
ಶಹಾಪುರ: ಸಚಿವ ಸಂಪುಟದಲ್ಲಿ ತಾಲ್ಲೂಕಿನ ದೋರನಹಳ್ಳಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಿದ್ದಕ್ಕೆ ಜನರ ಮೊಗದಲ್ಲಿ ತುಸು ಖುಷಿಯ ಜತೆಗೆ ಅಸಮಾಧಾನದ ಗೆರೆಯೂ ಮೂಡಿದೆ.
ಗ್ರಾಮ ಪಂಚಾಯಿಗೆ ಹರಿದು ಬರುವಷ್ಟು ಅನುದಾನ ಪಟ್ಟಣ ಪಂಚಾಯಿತಿಗೆ ಬರುವುದಿಲ್ಲ. ಮುಖ್ಯವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಕೂಲಿ ಕೆಲಸದಿಂದ ವಂಚಿತಗೊಳ್ಳುವ ಬೇಸರ ಬಡ ಕೂಲಿ ಕಾರ್ಮಿಕ ವರ್ಗದಲ್ಲಿ ಮೂಡಿದೆ.
ದೊಡ್ಡ ಹೋಬಳಿ ಕೇಂದ್ರವಾಗಿದ್ದು, 18 ಹಳ್ಳಿಗಳು ದೋರನಹಳ್ಳಿ ವ್ಯಾಪ್ತಿಯಲ್ಲಿ ಬರುತ್ತವೆ. ಪ್ರಸ್ತುತ 21,360 ಜನಸಂಖ್ಯೆ ಇದ್ದು, 35 ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿದ್ದಾರೆ. 17 ಜನ ಸಿಬ್ಬಂದಿ ಸದ್ಯ ಕೆಲಸ ಮಾಡುತ್ತಿದ್ದಾರೆ.
ಸರ್ಕಾರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಿದೆ. ಅಭಿವೃದ್ಧಿಯ ಕಾರ್ಯಗಳು ದಾಪುಗಾಲು ಇರಿಸುವ ನಿರೀಕ್ಷೆಯ ಭಾರ ಇರಿಸಿಕೊಂಡಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.
‘ವಿಚಿತ್ರವೆಂದರೆ, 2007-08ರಲ್ಲಿ ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿ ರಸ್ತೆ ಅಗಲೀಕರಣದ ವೇಳೆ ಗ್ರಾಮ ಪಂಚಾಯಿತಿ ಕಟ್ಟಡದ ಕೆಲ ಜಾಗವನ್ನು ತೆರವುಗೊಳಿಸಿದ್ದರು. ಇದರಿಂದ ಪಂಚಾಯಿತಿಯ ಸಾಮಾನ್ಯ ಸಭೆ, ಗ್ರಾಮ ಸಭೆ, ಇತರೆ ಕಾರ್ಯಗಳನ್ನು ನಡೆಸಲು ಆಗದ ಸ್ಥಿತಿಯಲ್ಲಿ ಕಟ್ಟಡವಿದೆ. ಪಟ್ಟಣ ಪಂಚಾಯಿತಿ ಭಾಗ್ಯಕ್ಕಿಂತ ಮೊದಲು ಕಟ್ಟಡದ ಭಾಗ್ಯ ಸಿಕ್ಕಿದ್ದರೆ ಇನ್ನೂ ಚೆನ್ನಾಗಿ ಇರುತ್ತಿತ್ತು’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಮಾನಪ್ಪ ಹಾಲಬಾವಿ.
‘ಗ್ರಾಮದ ಹೊರವಲಯದ ಸಮುದಾಯ ಆರೋಗ್ಯ ಕೇಂದ್ರದ ಸಮೀಪ 1 ಎಕರೆ 20 ಗುಂಟೆ ಜಾಗವನ್ನು ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಕಾಯ್ದಿರಿಸಲಾಗಿದೆ. ₹20 ಲಕ್ಷ ಮೊತ್ತವನ್ನು ನರೇಗಾ ಯೋಜನೆ ಅಡಿಯಲ್ಲಿ ಕಾಮಗಾರಿ ನಿರ್ವಹಿಸಲು ನಿರ್ಧರಿಸಲಾಗಿದೆ’ ಎಂದು ಹೇಳುತ್ತಾರೆ ಗ್ರಾಮದ ನಿವಾಸಿ ಮಲ್ಲಿಕಾರ್ಜುನ.
‘ಈಗಾಗಲೇ ನಾಡ ಕಚೇರಿ, ಪ್ರೌಢಶಾಲೆ, ಸಮುದಾಯ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯ, ಬಿಸಿಎ ವಸತಿನಿಲಯ ಸೇರಿದಂತೆ ಹಲವು ಕಚೇರಿಗಳು ಕಾರ್ಯನಿರ್ವಹಿಸುತ್ತಿದೆ. ಯಾದಗಿರಿ- ಶಹಾಪುರ ರಾಜ್ಯ ಹೆದ್ದಾರಿ ಮೇಲೆ ಇರುವುದರಿಂದ ಪಟ್ಟಣ ಪಂಚಾಯಿತಿ ಬಳಿಕ ಅಭಿವೃದ್ಧಿಯು ಇನ್ನಷ್ಟು ವೇಗ ಪಡೆಯಬಹುದು’ ಎಂದರು.
ಸಗರ ಗ್ರಾಮಕ್ಕಿಲ್ಲ ಪಟ್ಟಣ ಪಂಚಾಯಿತಿ ಭಾಗ್ಯ
ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಅಂದರೆ 37 ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿರುವ ಸಗರ ಗ್ರಾಮ ಪಂಚಾಯಿತಿಗೆ ಪಟ್ಟಣ ಪಂಚಾಯಿತಿಯ ಭಾಗ್ಯ ಲಭಿಸುತ್ತಿಲ್ಲ ಎಂಬ ಬೇಸರ ಸ್ಥಳೀಯರದ್ದು. ‘ಪಟ್ಟಣ ಪಂಚಾಯಿತಿಯನ್ನಾಗಿ ಮಾಡುವಂತೆ ಸಾಕಷ್ಟು ಬಾರಿ ಸಚಿವರಿಗೆ ಹಾಗೂ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪಟ್ಟಣದ ಭಾಗ್ಯ ಕೂಡಿ ಬಂದಿಲ್ಲ’ ಎನ್ನುತ್ತಾರೆ ಗ್ರಾಮದ ಮುಖಂಡ ಬಸವರಾಜ ಸಿಣ್ಣೂರ. ‘20309 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಸಚಿವರು ನಡೆಸಿದ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ದಾಖಲೆಗಳ ಸಮೇತ ಮನವಿ ಮಾಡಿದ್ದರೂ ಪ‍್ರಯೋಜನ ಆಗುತ್ತಿಲ್ಲ’ ಎಂದರು.
ತಾಲ್ಲೂಕಿನಲ್ಲಿಯೇ ದೊಡ್ಡ ಹೋಬಳಿ ಕೇಂದ್ರವಾಗಿದ್ದು ಸರ್ಕಾರ ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಿರುವುದರಿಂದ ಇನ್ನುಷ್ಟು ಅಭಿವೃದ್ಧಿ ಕೆಲಸ ನಿರ್ವಹಿಸಲು ಸಾಧ್ಯ–ದೇವರಾಜ ಪಿಡಿಒ, ದೋರನಹಳ್ಳಿ
ಪಟ್ಟಣ ಪಂಚಾಯಿತಿಯಿಂದ ನಮಗೆ ಯಾವುದೆ ಪ್ರಯೋಜನವಿಲ್ಲ. ನರೇಗಾ ಕಾಮಗಾರಿ ಸ್ಥಗಿತಗೊಳ್ಳುತ್ತದೆ. ಮತ್ತೆ ನಾವೆಲ್ಲರೂ ಹೊಟ್ಟೆ ಪಾಡಿಗೆ ಗುಳೆ ಹೋಗಬೇಕಾಗುತ್ತದೆ–ಮಾನಪ್ಪ ಹಾಲಬಾವಿ, ಗ್ರಾ.ಪಂ. ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.