ADVERTISEMENT

ಯಾದಗಿರಿ ನಗರದ ರಸ್ತೆ ಗುಂಡಿಗಳಿಗೆ ಮುಕ್ತಿ

ಸಾರ್ವಜನಿಕರ ದೂರಿಗೆ ಎಚ್ಚೆತ್ತ ನಗರಸಭೆ ಆಡಳಿತ ಯಂತ್ರ

ಬಿ.ಜಿ.ಪ್ರವೀಣಕುಮಾರ
Published 29 ಅಕ್ಟೋಬರ್ 2024, 6:02 IST
Last Updated 29 ಅಕ್ಟೋಬರ್ 2024, 6:02 IST
ಯಾದಗಿರಿ ನಗರದಲ್ಲಿ ಗುಂಡಿ ಮುಚ್ಚುವ ಕಾರ್ಯ
ಯಾದಗಿರಿ ನಗರದಲ್ಲಿ ಗುಂಡಿ ಮುಚ್ಚುವ ಕಾರ್ಯ   

ಯಾದಗಿರಿ: ನಗರಸಭೆ ವ್ಯಾಪ್ತಿಯ ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ಕೊಂಚ ಮಟ್ಟಿಗೆ ನಗರ ನಿವಾಸಿಗಳಿಗೆ ಓಡಾಡಲು ಅನುಕೂಲವಾಗಿದೆ.

ಈ ಬಾರಿ ಮುಂಗಾರು, ಹಿಂಗಾರು ಮಳೆ ಅಬ್ಬರಿಸಿದ್ದು, ಇದರಿಂದ ನಗರ ವಿವಿಧೆಡೆ ಗುಂಡಿಗಳ ಕಾರುಬಾರು ನಡೆದಿತ್ತು. ಮುಂಗಾರು ಮುಗಿದರೂ ಗುಂಡಿಗಳನ್ನು ಅಧಿಕಾರಿಗಳು ಮುಚ್ಚದ ಕಾರಣ ಸಾರ್ವಜನಿಕರು ಹಿಡಿಶಾಪ ಹಾಕಿ ಸಂಚಾರ ಮಾಡುತ್ತಿದ್ದರು.

ಸಾರ್ವಜನಿಕರು ಪದೇ ಪದೇ ದೂರು ನೀಡಿದ ನಂತರ ನಗರಸಭೆ ಆಡಳಿತ ಯಂತ್ರ ಎಚ್ಚೆತ್ತು ಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಿದೆ.

ADVERTISEMENT

ನಗರದ ಮೂಲಕ ಹಾದುಹೋಗುವ ಕಲಬುರಗಿ–ಗುತ್ತಿ ಮತ್ತು ಸಿಂದಗಿ–ಕೊಡಂಗಲ್‌ವರೆಗಿನ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹೊರತುಪಡಿಸಿ ನಗರದೊಳಗಿನ ಬಹುತೇಕ ರಸ್ತೆಗಳ ಗುಂಡಿ ಮುಚ್ಚಲಾಗಿದೆ. ಲುಂಬಿನಿ ಕೆರೆ ರಸ್ತೆ, ಮೈಲಾಪುರ ಅಗಸಿ, ಗಂಜ್ ಏರಿಯಾ, ಲಕ್ಷ್ಮೀನಗರ ಹೀಗೇ ಅನೇಕ ಕಡೆ ಗುಂಡಿ ಮುಚ್ಚಲಾಗಿದೆ. 

ನಗರಸಭೆ ಅಧ್ಯಕ್ಷೆಯಾಗಿ ಆಯ್ಕೆ:

ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಅಧ್ಯಕ್ಷ ಸ್ಥಾನ ಮೀಸಲಾತಿ ಗೊಂದಲದಿಂದ ಖಾಲಿಯಾಗಿತ್ತು. ಇದೇ ಅಕ್ಟೋಬರ್ 3ರಂದು ನಡೆದ ಚುನಾವಣೆಯಲ್ಲಿ ನಗರಸಭೆ ಅಧ್ಯಕ್ಷೆಯಾಗಿ ಲಲಿತಾ ಅನ‍ಪುರ ಅವರು ಆಯ್ಕೆಯಾಗಿದ್ದು, ಅವರಿಗೆ ಸಮಸ್ಯೆಗಳ ಸರಮಾಲೆ ಶುರುವಾಗಿತ್ತು.

‘ನಗರದ ರಸ್ತೆಗಳ ದುಸ್ಥಿತಿ ಬಗ್ಗೆ ಆಗಾಗ ಸಾಕಷ್ಟು ದೂರುಗಳು ಬರುತ್ತಿದ್ದವು. ಆದ್ದರಿಂದ ನಗರಸಭೆ ಅನುದಾನದಲ್ಲಿ ಗುಂಡಿಗಳನ್ನು ತುಂಬಿಸಲು ಆರಂಭಿಸಲಾಗಿದೆ. ಶೇ 75ಕ್ಕೂ ಹೆಚ್ಚು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದವುಗಳನ್ನು ವಿಳಂಬ ಮಾಡದೆ ತಕ್ಷಣವೇ ಪೂರ್ಣಗೊಳಿಸಲಾಗುವುದು’ ಎನ್ನುತ್ತಾರೆ ಅಧ್ಯಕ್ಷೆ ಲಲಿತಾ ಅನಪುರ.

ರಸ್ತೆ ದತ್ತುಗೆ ಸ್ಪಂದನೆ:

ಈ ಮುಂಚೆ ರಸ್ತೆಗಳ ದುರಸ್ತಿಗೆ ಆಗ್ರಹಿಸಿದ್ದ ಅಂತರರಾಷ್ಟ್ರೀಯ ಹಾಸ್ಯ ಕಲಾವಿದ ಬಸವರಾಜ ಮಾಮನಿ ಅವರು ಗಡುವು ನೀಡಿದ್ದರು. ಆದರೂ ಯಾರೂ ಗುಂಡಿ ಮುಚ್ಚದ ಕಾರಣ ರಸ್ತೆಯನ್ನು ದತ್ತು ಪಡೆದು ಅಲ್ಲಿ ಗುಂಡಿ ಮುಚ್ಚುವ ಬಗ್ಗೆ ಅಭಿಪ‍್ರಾಯ ವ್ಯಕ್ತಪಡಿಸಿದ್ದರಿಂದ ಇದು ಜಿಲ್ಲಾಡಳಿತ ಮತ್ತು ನಗರಸಭೆಗೆ ಮುಜುಗರದ ಸನ್ನಿವೇಶ ಸೃಷ್ಟಿಯಾಗಿತ್ತು. ಕೂಡಲೇ ರಸ್ತೆಗಿಳಿದ ಅಧ್ಯಕ್ಷೆ ಅನ‍ಪುರ, ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳ ಜತೆಗೂಡಿ ಮುಚ್ಚಿಸಿದರು. ಮೊದಲಿಗೆ ₹7 ಲಕ್ಷ ವೆಚ್ಚದ ಅಂದಾಜು ಪಟ್ಟಿ ತಯಾರಿಸಿ ಗುಂಡಿ ಮುಚ್ಚಲು ಆರಂಭಿಸಲಾಯಿತು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಅವರು ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಸ್ತೆಗಳ ದುರವಸ್ಥೆಗೆ ಅಧಿಕಾರಿಗಳಿಗೆ ತಾಕೀತು ಮಾಡಿ ಶೀಘ್ರ ದುರಸ್ತಿಗೆ ಸೂಚಿಸಿದ್ದರು.

ಆರಂಭ ಶೂರತ್ವ ಆಗದಿರಲಿ

ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ಅವರು ಪ್ರಥಮ ಪ್ರಜೆಯಾಗಿ ಆಯ್ಕೆಯಾದ ನಂತರ ಹಲವಾರು ಗಮನಾರ್ಹ ಬದಲಾವಣೆಗಳನ್ನು ಮಾಡುತ್ತಿದ್ದು ಇದು ಆರಂಭ ಶೂರತ್ವ ಆಗದಿರಲಿ ಎನ್ನುವ ಮಾತುಗಳು ನಗರ ನಿವಾಸಿಗಳ ಮಾತಾಗಿದೆ.‌

ಕಳೆದ ಬಾರಿ ಅಧ್ಯಕ್ಷರಾಗಿದ್ದವರು ಮೊದ ಮೊದಲು ನಗರ ಸಂಚಾರ ಮಾಡಿ ಅನಧಿಕೃತ ಕುಡಿಯುವ ನೀರಿನ ಘಟಕಗಳನ್ನು ಮುಚ್ಚಿಸಿದ್ದರು. ನಂತರ ರಸ್ತೆ ಸುಧಾರಣೆಗೆ ಕ್ರಮ ವಹಿಸಿದ್ದರು. ಆನಂತರ ಯಾವುದೋ ಒತ್ತಡಕ್ಕೆ ಸಿಲುಕಿ ಅನಧಿಕೃತವಾಗಿದ್ದ ಶುದ್ಧ ನೀರಿನ ಘಟಕಗಳನ್ನು ಪುನಾರಂಭಕ್ಕೆ ಅನುಮತಿ ನೀಡಿದ್ದರು. ಅದರಂತೆ ಈಗಿರುವ ನೂತನ ಅಧ್ಯಕ್ಷರು ನಗರದಲ್ಲಿ ಪ್ರತಿ ದಿನ ಸಂಚಾರ ಮಾಡುತ್ತಿದ್ದು ಇದು ಕೂಡ ಆರಂಭದಲ್ಲಿ ಮಾತ್ರ ಇರದೇ ತಮ್ಮ ಅಧಿಕಾರ ಅವಧಿ ಮುಕ್ತಾಯ ಆಗುವವರೆಗೆ ಮಾಡಬೇಕು ಎನ್ನುವುದು ನಗರ ನಿವಾಸಿಗಳ ಆಗ್ರಹವಾಗಿದೆ.

ಈ ಹಿಂದೆ ಅಧಿಕಾರದಲ್ಲಿದ್ದವರು ಆರಂಭದಲ್ಲಿ ಮಾತ್ರ ನಗರದೆಲ್ಲೆಡೆ ಸಂಚಾರ ಮಾಡಿ ಸಂಚಲನ ಮುಟ್ಟಿಸಿದ್ದರು. ಒಂದೇ ತಿಂಗಳಲ್ಲಿ ಯಥಾರೀತಿಯಾಗಿದ್ದರು. ಹೀಗಾಗಿ ನೂತನ ಅಧ್ಯಕ್ಷೆಯೂ ರಚನಾತ್ಮಕ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಇದು ಮುಂದೆಯೂ ಮುಂದುವರಿಯಬೇಕು’ ಎನ್ನುತ್ತಾರೆ ನಗರ ನಿವಾಸಿ ಬಸವರಾಜ ಪಾಟೀಲ.

‘ರಾಷ್ಟ್ರೀಯ ಹೆದ್ದಾರಿ ದುರಸ್ತಿಯಾಗಲಿ’

ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ–150 ವೈದ್ಯಕೀಯ ಕಾಲೇಜಿನಿಂದ ಮುಂಡರಗಿವರೆಗೆ ಹದಗೆಟ್ಟು ಗುಂಡಿ ಬಿದ್ದಿದೆ. ಜಿಲ್ಲಾಸ್ಪತ್ರೆ ಗೇಟು ಮುಂಭಾಗದಲ್ಲೇ ಬೃಹತ್‌ ಗ್ರಾತದ ಗುಂಡಿಗಳು ಅಪಾಯಕ್ಕೆ ಆಹ್ವಾನಿಸುತ್ತಿವೆ. ಡಾನ್‌ ಬಾಸ್ಕೊ ಕಾಲೇಜು ತಿರುವಿನಲ್ಲಿ ಅಪಾಯಕಾರಿ ಗುಂಡಿ ಬಿದ್ದಿದೆ. ಓವರ್‌ಟೆಕ್‌ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಇನ್ನೂ ರಸ್ತೆಯುದ್ದಕ್ಕೂ ಅಲ್ಲಲ್ಲಿ ಗುಂಡಿಗಳ ದರ್ಶನ ತಪ್ಪಿದ್ದಿಲ್ಲ. ರಾತ್ರಿ ವೇಳೆ ಗುಂಡಿಗಳು ಕಾಣದೇ ಹಲವರು ಗುಂಡಿಯೊಳಗೆ ವಾಹನ ಇಳಿದು ಸಂಕಷ್ಟ ಅನುಭವಿಸುವ ಘಟನೆಗಳು ನಡೆದಿವೆ. ನಗರಸಭೆಯವರು ಮಾಡಿದಂತೆ ರಾಷ್ಟ್ರೀಯ ರಾಜ್ಯ ಹೆದ್ದಾರಿ ಅಧಿಕಾರಿಗಳು ರಸ್ತೆಗಿಳಿದು ಗುಂಡಿಗಳನ್ನು ಮುಚ್ಚಿಸಬೇಕು ಎನ್ನುವುದು ನಗರ ನಿವಾಸಿಗಳ ಆಗ್ರಹವಾಗಿದೆ.

‘ರಸ್ತೆಗಳ ದುರಸ್ತಿಗೆ ಕ್ರಮ’

‘ನಗರಸಭೆ ವ್ಯಾಪ್ತಿಯ ರಸ್ತೆಗಳನ್ನು ನಗರಸಭೆ ದುರಸ್ತಿ ಮಾಡುತ್ತಿದ್ದು ಅದರಂತೆ ಲೋಕೋಪಯೋಗಿ ರಸ್ತೆಗಳ ದುರಸ್ತಿಗೆ ಸರ್ಕಾರಕ್ಕೆ ಪತ್ರ ಬರೆಯಾಲಾಗಿದೆ‘ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘ಭೀಮಾ ನದಿ ಸೇತುವೆಯ ಶಾಶ್ವತ ದುರಸ್ತಿ ಕಾಮಗಾರಿಗೆ ಅಧಿಕಾರಿಗಳು ಈಗಾಗಲೇ ₹ 1 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇನ್ನೊಂದು ವಾರದಲ್ಲಿ ಅನುದಾನ ಬರಲಿದೆ. ಭೀಮಾ ನದಿ ಹಳೆ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ಮೊದಲಿಗೆ ಸ್ಥಗಿತಗೊಳಿಸಲಾಗಿತ್ತು. ಕುಸಿದಿರುವ ಭಾಗದಲ್ಲಿ ಮರಳು ಚೀಲ ಇಟ್ಟು ದುರಸ್ತಿ ಮಾಡಲಾಗಿದೆ. ಹೀಗಾಗಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲದೇ ಸೇತುವೆ ಗುಣಮಟ್ಟದ ಬಗ್ಗೆ ಖಾತ್ರಿಗೊಳಪಡಿಸಲಾಗಿದೆ‘ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.