ADVERTISEMENT

ಯಾದಗಿರಿ: ಆಂಬುಲೆನ್ಸ್‌ ಉಚಿತ ಸೇವೆಗೆ ಚಾಲನೆ

ಡಾ.ಎಸ್‌.ಬಿ.ಕಾಮರೆಡ್ಡಿ ಬೆಂಡೆಬೆಂಬಳಿ ವತಿಯಿಂದ ಸೇವೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 1:31 IST
Last Updated 8 ಜೂನ್ 2021, 1:31 IST
ಯಾದಗಿರಿ ಮತಕ್ಷೇತ್ರದ ಜನರಿಗೆ ಅನುಕೂಲವಾಗಲು ಕಾಮರೆಡ್ಡಿ ಉಚಿತ ಆಂಬುಲೆನ್ಸ್‌ ಸೇವೆಗೆ ನಗರದಲ್ಲಿ ಸೋಮವಾರ ಚಾಲನೆ ನೀಡಲಾಯಿತು
ಯಾದಗಿರಿ ಮತಕ್ಷೇತ್ರದ ಜನರಿಗೆ ಅನುಕೂಲವಾಗಲು ಕಾಮರೆಡ್ಡಿ ಉಚಿತ ಆಂಬುಲೆನ್ಸ್‌ ಸೇವೆಗೆ ನಗರದಲ್ಲಿ ಸೋಮವಾರ ಚಾಲನೆ ನೀಡಲಾಯಿತು   

ಯಾದಗಿರಿ: ಯಾದಗಿರಿ ಮತಕ್ಷೇತ್ರದ ಜನರಿಗೆ ಅನುಕೂಲವಾಗಲು ಕಾಮರೆಡ್ಡಿ ಉಚಿತ ಆಂಬುಲೆನ್ಸ್‌ ಸೇವೆಗೆ ನಗರದಲ್ಲಿ ಸೋಮವಾರ ಚಾಲನೆ ನೀಡಲಾಯಿತು.

ಈ ವೇಳೆ ಮಾತನಾಡಿದ ಕಾಮರೆಡ್ಡಿ ಆಸ್ಪತ್ರೆಯ ಮುಖ್ಯಸ್ಥ ಡಾ.ಎಸ್‌.ಬಿ.ಕಾಮರೆಡ್ಡಿ ಬೆಂಡೆಬೆಂಬಳಿ, ಎರಡು ವರ್ಷಗಳಿಂದ ಕೋವಿಡ್‌ನಿಂದ ಜಗತ್ತು ಸಮಸ್ಯೆ ಅನುಭವಿಸುತ್ತಿದೆ. ಮೊದಲನೇ ಅಲೆಯಲ್ಲಿ ಜಿಲ್ಲೆಯಲ್ಲಿ ಅಷ್ಟೊಂದು ಸಮಸ್ಯೆ ಆಗಿರಲಿಲ್ಲ. ಈಗ ಎರಡನೇ ಅಲೆಯಲ್ಲಿ ಸಾಕಷ್ಟು ತೊಂದರೆ ಜನರು ಅನುಭವಿಸುತ್ತಿದ್ದಾರೆ. ಹೀಗಾಗಿ ಅವಶ್ಯವಿರುವರಿಗೆ ಆಂಬುಲೆನ್ಸ್‌ ಉಚಿತ ಸೇವೆ ನೀಡುತ್ತಿದ್ದೇವೆ ಎಂದರು.

ಆಸ್ಪತ್ರೆಯಿಂದ ಮನೆಗೆ, ಮನೆಯಿಂದ ಆಸ್ಪತ್ರೆಗೆ ದಾಖಲಿಸಲು ಈ ಸೇವೆ ಸಿಗಲಿದೆ. 80730 24443, 8747900509 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ADVERTISEMENT

ಕಳೆದ ವರ್ಷ ಕೃಷ್ಣಾ ಹಾಗೂ ಭೀಮಾ ನದಿ ಪ್ರವಾಹಕ್ಕೊಳಗಾದಹಳ್ಳಿಗಳ ಜನರಿಗೆ ಆಹಾರ ಕಿಟ್‌ ಹಾಗೂ ದಿನ ಉಪಯೋಗ ವಸ್ತುಗಳನ್ನು ನೀಡಿ ಅವರಿಗೆ ಆತ್ಮಸ್ಥೈರ್ಯ ತುಂಬಿದ್ದೇವೆ ಎಂದರು.

ಈ ವರ್ಷ ಸೋಂಕಿನ ಎರಡನೇ ಅಲೆಯಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ಯುವಕರು ಹೆಚ್ಚು ಸಾವನ್ನಪ್ಪಿದ್ದಾರೆ. ಆದ್ದರಿಂದ ಜನರು ತಪ್ಪದೇ ಸ್ವಚ್ಛತೆಗೆ ಆದ್ಯತೆ ನೀಡಿ, ಎರಡು ಮಾಸ್ಕ್‌ ಧರಿಸಿ, ಎರಡು ಲಸಿಕೆ ತಪ್ಪದೇ ಪಡೆಯಬೇಕು. ಹಳ್ಳಿಗಳ ಜನರು ನಿರ್ಲಕ್ಷ್ಯ ಮಾಡಬಾರದು ಸಲಹೆ ನೀಡಿದರು.

ಪತ್ರಕರ್ತರು, ವೈದ್ಯರು ಹಾಗೂ ಸಿಬ್ಬಂದಿ ಅಪಾಯದಲ್ಲಿ ಕೆಲಸ ಮಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಎಲ್ಲರೂ ಸೂಕ್ತ ಎಚ್ಚರಿಕೆ ವಹಿಸಿ ಕೆಲಸ ಮಾಡುವುದು ಅಗತ್ಯ. ಸ್ಟೀಮರ್ ಹಬೆ ತೆಗೆದುಕೊಳ್ಳಬೇಕು. ಇದರಿಂದ ದೇಹದಲ್ಲಿರುವ ಸೋಂಕು ನಾಶವಾಗುತ್ತದೆ ಎಂದು ತಿಳಿಸಿದರು

ಆಂಬುಲೆನ್ಸ್‌ಗೆ ಚಾಲನೆ ನೀಡಿದ ಗುರುಮಠಕಲ್ ಖಾಸಾಮಠದ ಪೀಠಾಧಿಪತಿ ಶಾಂತವೀರ ಮರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಈ ವರ್ಷ ಕೊರೊನಾ ಸೋಂಕು ಎರಡನೇ ಅಲೆ ದಾಳಿಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಸದ್ಯ ಅದರ ಪ್ರಭಾವ ಕಡಿಮೆಯಾಗುತ್ತಿದೆ. ಆದರೆ, ತಜ್ಞರು ಮೂರನೇ ಅಲೆ ಮಕ್ಕಳಿಗೆ ಅಪಾಯಕಾರಿ ಎಂದು ಎಚ್ಚರಿಕೆ ನೀಡಿರುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪೋಷಕರು ತಮ್ಮ ಮಕ್ಕಳನ್ನು ಸಂರಕ್ಷಣೆ ಮಾಡಬೇಕು. ಭವಿಷ್ಯದ ಸಂಪತ್ತಾರಾಗಿರುವ ಮಕ್ಕಳಿಗೆ ಅಗತ್ಯ ಆರೋಗ್ಯ ಸಲಹೆ ಸೂಚನೆ ನೀಡುವ ಜೊತೆಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಇಂದೂಧರ ಸಿನ್ನೂರ, ಸಂಜೀವರಾವ ಕುಲಕರ್ಣಿ, ಜಿ.ಪಂ ಮಾಜಿ ಸದಸ್ಯ ಶಾಂತರೆಡ್ಡಿ ದೇಸಾಯಿ, ಅನೀಲ್ ದೇಶಪಾಂಡೆ, ಹೊನಪ್ಪ ಮುಷ್ಟೂರ, ರಾಜೇಶ ಪಾಟೀಲ, ಶಂಕರಲಿಂಗಪ್ಪ, ಮೈಲಾರಪ್ಪ ಜಾಗಿರದಾರ, ರವಿ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.