
ಯಾದಗಿರಿ: ಹೊಲದಲ್ಲಿ ಬೆಳೆದು ನಿಂತ ಪೈರಿಗೆ ಎಳ್ಳ ಅಮಾವಾಸ್ಯೆಯ ಅಂಗವಾಗಿ ಶುಕ್ರವಾರ ಬೆಳೆಕೊಟ್ಟ ಭೂತಾಯಿಗೆ ಕೃತಜ್ಞತೆಯ ರೂಪದಲ್ಲಿ ಚರಗ ಚೆಲ್ಲಿದ ರೈತರು ಭಕ್ತಿಯ ಕೃತಜ್ಞತೆ ಸಲ್ಲಿಸಿದರು.
ಕ್ಯಾಲೆಂಡರ್ ವರ್ಷದ ಕೊನೆಯ ಹಬ್ಬವಾದ ಮಣ್ಣಿನ ಪೂಜೆಯ ಎಳ್ಳ ಅಮಾವಾಸ್ಯೆಯನ್ನು ರೈತ ಸಮೂಹ ಸಂಭ್ರಮದಿಂದ ಆಚರಿಸಿತು. ಬಂಧು– ಬಾಂಧವರೊಂದಿಗೆ ಪ್ರಕೃತಿಯ ಮಡಿಲಲ್ಲಿ ತರಹೇವಾರಿ ಭಕ್ಷ್ಯ ಸವಿದರು.
ಚರಗ ಚೆಲ್ಲುವ ಹಿಂದಿನ ದಿನವೇ ರೈತ ಮಹಿಳೆಯರು ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದರು. ಮಾರುಕಟ್ಟೆಗೆ ತೆರಳಿ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿದರು. ನಸುಕಿನ ಜಾವದಲ್ಲಿ ಎದ್ದು ಬಿಳಿ ಜೋಳ, ಸಜ್ಜೆ ಕಡಬ, ಕಡಲೆ ಹೋಳಿಗೆ, ಪುಂಡಿ ಪಲ್ಯ, ಬದನೆಕಾಯಿ ಪಲ್ಯ, ಪಾಲಕ ಪಲ್ಯ, ಈರುಳ್ಳಿ ಸೊಪ್ಪು– ಟೊಮೆಟೊ–ಈರುಳ್ಳಿ ಮಿಶ್ರಿತ ಭರ್ತಾ, ಅನ್ನ–ಸಾರು ಸಿದ್ಧಪಡಿಸಿದರು. ಅವುಗಳ ಜೊತೆಗೆ ಜೋಳದರೊಟ್ಟಿ, ಶೇಂಗಾ ಎಳ್ಳಿನ ಹೋಳಿಗೆ, ಬಾನ, ನವಣೆ ಅನ್ನ, ಶೇಂಗಾ ಪುಡಿ, ಹಪ್ಪಳ, ಸಂಡಿಗೆ, ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಭಜ್ಜಿ, ಕಾಳು, ಎಣ್ಣೆಗಾಯಿ ಅಡುಗೆಯೂ ಮಾಡಿಕೊಂಡರು.
ಮನೆ ಹಾಗೂ ಗ್ರಾಮದಲ್ಲಿನ ದೇವಸ್ಥಾನಗಳಿಗೆ ನೈವೇದ್ಯ ಸಮರ್ಪಿಸಿದರು. ದೊಡ್ಡ ಬುಟ್ಟಿಗಳಲ್ಲಿ ಆಹಾರ ಪದಾರ್ಥಗಳನ್ನು ತುಂಬಿಕೊಂಡು ಅಲಂಕರಿಸಿದ ಎತ್ತುಗಳ ಹೆಗಲಿಗೆ ಬಂಡಿ ಗಾಡಿಯ ನೊಗ ಇರಿಸಿ ಜೋಳ (ಬಹುತೇಕರು ಜೋಳದ ಹೊಲಗಳಿಗೆ ಹೋಗುವುದು ವಾಡಿಕೆ), ಶೇಂಗಾ, ತೊಗರಿ, ಹತ್ತಿ ಹೊಲಗಳತ್ತ ತೆರಳಿದರು. ಬನ್ನಿ ಮರದಡಿ ಬುಟ್ಟಿಗಳನ್ನು ಇರಿಸಿದರು. ಬನ್ನಿ ಮರದ ಬುಡದಲ್ಲಿ ಐದು ಕಲ್ಲುಗಳನ್ನು ಇರಿಸಿ ಪಾಂಡವರ ಪ್ರತಿರೂಪದಲ್ಲಿ ಅವುಗಳಿಗೆ ಪೂಜೆ ಸಲ್ಲಿಸಿದರು. ಕೆಲವರು ಬನ್ನಿ ಮರಕ್ಕೆ ಕೆಂಪು ಬಟ್ಟೆಯನ್ನು ಸುತ್ತಿ ಅಥವಾ ಹೊಸ ಸೀರೆ ಇರಿಸಿ ವಿಭೂತಿ, ಕುಂಕುಮ ಹಚ್ಚಿ ಪೂಜಿಸಿದರು.
ತಾವು ತಂದಿದ್ದ ಅಡುಗೆ ಪದಾರ್ಥವನ್ನು ಭೂತಾಯಿಗೆ ಎಡೆಮಾಡಿ ಇರಿಸಿದರು. ಎಲ್ಲ ಪದಾರ್ಥಗಳನ್ನು ತಟ್ಟೆಯಲ್ಲಿ ಮಿಶ್ರಣ ಮಾಡಿದರು. ‘ಹುಲುಲ್ಲಿಗ್ಯೋ ಚಳಮ್ರಿಗ್ಯೊ’ ಎನ್ನುತ್ತಾ ಹೊಲದಲ್ಲಿ ಚರಗ ಚೆಲ್ಲಿ ಭೂತಾಯಿಗೆ ಭಕ್ತಿಯ ಕೃತಜ್ಞತೆಯನ್ನು ಸಮರ್ಪಿಸಿದರು. ಭೂಮಿಯಲ್ಲಿ ಬೆಳೆದುನಿಂತ ಪೈರು ಮನೆಗೆ ಬಂದು ಸಂಪತ್ತಿನ ಮಹಾಲಕ್ಷ್ಮಿಯಾಗಿ ಮನೆ ತುಂಬಲಿ ಎಂದು ಪ್ರಾರ್ಥಿಸಿಕೊಂಡರು.
ಹುಲ್ಲು ಕಡ್ಡಿಯೂ ಅಮೃತದಂತೆ: ‘ಹುಲುಲ್ಲಿಗ್ಯೋ ಚಳಮ್ರಿಗ್ಯೊ’ ಎಂದರೆ ಹುಲ್ಲುಹುಲ್ಲಿಗೆ ಚೆಲ್ಲಲಿ ಅಮೃತ. ಅಂದರೆ; ಭೂಮಿಯಲ್ಲಿ ಬೆಳೆದ ಪ್ರತಿಯೊಂದು ಹುಲ್ಲು ಕಡ್ಡಿಯೂ ಅಮೃತದಂತೆ ರಸಭರಿತವಾಗಲಿ ಎಂಬುದು ರೈತರ ಉದಾತ್ತ ಆಶಯ.
ಸಿಗದ ಜೋಳದ ಸೀತಿನಿ ಭಾಗ್ಯ: ಎಳ್ಳ ಅಮಾವಾಸ್ಯೆ ವೇಳೆಗೆ ಜೋಳದ ತೆನೆಗಳು ಕಾಳಿನಿಂದ ತುಂಬಿ ಸೀತಿನಿ (ಸಿಹಿತಿನಿ) ಆಗಿರುತ್ತಿದ್ದವು. ಚರಗ ಚೆಲ್ಲಿ ಭಕ್ಷ್ಯ ಭೋಜನ ಸವಿದು, ವಿಶ್ರಾಂತಿ ಪಡೆದ ಕೆಲಹೊತ್ತಿನ ಬಳಿಕ ಸೀತಿನಿ ತಿನ್ನುತ್ತಿದ್ದರು. ಈ ಬಾರಿ ಸೀತಿನಿ ಸವಿಯುವ ಭಾಗ್ಯ ಬಹುತೇಕರಿಗೆ ಸಿಗಲಿಲ್ಲ. ವಿಪರೀತ ಮಳೆಯಿಂದಾಗಿ ಬಹುತೇಕ ಕಡೆಗಳಲ್ಲಿ ಜೋಳ ಬಿತ್ತನೆಯು ವಿಳಂಬವಾಗಿದೆ. ಹೀಗಾಗಿ, ಜೋಳವು ಕಾಳು ಕಟ್ಟುವ ಮಟ್ಟಿಗೆ ಬೆಳವಣಿಗೆ ಆಗಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.