ಯಾದಗಿರಿ: ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಭೀಮಾ ನದಿ ಪ‍್ರವಾಹದ ಸಂತ್ರಸ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ತಡರಾತ್ರಿವರೆಗೆ ಪ್ರತಿಭಟನೆ ಮಾಡಿದರು.
ವಿಪರೀತ ಮಳೆ ಹಾಗೂ ನದಿಯ ಪ್ರವಾಹಕ್ಕೆ ತುತ್ತಾಗುತ್ತಿರುವ ಹುರಸಗುಂಡಗಿ ಗ್ರಾಮದ ಜನರಿಗೆ ಸೂಕ್ತ ಪರಿಹಾರ ನೀಡಿ, ಶಾಶ್ವತ ನೆಲೆಯನ್ನು ಕಲ್ಪಿಸುವಂತೆ ಆಗ್ರಹಿಸಿದರು. ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಮನವಿ ಪತ್ರ ಸಲ್ಲಿಸಿವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟುಹಿಡಿದ ಗ್ರಾಮಸ್ಥರು ತಡರಾತ್ರಿವರೆಗೆ ಪ್ರತಿಭಟನೆಗೆ ಕುಳಿತರು.
ಕಲಬುರಗಿಯಿಂದ ವಾಪಸಾದ ಜಿಲ್ಲಾಧಿಕಾರಿಯನ್ನು ರಾತ್ರಿ 11.40ರ ಸುಮಾರಿಗೆ ಭೇಟಿಯಾಗಿ, ತಮ್ಮ ಮನವಿ ಪತ್ರವನ್ನು ಸಲ್ಲಿಸಿದರು. ನೆರೆ ಪೀಡಿತ ಗ್ರಾಮಕ್ಕೆ ತಕ್ಷಣವೇ ಶಾಶ್ವತ ಪರಿಹಾರ ಒದಗಿಸುವಂತೆ ಬೇಡಿಕೆಯೂ ಇರಿಸಿದರು.
ಹುರಸಗುಂಡಗಿ ಗ್ರಾಮದಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿವೆ. ವಿಪರೀತ ಮಳೆಯಿಂದ ಭೀಮಾ ನದಿ ತುಂಬಿ ಹರಿದು ಗ್ರಾಮವನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ. ಮನೆಗಳು ನೆಲಸಮವಾಗಿ ದವಸ ಧಾನ್ಯಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ರಾತ್ರಿ ಜೀವ ಭಯದಲ್ಲಿ ಮಲಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವು ಶಾಶ್ವತ ಮನೆಗಳನ್ನು ನಿರ್ಮಿಸಿ ಕೊಡಬೇಕು ಎಂದರು.
ಪುನರ್ವಸತಿಗಾಗಿ ನೀಡಿದ ಹಣದಲ್ಲಿ ಮನೆಗಳ ಬುನಾದಿಯೂ ನಿರ್ಮಿಸಿಕೊಳ್ಳಲು ಆಗುವುದಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಿ, ಬಡವರಿಗೆ ಆರ್ಥಿಕ ನೆರವು ನೀಡಲು ಕ್ರಮ ವಹಿಸಬೇಕು. ಸ್ಥಳ ಪರಿಶೀಲಿಸಿ ಶಾಶ್ವತ ಮನೆಗಳನ್ನು ಕಟ್ಟಿಸಿಕೊಡಬೇಕು. ಜೀವನೋಪಾಯಕ್ಕೆ ಸೂಕ್ತ ಪರಿಹಾರವೂ ಒದಗಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಮಹಾಲಿಂಗಪ್ಪ ನಾಯ್ಕಲ್, ಮಾರ್ತಂಡಪ್ಪ ನಾಯ್ಕಲ್, ಚಂದ್ರಶೇಖರ ಹೊಸಮನಿ, ಶೇಖರ ಬಡಿಗೇರ, ಸುಭಾಷ್ ಚಂದ್ರ, ನರಸಪ್ಪ ಬಿರನೂರು, ಶಿವಯೋಗಿ ನಾಯ್ಕಲ್, ಮಲ್ಲಿಕಾರ್ಜುನ ತೋಟಪ್ಪಗೊಳ ಸೇರಿ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.