ADVERTISEMENT

ಶಹಾಪುರ: ವಾಲ್ಮೀಕಿ ನಿಗಮದಿಂದ ಜಮೀನು ಕೊಡಿಸುವ ನೆಪದಲ್ಲಿ ವಂಚನೆ

ಸಂತ್ರಸ್ತರಿಂದ ಈಶಾನ್ಯ ವಲಯ ಐಜಿಪಿಗೆ ದೂರು

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 16:19 IST
Last Updated 23 ಆಗಸ್ಟ್ 2024, 16:19 IST
ಮಹಾದೇವ ಶಾರದಹಳ್ಳಿ
ಮಹಾದೇವ ಶಾರದಹಳ್ಳಿ   

ಶಹಾಪುರ: ತಾಲ್ಲೂಕಿನ ಸಗರ ಗ್ರಾಮದಲ್ಲಿ ಜಮೀನು ರಹಿತ ಫಲಾನುಭವಿಗಳಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಜಮೀನು ಕೊಡಿಸುವ ಭರವಸೆ ನೀಡಿ 26 ಫಲಾನುಭವಿಗಳಿಂದ ತಲಾ ₹ 1.50 ಲಕ್ಷ ಪಡೆದುಕೊಂಡು ವ್ಯಕ್ತಿ ಒಬ್ಬರು ಪರಾರಿಯಾಗಿದ್ದಾರೆ. ವಂಚನೆ ಮಾಡಿದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಶಾರದಹಳ್ಳಿ ಈಶಾನ್ಯ ವಲಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಸುಂಬಡ ಗ್ರಾಮದ ಮರಳಸಿದ್ದಪ್ಪ ಅಯ್ಯಪ್ಪ ಎಂಬ ವ್ಯಕ್ತಿಯು ಸಗರ ಗ್ರಾಮದ ಭೀಮಣ್ಣಗೌಡ ಹೊಸಳ್ಳಿ ಅವರ ಮುಖಾಂತರ ಸಮುದಾಯದ ಮಹಿಳೆಯರಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಜಮೀನು ರಹಿತರಿಗೆ ಪುಕ್ಕಟೆಯಾಗಿ 1.20 ಜಮೀನು ಕೊಡಿಸುವ ಭರವಸೆ ನೀಡಿ ಮುಂಗಡವಾಗಿ ₹1.50 ಲಕ್ಷ ಪಡೆದು ಪರಾರಿಯಾಗಿದ್ದಾನೆ. ಶಹಾಪುರ ಠಾಣೆಗೆ ಹೋಗಿ ದೂರು ಸಲ್ಲಿಸಿದರೆ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಮೋಸ ಮಾಡಿ ಹಣ ಲಪಟಾಯಿಸಿದ ವ್ಯಕ್ತಿಗಳಿಬ್ಬರು ಇನ್ನೂ ಕೆಲ ತಿಂಗಳಲ್ಲಿ ನಿಮಗೆ ಜಮೀನು ಸಿಗುತ್ತದೆ. ಈಗ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ಆಗಿದ್ದರಿಂದ ಸ್ಥಗಿತವಾಗಿದೆ ಎಂದು ಇಲ್ಲದ ಸಬೂಬು ಹೇಳಿ ಕಳುಹಿಸಿದ್ದಾರೆ. ಎರಡು ತಿಂಗಳ ಹಿಂದೆ ಗ್ರಾಮಕ್ಕೆ ತೆರಳಿ ನಾವೆಲ್ಲರೂ ವಿಚಾರಿಸಿದರೆ ಗ್ರಾಮದಿಂದ ನಾಪತ್ತೆಯಾಗಿದ್ದಾರೆ. ಸಾಲ ಮಾಡಿ ಹಣ ನೀಡಿದ್ದೇವೆ. ನಮಗೆ ದಿಕ್ಕು ತೋಚದ್ದಾಗಿದೆ ನೀವಾದರೂ ನ್ಯಾಯ ದೊರಕಿಸಿ ಕೊಡಿ ಎಂದು ವಂಚನೆಗೊಂಡ ಮಹಿಳೆಯರು ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡರು.

ತಾಲ್ಲೂಕಿನಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಜಮೀನು ಕೊಡಿಸುವುದಾಗಿ ನಂಬಿಕೆ ಹುಟ್ಟಿಸಿ ನಂತರ ಬಡ ಜನರಿಂದ ಹಣವನ್ನು ಕೀಳುವ ವ್ಯವಸ್ಥಿತ ಜಾಲ ಅಡಗಿದೆ. ಪೊಲೀಸರು ಇಂತಹ ವ್ಯಕ್ತಿಗಳನ್ನು ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ADVERTISEMENT
ಸಗರ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಮಹಿಳೆಯರಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಭೂ ಚೇತನ ಅಡಿ ಜಮೀನು ಕೊಡಿಸವ ನೆಪ ಹೇಳಿ 26 ಮಹಿಳೆಯರಿಂದ ತಲಾ ₹ 1.50 ಲಕ್ಷ ಪಡೆದು ದಲ್ಲಾಳಿ ಮೋಸ ಎಸಗಿದ್ದಾರೆ.
ಮಹಾದೇವ ಶಾರದಹಳ್ಳಿ ತಾಲ್ಲೂಕು ಅಧ್ಯಕ್ಷ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.