸ್ಥ ರಾಜಾ ಲಕ್ಷ್ಮೀನಾರಾಯಣನಾಯಕ, ರಾಜಗೋಪಾಲ ವಿಭೂತಿ ಬರೆದ ‘ಸುರಪುರ ಗಿರಿದುರ್ಗ ದರ್ಶನ’ ಪುಸ್ತಕ ಬಿಡುಗಡೆ ಮಾಡಿದರು.

ಗರುಡಾದ್ರಿ ಚಿತ್ರಕಲಾವಿದ ವಿಜಯ ಹಾಗರಗುಂಡಗಿ ಕಾರ್ಯಕ್ರಮ ಉದ್ಘಾಟಿಸಿದರು.

ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಕೃಷ್ಣ ಸುಬೇದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮರೇಶ ಚಿಲ್ಲಾಳ ನಿರೂಪಿಸಿ, ವಂದಿಸಿದರು.

ಸುರಪುರ ಭಾಗದ ಸಾಹಿತಿ, ಸಂಶೋಧಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.