ADVERTISEMENT

ಎಳ್ಳು ಅಮಾವಾಸ್ಯೆ: ಯಾದಗಿರಿಯಲ್ಲಿ ಕಾಯಿಪಲ್ಲೆ ಖರೀದಿ ಭರಾಟೆ ಜೋರು

ಬೆಳೆದ ಬೆಳೆಗೆ ಪೂಜಿಸಿ ಚರಗ ಚೆಲ್ಲುವ ಎಳ್ಳ ಅಮಾವಾಸ್ಯೆ ಇಂದು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 6:34 IST
Last Updated 19 ಡಿಸೆಂಬರ್ 2025, 6:34 IST
ಯಾದಗಿರಿ ಮಾರುಕಟ್ಟಿಯಲ್ಲಿ ಗುರುವಾರ ತಕಾರಿ ಖರೀದಿಯಲ್ಲಿ ನಿರತವಾಗಿದ್ದ ಮಹಿಳೆ 
ಯಾದಗಿರಿ ಮಾರುಕಟ್ಟಿಯಲ್ಲಿ ಗುರುವಾರ ತಕಾರಿ ಖರೀದಿಯಲ್ಲಿ ನಿರತವಾಗಿದ್ದ ಮಹಿಳೆ    

ಯಾದಗಿರಿ: ಭೂತಾಯಿಯ ಒಡಲಲ್ಲಿ ಬೆಳೆದ ಬೆಳೆಗಳಿಗೆ ಪೂಜೆ ಸಲ್ಲಿಸಿ ಚರಗ ಚೆಲ್ಲುವ ಎಳ್ಳು ಅಮಾವಾಸ್ಯೆ ಮುನ್ನ ದಿನವಾದ ಗುರುವಾರ ನಗರದ ಮಾರುಕಟ್ಟೆಗಳಲ್ಲಿ ಕಾಯಿಪಲ್ಲೆ ಖರೀದಿ ಭರಾಟೆ ಕಂಡುಬಂತು.

ಎಳ್ಳು ಅಮಾವಾಸ್ಯೆಗೆ ಭೂಮಿತಾಯಿಗೆ ಚರಗ ಚೆಲ್ಲುವುದರ ಮೂಲಕ ನೈವೇದ್ಯ ಅರ್ಪಿಸಲಾಗುತ್ತದೆ. ಹೋಳಿಗೆ, ಅನ್ನ, ಹುಗ್ಗಿ, ಸಜ್ಜಿರೊಟ್ಟಿ, ಚವಳಿಕಾಯಿ, ಹಲಸಂದಿ ಹಿಂಡಿಪಲ್ಲೆ, ಬದನೆಕಾಯಿಪಲ್ಲೆ, ಹಸಿ ಈರುಳ್ಳಿ, ಸಾಂಬಾರು ಸೇರಿ ಮುಂತಾದ ಪದಾರ್ಥಗಳನ್ನು ಒಟ್ಟು ಕೂಡಿಸಿ ಹೊಲದ ತುಂಬೆಲ್ಲ ಚರಗ ಚೆಲ್ಲುವುದು ಈ ಹಬ್ಬದ ವಾಡಿಕೆ. ಚರಗದ ಬಳಿಕ ರೈತಾಪಿ ಸಮುದಾಯದವರು ಹೊಲದಲ್ಲಿಯೇ ತಮ್ಮ ಬಂಧುಗಳು, ಸ್ನೇಹಿತರೊಂದಿಗೆ ಸಾಮೂಹಿಕ ಭೋಜನ ಸವೆಯುತ್ತಾರೆ.

ಈ ಹಬ್ಬದ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಗಾಂಧಿ ವೃತ್ತ, ಹೊಸಹಳ್ಳಿ ಕ್ರಾಸ್‌, ರೈಲ್ವೆ ನಿಲ್ದಾಣ ರಸ್ತೆ, ಗಂಜ್ ವೃತ್ತ ಸೇರಿದಂತೆ ಹಲವು ಕಡೆಗಳ ತರಕಾರಿ ಅಂಗಡಿ–ಮುಂಗಟ್ಟುಗಳ ಮುಂದೆ ನಿಂತು ಜನರು ಕಾಯಿಪಲ್ಲೆ ಖರೀದಿಯಲ್ಲಿ ತೊಡಗಿದ್ದರು. ಮಹಿಳೆಯರು ತರಕಾರಿ ಖರೀದಿಯ ಚೌಕಾಸಿಯಲ್ಲಿ ನಿರತರಾಗಿರುವುದು ಸಾಮಾನ್ಯವಾಗಿತ್ತು.

ADVERTISEMENT

ಎರಡು ವಾರಗಳ ಹಿಂದೆ ಒಂದು ಕೆ.ಜಿ.ಗೆ ₹ 100ರ ಗಡಿ ದಾಟಿದ್ದ ಬದನೆಕಾಯಿ ₹ 80ರ ಆಸುಪಾಸಿನಲ್ಲಿ ಮಾರಾಟವಾಯಿತು. ನಾಲ್ಕೈದು ಕೆ.ಜಿ. ಒಟ್ಟಾಗಿ ಖರೀದಿಸುವ ಗ್ರಾಹಕರಿಗೆ ಇನ್ನಷ್ಟು ದರವನ್ನು ತಗ್ಗಿಸಿದ ವರ್ತಕರು, ಹಬ್ಬದ ವಹಿವಾಟಿನ ಹಣವನ್ನು ಜೇಬಿಗೆ ಇಳಿಸಿಕೊಂಡರು.

ಕಾಯಂ ಗ್ರಾಹಕರ ಜೊತೆಗೆ ಹಳ್ಳಿಗಳಿಂದ ಬಂದಿದ್ದ ರೈತ ಮಹಿಳೆಯರು ಬುಟ್ಟಿಗಳಲ್ಲಿ ಸೂಡು ಕಟ್ಟಿರುವ ತರಹೇವಾರಿ ಸೊಪ್ಪ ಹಾಗೂ ತರಕಾರಿಗಳನ್ನು ಹೊತ್ತು ತಂದಿದ್ದರು. ರಸ್ತೆಯ ಬದಿಯಲ್ಲಿ ಅವುಗಳನ್ನು ಒಪ್ಪವಾಗಿ ಜೋಡಿಸಿದ್ದರು. ಒಂದು ಕೆ.ಜಿ. ₹70ರಿಂದ  ₹ 80ರಯಂತೆ ಹಿರೇಕಾಯಿ, ಮೆಣಸಿನಕಾಯಿ, ಈರುಳ್ಳಿ ಸೊಪ್ಪು, ಬೆಂಡೆಕಾಯಿ, ತೊಂಡೆಕಾಯಿ, ಡೊಣ ಮೆಣಸಿನಕಾಯಿ, ಗಜ್ಜರಿ, ಸೌತೆಕಾಯಿ, ಹಸಿರು ಟೊಮೆಟೊ (ಕಾಯಿ ಟೊಮೆಟೊ) ಮಾರಿದರು. ಕೊತ್ತಂಬರಿ, ಮೆಂತ್ಯ ಸೊಪ್ಪು, ಪಾಲಕ್ ಸೊಪ್ಪು, ಸಬ್ಬಕ್ಕಿ ಸೊಪ್ಪಿ, 15 ರೂಪಾಯಿಗೆ 2–3 ಸಿವುಡು (ಕಟ್ಟು) ಮಾರಾಟ ಆದವು.

‘ಈ ಹಿಂದಿನ ವಾರಗಳಿಗೆ ಹೋಲಿಕೆ ಮಾಡಿದರೆ ಬಹುತೇಕ ತರಕಾರಿ ಮತ್ತು ಸೊಪ್ಪಿನ ದರ ಸ್ವಲ್ಪ ಕಡಿಮೆಯಾಗಿದೆ. ನಿತ್ಯದ ಮಾರುಕಟ್ಟೆಗಿಂತ ಹಬ್ಬದ ಖರೀದಿಗೆ ಹೆಚ್ಚಿನ ಜನರು ಸೇರಿದ್ದರೂ ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡಿದ್ದಾರೆ. ಕೆಲವು ಗ್ರಾಮಗಳಲ್ಲಿ ಊರ ದೇವರ ಹಬ್ಬಗಳು ಎಳ್ಳ ಅಮಾವಾಸ್ಯೆಯ ಆಸುಪಾಸಿನಲ್ಲಿ ಆಚರಣೆ ಮಾಡುತ್ತಿರುವುದರಿಂದ ನೈವೇದ್ಯ ಸಮರ್ಪಣೆಗೆ ಸೀಮಿತವಾಗಿ ತರಕಾರಿ ಕೊಂಡುಕೊಂಡಿದ್ದಾರೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಶರಣಮ್ಮ.

ಯಾದಗಿರಿಯ ಗಾಂಧಿ ವೃತ್ತದ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರದಲ್ಲಿ ತೊಡಗಿದ್ದ ವರ್ತಕ 

‘ಹೆಚ್ಚು ಖರೀದಿಸಿದರೆ ದರದಲ್ಲಿ ವಿನಾಯಿತಿ’

‘ಐದಾರು ಕೆ.ಜಿ.ಯಷ್ಟು ತರಕಾರಿ ಖರೀದಿಸುವ ಗ್ರಾಹಕರಿಗೆ ಕೆಲವು ತರಕಾರಿಗಳ ಮೇಲೆ ಪ್ರತಿ ಕೆ.ಜಿ.ಗೆ ₹ 10 ವಿನಾಯಿತಿ ಕೊಡುತ್ತಿದ್ದೇವೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷದ ಗ್ರಾಹಕರ ಖರೀದಿ ಸಾಮರ್ಥ್ಯ ಕಡಿಮೆಯಾಗಿದೆ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ನಬಿಲಾಲ್. ‌‘ಪ್ರತಿ ಕೆ.ಜಿ. ಕ್ಯಾರೇಟ್ ₹60ರಿಂದ ₹70 ಬೀಟ್ರೂಟ್‌ ₹ 70ರಿಂದ ₹ 80 ಈರುಳ್ಳಿ ₹ 40 ಟೊಮೆಟೊ ₹ 40  ಆಲೂಗಡ್ಡೆ ₹ 30ರಿಂದ 40 ಬೆಂಡೆಕಾಯಿ ₹ 70ರಿಂದ ₹ 80 ಬದನೆಕಾಯಿ ₹ 65ರಿಂದ ₹80 ಮೆಣಸಿನಕಾಯಿ ₹ 60ರಿಂದ ₹80 ಯಂತೆ ಮಾರಾಟ ಮಾಡುತ್ತಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.