ADVERTISEMENT

ಮೈಲಾಪುರ ಜಾತ್ರೆಯ ಅಂತಿಮ ಪೂರ್ವ ಸಿದ್ಧತೆ ಪರಿಶೀಲನೆ: ಶಾಸಕ ಚನ್ನಾರೆಡ್ಡಿ ಪಾಟೀಲ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 7:58 IST
Last Updated 13 ಜನವರಿ 2026, 7:58 IST
ಯಾದಗಿರಿ ತಾಲ್ಲೂಕಿನ ಮೈಲಾಪುರಕ್ಕೆ ಸೋಮವಾರ ಭೇಟಿ ನೀಡಿ ಜಾತ್ರೆಯ ಪೂರ್ವ ಸಿದ್ಧತೆಯನ್ನು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಸೇರಿ ಇತರೆ ಅಧಿಕಾರಿಗಳು ಪರಿಶೀಲಿಸಿದರು
ಯಾದಗಿರಿ ತಾಲ್ಲೂಕಿನ ಮೈಲಾಪುರಕ್ಕೆ ಸೋಮವಾರ ಭೇಟಿ ನೀಡಿ ಜಾತ್ರೆಯ ಪೂರ್ವ ಸಿದ್ಧತೆಯನ್ನು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಸೇರಿ ಇತರೆ ಅಧಿಕಾರಿಗಳು ಪರಿಶೀಲಿಸಿದರು   

ಯಾದಗಿರಿ: ‘ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆಗೆ ಲಕ್ಷಾಂತರ ಭಕ್ತರು ಬರುತ್ತಾರೆ. ಅವರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿ, ಪೊಲೀಸರು ನಿರಂತರವಾಗಿ ಕಣ್ಗಾವಲು ಇರಿಸಬೇಕು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಸೂಚಿಸಿದರು.

ತಾಲ್ಲೂಕಿನ ಮೈಲಾಪುರದಲ್ಲಿ ಸೋಮವಾರ ಮೈಲಾರಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳ ನೂತನ ಕಾರ್ಯಾಲಯ ಉದ್ಘಾಟಿಸಿ, ಜಾತ್ರೆಯ ಸಿದ್ಧತೆಯ ಸಭೆ ನಡೆಸಿ ಅವರು ಮಾತನಾಡಿದರು.

‘ಜಾತ್ರೆ ಆರಂಭದಿಂದ ಹಿಡಿದು ಮುಗಿದ ನಂತರವೂ ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಉತ್ಸವ ಮೂರ್ತಿ, ಪಲ್ಲಕ್ಕಿ ಮೆರವಣಿಗೆ ಹಾಗೂ  ಸರಪಳಿ ಹರಿಯುವ ವೇಳೆ ಬಿಗಿ ಭದ್ರತೆ ಕಲ್ಪಿಸಬೇಕು. ಪುಣ್ಯಸ್ನಾನ ಮಾಡಿ, ಸರಪಳಿ ಹರಿದ ಬಳಿಕ ಕೆಲಸ ಮುಗಿಯಿತು ಎಂದು ಯಾರೂ ಹೋಗಬಾರದರು. ಸಂಜೆಯ ವರೆಗೂ ಭದ್ರತೆಯ ವ್ಯವಸ್ಥೆ ಮಾಡಬೇಕು’ ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್‌ಪಿ ಸುರೇಶ್ ನಾಯಕ್, ‘ಜಾತ್ರೆಯ ಭದ್ರತೆಗಾಗಿ 1000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಮೂರು ಶಿಫ್ಟ್‌ಗಳಲ್ಲಿ ಪೊಲೀಸ್ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಣೆ ಮಾಡುವರು’ ಎಂದರು. ‘ನಾನೂ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತೇನೆ’ ಎಂದು ಶಾಸಕರು ಹೇಳಿದರು.

ಪ್ರಾಧಿಕಾರ ರಚನೆ ಚರ್ಚೆ: ‘ಮೈಲಾರಲಿಂಗೇಶ್ವರ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಈ ಭಾಗದ ನಾಗರಿಕರ, ಭಕ್ತರ ಬಹುದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಈಗಾಗಲೇ ಈ ಕುರಿತು ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳನ್ನು ಆರಂಭಿಸಲಾಗಿದೆ. ಕೆಲವು ಕಾನೂನು ತೊಡಕುಗಳಿಂದ ಇದು ಸಾಧ್ಯವಾಗಿಲ್ಲ. ಪ್ರಯತ್ನಗಳನ್ನು ನಿರಂತರವಾಗಿ ಮುಂದುವರಿಸಲಾಗುವುದು’ ಎಂದು ಪ್ರತಿಕ್ರಿಯೆ ನೀಡಿದರು.

‘ಜಾತ್ರೆ ಅಂಗವಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸುಮಾರು ₹ 30 ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಿಂದ ಮೂರು ಅಂತಸ್ತಿನ ಕಾರ್ಯನಿರ್ವಾಹಕ ಅಧಿಕಾರಿಗಳ ನೂತನ ಕಾರ್ಯಾಲಯ ಕಟ್ಟಡ ಉದ್ಘಾಟಿಸಲಾಗಿದೆ. ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು’ ಎಂದರು.

ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿ, ‘ಕ್ಷೇತ್ರದ ಅಭಿವೃದ್ಧಿಯ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಪ್ರಾಧಿಕಾರ ರಚನೆಯ ಬಗ್ಗೆಯೂ ಪ್ರಸ್ತಾವ ಕಳುಹಿಸಲಾಗುವುದು. ದೇವಸ್ಥಾನಕ್ಕೆ ಎಷ್ಟು ಜನರು ಬರುತ್ತಾರೆ, ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಮಾಡಿದರೆ ಜನರ ಸಂಖ್ಯೆ ಹೆಚ್ಚಾಗಿ ಆದಾಯವೂ ವೃದ್ಧಿಯಾಗುವ ಬಗ್ಗೆಯೂ ಪ್ರಸ್ತಾಪಿಸಿ ಸಲ್ಲಿಕೆ ಮಾಡುತ್ತೇವೆ’ ಎಂದು ಹೇಳಿದರು.

‘ಜಾತ್ರೆಗೆ ಬರುವ ಭಕ್ತರಿಗೆ ತಾತ್ಕಾಲಿಕ ಟೆಂಟ್ ವ್ಯವಸ್ಥೆ ಮಾಡುವಲ್ಲಿ ರಿಸ್ಕ್ ಇದೆ. ಈ ಬಗ್ಗೆ ಚಿಂತನೆ ಮಾಡುತ್ತೇವೆ. ಈಗಾಲೇ ಕೆರೆಗಳ ಮೆಟ್ಟಿಲು, ಅಂಗಡಿಗಳ ಕಟ್ಟಡ, ಕಲ್ಯಾಣ ಮಂಟಪದ ಕುರಿತು ಕ್ರಿಯಾ ಯೋಜನೆ ಹಾಕಿಕೊಂಡಿದ್ದೇವೆ’ ಎಂದರು.

ತಹಶೀಲ್ದಾರ್‌ ಸುರೇಶ ರಾಣಪ್ಪ ಅಂಕಲಗಿ ಮಾತನಾಡಿ, ‘ಸ್ವಚ್ಛತೆಗಾಗಿ 100 ನೌಕರರನ್ನು ನಿಯೋಜನೆ ಮಾಡಿದ್ದೇವೆ. ಅಗ್ನಿಶಾಮಕ, ಪಶುಪಾಲನ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ನೂರಾರು ಸಿಬ್ಬಂದಿ ಜಾತ್ರೆಯ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ’ ಎಂದು ಹೇಳಿದರು. 

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ, ಧರ್ಮದತ್ತಿ ಇಲಾಖೆಯ ಸಹಾಯಕ ನಿರ್ದೇಶಕ ವಿಶ್ವನಾಥ, ಪಿಎಸ್‌ಐ ಹನುಮಂತ ಬಂಕಲಿಗಿ, ಗ್ರಾಮ ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ, ದೇವಸ್ಥಾನದ ಪೀಠಾಧಿಪತಿ ಮಹಾದೇವಪ್ಪ ಪೂಜಾರಿ ಸೇರಿ ಇತರರು ಉಪಸ್ಥಿತರಿದ್ದರು.

ಮಧ್ಯರಾತ್ರಿಯಿಂದಲೇ ಮಹಾಪೂಜೆ

‘ಸಂಕ್ರಾಂತಿ ಅಂಗವಾಗಿ ಮಂಗಳವಾರ ಮಧ್ಯರಾತ್ರಿಯಿಂದಲೇ ಮೈಲಾರಲಿಂಗೇಶ್ವರರ ಮಹಾಪೂಜೆ ಆರಂಭವಾಗಲಿದೆ’ ಎಂದು ದೇವಸ್ಥಾನದ ಪ್ರಮುಖ ಖಂಡಪ್ಪ ಪೂಜಾರ ತಿಳಿಸಿದರು. ‘ರಾತ್ರಿ 12 ಗಂಟೆ ಆಗುತ್ತಿದ್ದಂತೆ ಮಕರ ಸಂಕ್ರಾಂತಿ ಆರಂಭವಾಗುತ್ತದೆ. ಹೀಗಾಗಿ ದೇವಸ್ಥಾನದಲ್ಲಿ ಮಲ್ಲಯ್ಯನ ಮೂರ್ತಿಗೆ ಮಹಾಪೂಜೆ ರುದ್ರಾಭಿಷೇಕ ಭಂಡಾರ ಪೂಜೆ ಭಂಡಾರ ಅಲಂಕಾರವು ಬೆಳಗಿನ ಜಾವದವರೆಗೂ ನಡೆಯಲಿವೆ’ ಎಂದರು.

ಹೆಣ್ಣು ಮಕ್ಕಳ ಭೋಗಿ

ಇಂದು ಮಕರ ಸಂಕ್ರಾಂತಿಯ ಅಂಗವಾಗಿ ಮಂಗಳವಾರ ಹೆಣ್ಣು ಮಕ್ಕಳ ಭೋಗಿ ಇದ್ದು ಮಹಿಳೆಯರು ಎಳ್ಳು– ಅರಿಶಿನ ಹಚ್ಚಿಕೊಂಡು ಸ್ಥಾನ ಮಾಡಿ ದೇವರನ್ನು ಪೂಜಿಸುವರು. ಬಳಿಕ ಉಮ್ಮಿಗೆ ಸೀತನಿ ಸುಲುಗಾಯಿ ರೂಪದಲ್ಲಿ ಹೊಸ ಬೆಳೆಯ ಕಾಳುಗಳನ್ನು ತಿನ್ನುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.