ADVERTISEMENT

ಕಡೇಚೂರು: ಕೈಗಾರಿಕೆಗಳಿಗೆ ಜಮೀನು ನೀಡಿ ಸಂಕಷ್ಟದಲ್ಲಿ ರೈತರು

ಮಲ್ಲಿಕಾರ್ಜುನ ಅರಿಕೇರಕರ್
Published 9 ಡಿಸೆಂಬರ್ 2023, 4:55 IST
Last Updated 9 ಡಿಸೆಂಬರ್ 2023, 4:55 IST
ಸೈದಾಪುರ ಸಮೀಪದ ಕಡೇಚೂರು-ಬಾಡಿಯಾಳ ಪ್ರದೇಶದಲ್ಲಿನ ಕೈಗಾರಿಕಾ ಕಂಪನಿಯ ಹೊರನೋಟ
ಸೈದಾಪುರ ಸಮೀಪದ ಕಡೇಚೂರು-ಬಾಡಿಯಾಳ ಪ್ರದೇಶದಲ್ಲಿನ ಕೈಗಾರಿಕಾ ಕಂಪನಿಯ ಹೊರನೋಟ    

ಕಡೇಚೂರು(ಸೈದಾಪುರ): ‘ಬೃಹತ್ ಕೈಗಾರಿಕೆಗಳನ್ನು ನಿರ್ಮಿಸಿ ಸ್ಥಳೀಯರಿಗೆ ಉದ್ಯೋಗದ ಭರವಸೆ ನೀಡಿ, ರೈತರಿಂದ ಜಮೀನು ಪಡೆದ ಸರ್ಕಾರ ಸುಮಾರು 12 ವರ್ಷಗಳು ಕಳೆದರೂ ಇಲ್ಲಿಯವರೆಗೆ ಜಮೀನು ನೀಡಿದ ರೈತರಿಗಾಗಲಿ, ಸ್ಥಳೀಯ ಯುವಕರಿಗಾಗಲಿ ಸ್ಥಾಪನೆಯಾಗಿರುವ ಕಂಪನಿಗಳಲ್ಲಿ ಉದ್ಯೋಗ ಮತ್ತು ಸೌಲಭ್ಯಗಳನ್ನು ನೀಡಿಲ್ಲ. ಸರ್ಕಾರ ಮತ್ತು ಕಂಪನಿಗಳು ವಂಚಿಸುತ್ತಿವೆ. ಇದರಿಂದ ನಮ್ಮ ಪರಿಸ್ಥಿತಿ, ಕಲ್ಲು ಹೋಯ್ತು, ಕಲ್ಲಿಗತ್ತಿದ ಬೆಲ್ಲನೂ ಹೋಯ್ತು ಎಂಬ ಗಾದೆ ಮಾತಿನಂತಾಗಿದೆ ಎಂದು ರೈತರು ಹಾಗೂ ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ಹುಸಿಯಾದ ಸರ್ಕಾರದ ಭರವಸೆಗಳು: 2012-13ರಲ್ಲಿ ಸೈದಾಪುರ ಸಮೀಪದ ಕಡೇಚೂರು-ಬಾಡಿಯಾಳ-ಶೆಟ್ಟಿಹಳ್ಳಿ ಗ್ರಾಮಗಳ ರೈತರ ಸುಮಾರು 3,232.22 ಎಕರೆ ಭೂ ಪ್ರದೇಶವನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿತು. ಆಗ ಸರ್ಕಾರ ಭೂಮಿ ನೀಡಿದ ಪ್ರತಿ ರೈತ ಕುಟುಂಬದಲ್ಲಿನ ಸದಸ್ಯನಿಗೆ ವಿದ್ಯಾರ್ಹತೆಯ ಆಧಾರದ ಮೇಲೆ ಉದ್ಯೋಗ ಮತ್ತು ಕೈಗಾರಿಕೆಗಳಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು. ನಂತರ ಉದ್ಯೋಗವನ್ನು ಅರಸಿ ದೂರದ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಸ್ಥಳೀಯರಿಗೆ ಉದ್ಯೋಗ ನೀಡಲು ಮೊದಲ ಆದ್ಯತೆ ನೀಡುವುದಾಗಿ ಆಶ್ವಾಸನೆ ನೀಡಿತು. ಆದರೆ ಸರ್ಕಾರ ನೀಡಿದ ಭರವಸೆಗಳಿಗೆ ದಶಕಗಳೇ ಕಳೆದರೂ ಕೂಡ ಒಂದೇ ಒಂದು ಭರವಸೆ ಈಡೇರದೆ ಕೇವಲ ಹುಸಿ ಭರವಸೆಯಾಗಿವೆ. ಜಮೀನು ಕಳೆದುಕೊಂಡವರು ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಕಡೇಚೂರು-ಬಾಡಿಯಾಳ ಗ್ರಾಮದ ರೈತರು ಅಲವತ್ತುಕೊಂಡರು.

ರಾಸಾಯನಿಕ ಕಂಪನಿಗಳಿಂದ ಜನ ಹೈರಾಣು: ಭೂಮಿ ಕಳೆದುಕೊಂಡ ರೈತರ ನೆರವಿಗೆ ಧಾವಿಸಬೇಕಾದ ಸರ್ಕಾರದ ಸ್ಪಂದನೆ ಸಿಗದಿರುವುದು ಒಂದೆಡೆಯಾದರೆ, ಸ್ಥಾಪನೆಯಾದ ಪರಿಸರ ಮಾಲಿನ್ಯಕಾರಕ ರಾಸಾಯನಿಕ ಕಂಪನಿಗಳಿಂದ ಹೊರಬರುವ ದುರ್ವಾಸನೆಯು ಕಡೇಚೂರು-ಬಾಡಿಯಾಳ-ಶೆಟ್ಟಿಹಳ್ಳಿ ಗ್ರಾಮದ ಜನರನ್ನು ನಿತ್ಯ ಹೈರಾಣಾಗಿಸಿದೆ.

ADVERTISEMENT

‘ರಾಸಾಯನಿಕ ಕಂಪನಿಗಳಿಂದಾಗಿ ಮುಂದಿನ ದಿನಗಳಲ್ಲಿ ಶುದ್ಧ ಗಾಳಿ ಸಿಗದೆ ಜನರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ’ ಎಂದು ಕಡೇಚೂರು ರೈತ ಮಹಿಬೂಬ ಅಲಿ ಹೇಳುತ್ತಾರೆ.

ದಲ್ಲಾಳಿಗಳ ಹಾವಳಿಯಿಂದ ಬೇಸತ್ತ ರೈತರು: ಪ್ರಸ್ತುತ ಕೈಗಾರಿಕೆ ಪ್ರದೇಶದಲ್ಲಿ ಶೇ 50ರಿಂದ 60 ರಷ್ಟು ರಾಸಾಯನಿಕ ಕಂಪನಿಗಳು ಸ್ಥಾಪನೆಯಾಗಿವೆ. ಅದರಲ್ಲಿ ಕೆಲಸ ನಿರ್ವಹಿಸುವ ಕಾವಲುಗಾರರು, ಕಾರ್ಮಿಕರು ಹಾಗೂ ಕಂಪನಿಗಳಿಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ತರವುದು ಕೂಡ ಬೇರೆ ರಾಜ್ಯ, ಊರುಗಳಿಂದ ಬಂದ ದಲ್ಲಾಳಿಗಳ ಮುಖಾಂತರ ನಡೆಯುತ್ತಿದೆ. ಇದರಿಂದ ರೈತರಿಗೆ ಮತ್ತು ಸ್ಥಳೀಯರಿಗೆ ಕೈಗಾರಿಕೆಗಳಿಂದ ನಯಾಪೈಸೆ ಲಾಭವಾಗುತ್ತಿಲ್ಲ ಎಂದು ಕಡೇಚೂರು ರೈತ ಅಂತಪ್ಪ ಸಾಧು ಕಾನುಕುರ್ತಿ ಬೇಸರ ವ್ಯಕ್ತಪಡಿಸಿದರು.

ಉದ್ಯೋಗ ಮತ್ತು ಸೌಲಭ್ಯಗಳಲ್ಲಿ ಭೂಮಿ ನೀಡಿದ ರೈತರಿಗೆ ಮೊದಲ ಆದ್ಯತೆ ನೀಡಬೇಕೆನ್ನುವ ಕೈಗಾರಿಕಾ ವಲಯದ ಆದೇಶವನ್ನು ಧಿಕ್ಕರಿಸಿದವರ ವಿರುದ್ಧ ಜಿಲ್ಲಾಡಳಿತ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು. ನಮಗೆ ನ್ಯಾಯ ಒದಗಿಸಿಕೊಡಬೇಕು.
ನಾಗಪ್ಪ ಸಜ್ಜನ ಕಡೇಚೂರು ರೈತ ಮುಖಂಡ
ಸರ್ಕಾರಗಳ ಹುಸಿ ಭರವಸೆಗಳು ಮತ್ತು ರಾಸಾಯನಿಕ ಕಂಪನಿಗಳ ದುರ್ವಾಸನೆಯಿಂದ ಜನರಿಗೆ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿದೆ. ಇದರಿಂದ ಹೊರಬರಲು ಸಾಧ್ಯವಾಗದೆ ದಿಕ್ಕು ತೋಚದಂತಾಗಿದೆ.
ಸಯ್ಯದ್ ಮುಕ್ತಾರ್ ಮಹಮ್ಮದ್ ನದ್ವಿ ಕಡೇಚೂರು ರೈತ
ಪರಿಸರ ಮಾಲಿನ್ಯದ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಕೈಗಾರಿಕಾ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿ ಶೀಘ್ರ ಸಂದರ್ಶನ ನಡೆಸಿ ತೆಗೆದುಕೊಳ್ಳುತ್ತೇವೆ ಎಂದು ಕಂಪನಿ ಮಾಲೀಕರು ತಿಳಿಸಿದ್ದಾರೆ.
ರೇಖಾ ಮ್ಯಾಗೇರಿ ಕೈಗಾರಿಕಾ ಜಂಟಿ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.