ADVERTISEMENT

ಯಾದಗಿರಿ: ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 4:51 IST
Last Updated 3 ಡಿಸೆಂಬರ್ 2021, 4:51 IST
ಯಾದಗಿರಿಯ ಪೊಲೀಸ್‌ ಕವಾಯತ್‌ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌., ಪಾರಿವಾಳ ಮತ್ತು ಬಲೂನ್‌ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು
ಯಾದಗಿರಿಯ ಪೊಲೀಸ್‌ ಕವಾಯತ್‌ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌., ಪಾರಿವಾಳ ಮತ್ತು ಬಲೂನ್‌ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು   

ಯಾದಗಿರಿ: ಕ್ರೀಡೆಯಿಂದ ಮಾನಸಿಕ‌, ನೆಮ್ಮದಿಯ ಜೊತೆಗೆ ಆರೋಗ್ಯ ಮತ್ತು ಜೀವನದಲ್ಲಿ‌ ಉತ್ಸಾಹ ಹೆಚ್ಚುತ್ತದೆ. ಹೀಗಾಗಿ ಎಲ್ಲರೂ ಕ್ರೀಡೆಯಲ್ಲಿ‌ ಸಕ್ರಿಯವಾಗಿ ಭಾಗವಹಿಸುವಂತೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್‌., ಸಲಹೆ ನೀಡಿದರು.

ನಗರದ ಪೊಲೀಸ್‌ ಕವಾಯತ್‌ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಪಾರಿವಾಳ ಮತ್ತು ಬಲೂನ್‌ ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕೋವಿಡ್‌ ಸಂದರ್ಭದಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಕ್ರೀಡೆ ಅವಶ್ಯ. ಇದು ಸೋಂಕಿನ ವಿರುದ್ಧ ಹೋರಾಡಲು ಸಿದ್ಧಗೊಳಿಸುತ್ತದೆ. ದಿನ ಪ್ರತಿದಿನ ವ್ಯಾಯಾಮ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತ ಗುಣಮಟ್ಟದ ಆಹಾರ ಸೇವನೆ ಮಾಡುವುದರಿಂದ ಆರೋಗ್ಯಕರ ‌ಜೀವನ ನಡೆಸಬಹುದು ಎಂದರು.

ADVERTISEMENT

ಜಿಲ್ಲಾ ಪಂ‌ಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಕ್ರೀಡೆಯಲ್ಲಿ‌ ಸೋಲು ಗೆಲುವು ಎನ್ನದೆ ಎಲ್ಲರೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಇದರಿಂದ ದೈಹಿಕವಾಗಿ ಆರೋಗ್ಯವಾಗಿ ಬಾಳಲು ಸಹಾಯ ಮಾಡುತ್ತದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾತನಾಡಿ, ದೈಹಿಕವಾಗಿ ಸದೃಢವಾಗಿರಲು ಕ್ರೀಡೆ ಅವಶ್ಯ. ಸಿಬ್ಬಂದಿ ಎಲ್ಲರೂ ಎಲ್ಲ ಕ್ರೀಡೆಗಳಲ್ಲಿ ಭಾಗವಹಿಸಿ ಎಂದರು.

ಡಿ.2ರಿಂದ ಕ್ರೀಡಾಕೂಟ ಆರಂಭವಾಗಿದ್ದು, ಡಿ.4ರಂದು ಸಮಾರೋಪ ನಡೆಯಲಿದೆ. ಈಶಾನ್ಯ ವಲಯ ಪೊಲೀಸ್‌ ಮಹಾನಿರೀಕ್ಷಕ ಮನೀಷ್‌ ಖರ್ಬಿಕರ್‌ ಅವರು ಬಹುಮಾನ ವಿತರಿಸುವರು ಎಂದರು.

ಕಾರ್ಯಕ್ರಮ ನಂತರ ವಿವಿಧ ಕ್ರೀಡಾಕೂಟಗಳು ಜರುಗಿದವು. ಪೊಲೀಸ್ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.