ಯಾದಗಿರಿ: ಮೊಬೈಲ್, ಟಿ.ವಿ, ಟ್ಯಾಬ್‌ನಂತಹ ಡಿಜಿಟಲ್ ಸಾಧನಗಳ ಅತಿಯಾದ ಬಳಕೆ ಸೇರಿದಂತೆ ನಾನಾ ಕಾರಣಗಳಿಂದಾಗಿ ಜಿಲ್ಲೆಯ ಮಕ್ಕಳಲ್ಲಿ ದೃಷ್ಟಿ ದೋಷ ಸಮಸ್ಯೆ ಹೆಚ್ಚುತ್ತಿದೆ. ಅದರಲ್ಲಿ ಬಾಲಕಿಯರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಂಡುಬಂದಿದೆ.
ಆರೋಗ್ಯ ಇಲಾಖೆಯ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ (ಆರ್‌ಬಿಎಸ್‌ಕೆ) ನಡೆಸಿದ ತಪಾಸಣೆಯಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ 3,818 ಮಕ್ಕಳಲ್ಲಿ ದೃಷ್ಟಿ ಸಮಸ್ಯೆ ಇರುವುದು ಪತ್ತೆಯಾಗಿದೆ. ಅದರಲ್ಲಿ 2,146 ಬಾಲಕಿಯರು ಹಾಗೂ 1,672 ಬಾಲಕರು ಇದ್ದಾರೆ.
ಆರ್‌ಬಿಎಸ್‌ಕೆ ಅಡಿಯಲ್ಲಿ ಜಿಲ್ಲೆಯ 18 ವರ್ಷದ ವರೆಗಿನ ಮಕ್ಕಳ ಆರೋಗ್ಯ ತಪಾಸಣೆಯನ್ನು ಮಾಡಲಾಗುತ್ತದೆ. ತಪಾಸಣೆ ವೇಳೆ ಕಿವುಡುತನ, ದಂತ, ಚರ್ಮ, ವಿಟಮಿನ್ ಬಿ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಕೊರತೆ, ಅಪೌಷ್ಟಿಕತೆ, ರಕ್ತಹೀನತೆ ಮೊದಲಾದ ಆರೋಗ್ಯ ಸಮಸ್ಯೆ ಹೊಂದಿರುವವರನ್ನು ಪತ್ತೆ ಹಚ್ಚಿ, ಅಗತ್ಯ ಚಿಕಿತ್ಸೆ ಒದಗಿಸಲಾಗುತ್ತದೆ. ಗಂಭೀರ ಕಾಯಿಲೆಗಳು ಪತ್ತೆಯಾದ ಮಕ್ಕಳಿಗೆ ಸರ್ಕಾರಿ ಹಾಗೂ ಸರ್ಕಾರಿ ಯೋಜನೆಗಳ ಸಂಯೋಜಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಿಸಲಾಗುತ್ತದೆ.
ಮಕ್ಕಳಲ್ಲಿನ ಗಂಭೀರ ಆರೋಗ್ಯ ಸಮಸ್ಯೆಗಳ ಪೈಕಿ ದೃಷ್ಟಿ ದೋಷಕ್ಕೆ ಒಳಗಾಗುವ ಮಕ್ಕಳಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. 2023–24ರಲ್ಲಿ 1,348 ಮಕ್ಕಳು ದೃಷ್ಟಿ ದೋಷ ಇರುವುದಾಗಿ ಪತ್ತೆಯಾಗಿತ್ತು. 2024–25ರ ವೇಳೆಗೆ ಮಕ್ಕಳ ಸಂಖ್ಯೆ 1,649ಕೆ ಏರಿಕೆಯಾಗಿದೆ. ಏಪ್ರಿಲ್ ತಿಂಗಳಿಂದ ಸೆಪ್ಟೆಂಬರ್ 23ರ ನಡುವಿನ ಆರು ತಿಂಗಳಲ್ಲಿ 821 ಮಕ್ಕಳಲ್ಲಿ ದೃಷ್ಟಿ ದೋಷ ಕಂಡುಬಂದಿದೆ.
ಎರಡೂವರೆ ವರ್ಷಗಳಲ್ಲಿ ದೃಷ್ಟಿ ದೋಷದಿಂದ ಬಳಲುತ್ತಿದ್ದ 1,493 ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿದೆ. 2023–24ರಲ್ಲಿ 742, 2024–25ರಲ್ಲಿ 1,065 ಹಾಗೂ ಕಳೆದ ಆರು ತಿಂಗಳಲ್ಲಿ 104 ಮಕ್ಕಳು ಚಿಕಿತ್ಸೆಗೆ ಒಳಗಾಗಿದ್ದಾರೆ. ಕೆಲವು ಮಕ್ಕಳಲ್ಲಿ ಗಂಭೀರವಲ್ಲದ ಸಮಸ್ಯೆ ಕಂಡುಬಂದಿದ್ದರಿಂದ ಕನ್ನಡಕ ಕೊಟ್ಟು, ದೃಷ್ಟಿ ಸುಧಾರಣೆಯ ಅಗತ್ಯವಾದ ಸಲಹೆಗಳನ್ನು ನೀಡಿ ಕಳುಹಿಸಲಾಗಿದೆ ಎನ್ನುತ್ತಾರೆ ವೈದ್ಯರು.
‘ಪೋಷಕರು ಮೊಬೈಲ್‌ಗಳಲ್ಲಿ ಬ್ಯುಸಿ ಆಗುವುದರಿಂದ ಮಕ್ಕಳು ಸಹ ಅವರನ್ನೇ ಅನುಕರಣೆ ಮಾಡಿ, ಎಳೆಯದರಲ್ಲಿ ಮೊಬೈಲ್ ಗೀಳು ಹಚ್ಚಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವು ಪೋಷಕರು ಮಕ್ಕಳನ್ನು ಮನೆಯಲ್ಲೇ ಕೂಡಿಹಾಕುತ್ತಿದ್ದು, ಹೊರಗಡೆ ಆಟವಾಡಲು ಅವಕಾಶ ನೀಡುತ್ತಿಲ್ಲ. ಶಾಲೆಗಳಲ್ಲಿ ಸಹ ಅತಿಯಾದ ಹೋಮ್ ವರ್ಕ್ ಕೊಡುತ್ತಿರುವುದರಿಂದ ಕಣ್ಣಿನ ಮೇಲಿನ ಒತ್ತಡ ಹೆಚ್ಚಾಗಿ, ದೃಷ್ಟಿ ದೋಷ ಕಾಣಿಸಿಕೊಳ್ಳುತ್ತಿದೆ’ ಎನ್ನುತ್ತಾರೆ ನೇತ್ರ ತಜ್ಞರು.
‘ದೈಹಿಕ ಚಟುವಟಿಕೆಗಳು ಕ್ಷೀಣ’
‘ಹೊರಾಂಗಣ ಮೈದಾನಗಳಲ್ಲಿ ದೈಹಿಕ ಬೆಳವಣಿಗೆಗೆ ಪೂರಕವಾದ ಆಟೋಟಗಳಲ್ಲಿ ತೊಡಗಿಸಿಕೊಳ್ಳಲು ಕೆಲವು ಪೋಷಕರು ತಮ್ಮ ಮಕ್ಕಳನ್ನು ಬಿಡುತ್ತಿಲ್ಲ. ಸಹಜವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ’ ಎಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಹಿಂದೆ ಶಾಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳು ಭಾಗಿಯಾಗುತ್ತಿದ್ದರು. ಆದರೆ ಈಗ ಬರೀ ಓದಿನಲ್ಲಿ ಮುಳುಗಿದ್ದಾರೆ. ನಲಿಯುತ್ತಾ ಆಟೋಟಗಳಲ್ಲಿ ತೊಡಗುವ ಬದಲು ಮೊಬೈಲ್ ಟಿ.ವಿ. ಟ್ಯಾಬ್ ಕಂಪ್ಯೂಟರ್ ಸಾಧನೆಗಳಲ್ಲಿ ಮುಳುಗಿದ್ದಾರೆ. ಅವುಗಳ ನೇರ ಪರಿಣಾಮ ಆರೋಗ್ಯದ ಮೇಲೆ ಅದರಲ್ಲಿ ಕಣ್ಣಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮಕ್ಕಳ ಕಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧನಗಳಿಂದ ಅವರನ್ನು ದೂರ ಇರಿಸಬೇಕು. ದೃಷ್ಟಿ ಸುಧಾರಣೆಯ ಆಹಾರವನ್ನೂ ಕೊಡಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.