ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಜೀವನಾಡಿಯಾಗಿರುವ ಕಾಲುವೆಗಳು ಹೂಳು ತುಂಬಿಕೊಂಡು ಏದುಸಿರು ಬಿಡುತ್ತಲಿವೆ. ರೈತರಿಗೆ ಕೇವಲ ನೀರು ಪಡೆದುಕೊಳ್ಳುವುದು ಮಾತ್ರ ಗೊತ್ತು. ಅದರ ನಿರ್ವಹಣೆ ಬಂದರೆ ಕೆಬಿಜೆಎನ್‌ಎಲ್ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ.
ಜಮೀನುಗಳಿಗೆ ನೀರಾವರಿ ಸೌಕರ್ಯ ಒದಗಿಸುವ ಉಪ-ಕಾಲುವೆಗಳು, ವಿತರಣಾ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದ್ದು, ಕಾಲುವೆ ಇಕ್ಕೆಲಗಳಲ್ಲಿ ಮುಳ್ಳಿನ ಕಂಟಿಗಳು ಬೆಳೆದಿವೆ.
ಕಾಲುವೆ ಮಜಬೂತಾಗಿದ್ದರೆ ಸಮರ್ಪಕವಾಗಿ ನೀರು ಹರಿದು ಜಮೀನುಗಳಿಗೆ ತಲುಪಲು ಸಾಧ್ಯ. ಬಹುತೇಕ ಕಾಲುವೆಗಳಲ್ಲಿ ಹೂಳು, ಜಾಲಿಗಿಡ, ಆಪುಹುಲ್ಲು ಬೆಳೆದು ನಿಂತಿವೆ. ಕಾಲುವೆಗೆ ನೀರು ಹರಿದು ಬರುವುದೇ ಒಂದು ಪವಾಡವಾಗಿದೆ. ಕೊನೆ ಪಕ್ಷ ರೈತರು ಹೊಲಗಾಲುವೆಯನ್ನು ದುರಸ್ತಿ ಮಾಡಿಕೊಳ್ಳದೇ ಇರುವುದು ಕಂಡು ಬಂದಿತು.
ಸಾಮಾನ್ಯವಾಗಿ ಕಾಲುವೆ ನೀರು ಸ್ಥಗಿತಗೊಂಡ ಬಳಿಕ (ಕ್ಲೋಜರ್ ಅವಧಿ) ಮುಖ್ಯ ಕಾಲುವೆಯಿಂದ ಹಿಡಿದು ವಿತರಣಾ ಕಾಲುವೆ, ಹೊಲಗಾಲುವೆ ದುರಸ್ತಿ, ಸ್ವಚ್ಛತೆ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಾರೆ. ಆದರೆ, ಈ ಬಾರಿ ಲೋಕಸಭೆಯ ಚುನಾವಣೆಯ ನೀತಿ ಸಂಹಿತೆಯ ಕಾರಣದಿಂದ ಹೆಚ್ಚಿನ ಕಾಮಗಾರಿಗಳನ್ನು ಕೈಗೆತ್ತಿಕೊಂಡಿಲ್ಲ. ಅನುದಾನದ ಕೊರತೆಯು ಎದ್ದು ಕಾಣುತ್ತಿದೆ. ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ಆರೋಪಿಸುತ್ತಾರೆ ರೈತರು.
ಮಳೆಗಾಲ ಆರಂಭವಾಗಿದ್ದು, ಶೀಘ್ರ ಸಂಬಂಧಿಸಿದ ಅಧಿಕಾರಿಗಳು ಕಾಲುವೆ ಹೂಳು ಹಾಗೂ ಗಿಡಗಂಟಿಗಳನ್ನು ತೆರವುಗೊಳಿಸಿ, ನೀರು ಹರಿದು ಹೋಗಲು ಅನುವು ಮಾಡಿಕೊಡಬೇಕು ಎಂದು ಅಚ್ಚುಕಟ್ಟು ಭಾಗದ ರೈತರು ಆಗ್ರಹಿಸಿದ್ದಾರೆ.
ಬಾಕಿ ಉಳಿಸಿಕೊಂಡಿರುವ ಕರ: ‘ಸಮೃದ್ಧಿಯಾಗಿ ಎರಡು ಬೆಳೆ ಬೆಳೆದರೂ ರೈತರು ನೀರಾವರಿ ತೆರಿಗೆ ನೀಡುವುದನ್ನು ಮರೆತು ಬಿಟ್ಟಿದ್ದಾರೆ. ಹಲವು ವರ್ಷದಿಂದ ಕರ ಬಾಕಿ ಉಳಿಸಿಕೊಂಡು ಹೋಗುತ್ತಲೇ ಇದ್ದಾರೆ. ಕೋಟ್ಯಂತರ ಹಣ ಕರ ರೂಪದಲ್ಲಿ ಬಾಕಿ ಇದೆ. ಕಾಲುವೆ ದುರಸ್ತಿ ಹಾಗೂ ಸ್ವಚ್ಛತೆಯನ್ನು ನಿಗಮದ ಅನುದಾನದಿಂದಲೇ ಮಾಡಬೇಕು. ಸರ್ಕಾರ ಎಲ್ಲಿಂದ ಹಣ ತರಬೇಕು’ ಎಂದು ಪ್ರಶ್ನಿಸುತ್ತಾರೆ ಕೆಬಿಜೆಎನ್‌ಎಲ್ ನಿಗಮದ ಹಿರಿಯ ಎಂಜಿನಿಯರ್ ಒಬ್ಬರು.
‘ತುಂಗಭದ್ರಾ ನಾಲೆ ವ್ಯಾಪ್ತಿಯ ಪ್ರದೇಶದಲ್ಲಿ ರೈತರು ಪ್ರತಿವರ್ಷ ಕಡ್ಡಾಯವಾಗಿ ನೀರಾವರಿ ಕರವನ್ನು ಪಾವತಿಸುತ್ತಾರೆ. ಬ್ಯಾಂಕಿನಲ್ಲಿ ಕೃಷಿ ಸಾಲ ಪಡೆದುಕೊಳ್ಳಲು ತೆರಳಿದರೆ ಕಡ್ಡಾಯವಾಗಿ ಕರ ಪಾವತಿ ರಸೀದಿ ಕೇಳುತ್ತಾರೆ. ಅಲ್ಲದೆ ಕರ ಬಾಕಿ ಉಳಿಸಿಕೊಂಡರೆ ಪಹಣಿಯಲ್ಲಿ ನಮೂದಿಸುತ್ತಾರೆ. ಅದರಂತೆ ಇಲ್ಲಿಯೂ ಅಳವಡಿಸಿದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ನಿಗಮದ ಅಧಿಕಾರಿ ಒಬ್ಬರು.
ಕೃಷ್ಣಾ ಅಚ್ಚುಕಟ್ಟು ಭಾಗದ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಜಮೀನುಗಳ ರೈತರು, ಎರಡು ಹಂಗಾಮಿನ ಬೆಳೆಗಳಿಗೆ ಕಾಲುವೆ ನೀರನ್ನು ನೆಚ್ಚಿಕೊಂಡಿದ್ದಾರೆ. ಹೀಗಾಗಿ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಅಧಿಕಾರಿಗಳು, ಪ್ರತಿ ವರ್ಷ ಕಾಲುವೆಗಳನ್ನು ಸೂಕ್ತ ನಿರ್ವಹಣೆ ಮಾಡುವುದು ಅವಶ್ಯವಿದೆ. ಜತೆಗೆ ಕಾಲುವೆಯ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸುವ ನಿರ್ವಹಣೆ ಕೃಷ್ಣಾ ಭಾಗ್ಯ ಜಲ ನಿಗಮದ್ದಾಗಿದೆ. ಹೀಗಾಗಿ ಕಾಲುವೆ ಜಾಲಗಳಲ್ಲಿ ತುಂಬಿರುವ ಹೂಳು, ಇತರೆ ತ್ಯಾಜ್ಯ ಹಾಗೂ ಕಾಲುವೆ ಎರಡು ಬದಿಗಳಲ್ಲಿ ಅಡ್ಡಾದಿಡ್ಡಿಯಾಗಿ ಬೆಳೆದ ಮುಳ್ಳು ಕಂಟಿಗಳನ್ನು ತೆರವುಗೊಳಿಸುವ ಕಾಮಗಾರಿಗಳನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಬೇಕು. ಈ ಮೂಲಕ ನೆರವಿಗೆ ಬರಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ಶಾಂತಿನಾಥ ಪಿ ವನಕುದರಿ, ಎಂ.ಪಿ.ಚಪೆಟ್ಲಾ
ಮುಂಬರುವ ದಿನಗಳಲ್ಲಿ ಮುಖ್ಯ ಕಾಲುವೆಗಳಿಗೆ ನೀರು ಹರಿಸುವುದಕ್ಕೂ ಮುನ್ನ ಎಲ್ಲ ಕಾಲುವೆಗಳ ಹೂಳು ತೆರವು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆಅಶೋಕರೆಡ್ಡಿ ಪಾಟೀಲ ಇಇ ಅಣೆಕಟ್ಟು ವಿಭಾಗ ಕಚೇರಿ ನಾರಾಯಣಪುರ
ಕಾಲುವೆಗಳು ಹೂಳು ತುಂಬಿಕೊಂಡು ನಿಂತಿವೆ. ನೀರು ಬರುವುದು ಅನುಮಾನವಾಗಿದೆ. ಇನ್ನೂ ಒಂದು ತಿಂಗಳಲ್ಲಿ ಕಾಲುವೆ ನೀರು ಹರಿಸುತ್ತಾರೆ ಅಷ್ಟರಲ್ಲಿ ಕಾಲುವೆ ದುರಸ್ತಿಗೊಳಿಸಬೇಕುಶರಣಪ್ಪ ಪ್ಯಾಟಿ ರೈತ ಮುಖಂಡ ಶಹಾಪುರ
ಇಡ್ಲೂರು ದೊಡ್ಡಹಳ್ಳಕ್ಕೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣದಿಂದ ಸುತ್ತಲಿನ ರೈತರಿಗೆ ಅನುಕೂಲದ ಜತೆಗೆ ಚಲ್ಲೇರಿ ಸಮಸ್ಯೆಯೂ ನಿವಾರಿಸಬಹುದು. ಸಂಬಂಧಿತರು ಇತ್ತ ಗಮನಹರಿಸಲಿಶರಣಬಸಪ್ಪ ಎಲ್ಲೇರಿ ಗ್ರಾಮಸ್ಥ
ಕಾಲುವೆ ದುರಸ್ತಿ ನಿರ್ವಹಣೆಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳು ಕೈಚಲ್ಲಿದ್ದು ರೈತರು ಸಂಕಷ್ಟ ಎದುರಿಸುವಂತಾಗಿದೆಹಣಮಂತ್ರಾಯ ಚಂದಲಾಪುರ ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.