ಯಾದಗಿರಿ: ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದ ವ್ಯಾಪ್ತಿಯಲ್ಲಿ ಜಮೀನುಗಳಿಗೆ ಸಂಪರ್ಕಿಸುವ ರಸ್ತೆಯನ್ನು ಮುಚ್ಚಿಸಿದ್ದು, ಅದನ್ನು ತೆರವುಗೊಳಿಸಬೇಕು ಎಂದು ಗ್ರಾಮದ ರೈತರು ಜಿಲ್ಲಾಧಿಕಾರಿ ಹರ್ಷಲ್ ಭೊಯರ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರಿಗೆ ಗುರುವಾರ ಮನವಿ ಮಾಡಿದರು.
ಶಿರವಾಳ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲು ಹಳಿ ನಡುವಿನ ಸರ್ವೆ ನಂ.125ರಿಂದ 297ರವರೆಗಿನ ಜಮೀನುಗಳಿಗೆ ಸಂಪರ್ಕಿಸುವ ರಸ್ತೆ ಮುಚ್ಚಲಾಗಿದೆ. ಇದರಿಂದ ಸಾವಿರಾರು ರೈತರಿಗೆ ತೊಂದರೆ ಆಗುತ್ತಿದೆ. ಈ ಮಾರ್ಗದಲ್ಲಿ ಸೇತುವೆ ನಿರ್ಮಿಸಿ, ಹೊಲಗಳಿಗೆ ಹೋಗಿ– ಬರಲು ರಸ್ತೆ ಮಾಡಿಕೊಡಬೇಕು ಎಂದು ಕೋರಿದರು.
ರಸ್ತೆ ಮುಚ್ಚಿದ್ದರಿಂದ ಹೊಲದ ಕೆಲಸಗಳಿಗೆ ಅಡ್ಡಿಯಾಗುತ್ತಿದೆ. ಹಲವು ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಲವತ್ತುಕೊಂಡರು.
ರೈತರಾದ ಮಲ್ಲಿಕಾರ್ಜುನ, ಮಹಿಬೂಬ್, ನಿಂಗಣ್ಣ, ಮಕಬುಲ್, ಈರಣ್ಣ, ಕಲ್ಲಪ್ಪ, ವೀರಭದ್ರ, ರಾಜಶೇಖರ, ಬಸವರಾಜ, ನಾಗಪ್ಪ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.