ADVERTISEMENT

ಕುಡಿಯುವ ನೀರಿಗಾಗಿ ನಿತ್ಯ ಪರದಾಟ

ಬಡಾವಣೆ ನಿವಾಸಿಗಳ ಸಮಸ್ಯೆಗೆ ಸ್ಪಂದಿಸದ ನಗರಸಭೆ; ಆರೋಪ

​ಪ್ರಜಾವಾಣಿ ವಾರ್ತೆ
Published 12 ಮೇ 2021, 5:35 IST
Last Updated 12 ಮೇ 2021, 5:35 IST
ಸುರಪುರದ ವಾರ್ಡ್ ನಂ.19ರಲ್ಲಿ ನೀರಿಗಾಗಿ ಸರದಿಯಲ್ಲಿ ನಿಂತಿರುವ ಜನರು
ಸುರಪುರದ ವಾರ್ಡ್ ನಂ.19ರಲ್ಲಿ ನೀರಿಗಾಗಿ ಸರದಿಯಲ್ಲಿ ನಿಂತಿರುವ ಜನರು   

ಸುರಪುರ: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.19ರಲ್ಲಿರುವ ಹಸನಾಪುರ ಮತ್ತು ವಾರ್ಡ್ ನಂ.20ರಲ್ಲಿರುವ ರಾಜಾ ಕುಮಾರನಾಯಕ ಕಾಲೊನಿ ನಿವಾಸಿಗಳಿಗೆ ಶುದ್ಧ ನೀರು ಮರೀಚಿಕೆಯಾಗಿದ್ದು, ಕುಡಿಯುವ ನೀರಿಗಾಗಿ ನಿತ್ಯ ಪರದಾಡುವಂತಾಗಿದೆ.

ರಾಜಾ ಕುಮಾರನಾಯಕ ಕಾಲೊನಿಯ ಒಂದು ಭಾಗಕ್ಕೆ ನೀರು ಸರಬರಾಜು ಆಗುತ್ತಿದ್ದು, ಇನ್ನೊಂದು ಭಾಗಕ್ಕೆ ಸುಮಾರು ವರ್ಷಗಳಿಂದ ನೀರು ಸರಬರಾಜು ಆಗುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ನಗರಸಭೆ ಅಧಿಕಾರಿಗಳು ಸ್ಪಂದಿಸಿಲ್ಲ ಎನ್ನುತ್ತಾರೆ ಬಡಾವಣೆಯ ಹಿರಿಯರಾದ ಮಲ್ಲಪ್ಪ ತೇಲ್ಕರ್.

ಕಾಲೊನಿಯ ಪಕ್ಕದಿಂದಲೆ ರತ್ತಾಳದ ಬೋರ್ ನೀರು ಬೇರೆಡೆ ಸರಬರಾಜು ಆಗುತ್ತಿದೆ. ಆದರೆ ಅದನ್ನು ಕುಡಿಯುವ ಭಾಗ್ಯ ಬಡವಾಣೆಯ ಜನರಿಗಿಲ್ಲ. ಈಗಿರುವ ವಾಲ್ ಹತ್ತಿರದಲ್ಲಿ ಇನ್ನೊಂದು ವಾಲ್ ಕೂಡಿಸಿ ಬಡವಾಣೆಗೆ ನೀರು ಸರಬರಾಜು ಮಾಡುವಂತೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೂ ನಗರಸಭೆಯವರು ನಮ್ಮ ಮನವಿಗೆ ಕವಡೆ ಕಿಮ್ಮತ್ತು ನೀಡುತ್ತಿಲ್ಲ ಎಂದು ಅವರು ದೂರಿದರು.

ADVERTISEMENT

ವಾರ್ಡ್ ನಂ.19ರಲ್ಲಿರುವ ಹಸನಾಪುರ ಬಡಾವಣೆಯಲ್ಲಿ ಐದಾರು ವರ್ಷಗಳಿಂದ ನೀರು ಸರಬರಾಜು ನಿಂತು ಹೋಗಿದೆ. ಕುಂಚ್ಚಮ್ಮನ ಕೆರೆ ಹತ್ತಿರ ಎರಡು ಬೋರ್ ಹಾಕಿ ಪೈಪ್ ಲೈನ್ ಮಾಡಲಾಗಿದೆ. ಕಡಿಮೆ ಶಕ್ತಿಯ ಮೋಟಾರ್ ಇಳಿಸಿದ್ದರಿಂದ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ಈ ಬಗ್ಗೆ ಪೌರಾಯುಕ್ತರ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂದು ಬಡಾವಣೆ ನಿವಾಸಿ ಯಮನಪ್ಪ ಗಂಗನಾಳ ಬೇಸರ ವ್ಯಕ್ತಪಡಿಸಿದರು.

ಬೇಸಿಗೆ ಇರುವುದರಿಂದ ನೀರಿನ ಬವಣೆ ಹೆಚ್ಚುತ್ತಿದೆ. ದಿನ ಬೆಳಗಾದರೆ ಕೊಡ ಹಿಡಿದುಕೊಂಡು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಇದೆ. ಮಹಿಳೆಯರು, ಮಕ್ಕಳು ಕೊಡ ಹಿಡಿದು ಹತ್ತಿರದ ಮುಸ್ಮಿಂ ಸಮಾಜದ ಸ್ಮಶಾನದಲ್ಲಿರುವ ಬೋರ್‌ನಿಂದ ನೀರು ತರುತ್ತಾರೆ. ಕೆಲವರು ಬೈಕ್ ಮೇಲೆ ತರುತ್ತಾರೆ. ಬೈಕ್ ಇಲ್ಲದ ಬಡವರು ಭಾರದ ಕೊಡಗಳನ್ನು ಹೊತ್ತು ದೂರ ಕ್ರಮಿಸಬೇಕಾದ ಸ್ಥಿತಿಯಿದೆ.

ನಗರಸಭೆ ಅಧಿಕಾರಿಗಳು ಹೆಚ್ಚು ಆಸ್ಪೈರ್ ಶಕ್ತಿಯ ಮೋಟಾರು ಇಳಿಸಿ ಬಡಾವಣೆಗೆ ನೀರು ಸರಬರಾಜು ಮಾಡಬೇಕು. ಸಮಸ್ಯೆಗೆ ಸ್ಪಂದಿಸದಿದ್ದರೆ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಡಾವಣೆ ನಿವಾಸಿಗಳು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.