ADVERTISEMENT

ಯಾದಗಿರಿ| ದಂಡ ಪಾವತಿಯು ಕರ್ತವ್ಯ ಲೋಪ, ಶಿಕ್ಷೆಗೆ ಸಮ: ಸಿ.ಎಸ್. ಮುಧೋಳ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 7:04 IST
Last Updated 9 ನವೆಂಬರ್ 2025, 7:04 IST
ಯಾದಗಿರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಂಘದ ಜಿಲ್ಲಾ ಘಟಕ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು
ಯಾದಗಿರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಂಘದ ಜಿಲ್ಲಾ ಘಟಕ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು   

ಯಾದಗಿರಿ: ‘ಸರ್ಕಾರಿ ಕಚೇರಿಯ ಕಡತಗಳನ್ನು ಸರಿಯಾಗಿ ನಿರ್ವಹಣೆ ಮಾಡದೆ ದಂಡ ಪಾವತಿ ಮಾಡುವುದು ಕರ್ತವ್ಯ ಲೋಪ ಹಾಗೂ ಶಿಕ್ಷೆಗೆ ಸಮಾನವಾಗಿದ್ದು, ಕಡತಗಳ ನಿರ್ವಹಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಎಸ್. ಮುಧೋಳ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ಬೋಧಕೇತರ ನೌಕರರ ಸಂಘದ ಜಿಲ್ಲಾ ಘಟಕ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ, ನೌಕರರ ಪ್ರತಿಭಾನ್ವಿತ ಮಕ್ಕಳಿಗೆ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯಾವುದೇ ವಿಭಾಗಕ್ಕೆ ಅಭಿಲೇಖಾಲಯ ಹೃದಯ ಇದ್ದಂತೆ. ಕಡತಗಳನ್ನು ಕೋಣೆಯನ್ನು ಜೀವಂತವಾಗಿ ಇರಿಸಿಕೊಂಡರೆ ನೌಕರರನ ಕೆಲಸವನ್ನು ರಕ್ಷಿಸುತ್ತದೆ. ಮಾಹಿತಿದಾರರಿಗೆ ಕಡತ ಕಾಣೆಯಾಗಿದೆ, ಸಿಗುತ್ತಿಲ್ಲ ಎಂದು ನೆಪ ಹೇಳುವಂತಿಲ್ಲ. ಕಡತ ಕಾಣೆಯಾಗಿದ್ದು ಬೇರೆಯವರಿಗೆ ಗೊತ್ತಾದರೆ ಕೇಸ್ ವರ್ಕ್‌ನಿಂದ ಕಚೇರಿ ಮುಖ್ಯಸ್ಥರವರೆಗೂ ದಂಡ ವಿಧಿಸುತ್ತಾರೆ’ ಎಂದರು.

ADVERTISEMENT

‘ಕಚೇರಿಯಲ್ಲಿ ಒಬ್ಬರಿಗೆ ಮತ್ತೊಬ್ಬರು ಚುಚ್ಚುವುದು, ಹೊಟ್ಟೆ ಕಿಚ್ಚಿನ ಪ್ರವೃತ್ತಿಯಿಂದ ಪ್ರತಿಯೊಬ್ಬರೂ ದೂರು ಇರಬೇಕು. ಕಚೇರಿಯ ವಿಚಾರಗಳು ಹೊರಗಡೆ ಹೋಗುವಂತೆ ಮಾಡಿ, ಆರ್‌ಟಿಐ ಕಾರ್ಯಕರ್ತರನ್ನು ಬೆಳೆಸಿ, ಅವರಿಗೆ ನೀವೇ ಅನ್ನದಾತರೂ ಆಗುತ್ತಿದ್ದೀರಿ’ ಎಂದು ಹೇಳಿದರು.

‘ನಾವೆಲ್ಲರೂ ಸರ್ಕಾರಿ ನೌಕರರಾಗಿದ್ದು ಸಂವಿಧಾನದ ಆರ್ಟಿಕಲ್ 306 ಅಡಿ ಬರುತ್ತೇವೆ. ದೇಶದ ಯಾವುದೇ ಮೂಲೆಗೆ ಹೋದರೂ ಸಂವಿಧಾನದ ಕಟ್ಟುಪಾಡುಗಳಿಗೆ ಬಾಧ್ಯರಾಗಿರುತ್ತೇವೆ. ಹೀಗಾಗಿ, ನಾವು ನಮ್ಮ ಕೆಲಸವನ್ನು ಕಾಳಜಿ ಮತ್ತು ಜವಾಬ್ದಾರಿಯಿಂದ ನಿರ್ವಹಿಸಬೇಕು. ಬೆಂಗಳೂರು ಉತ್ತರ ವಲಯದ ಡಿಡಿ ಕಚೇರಿಯ ಲೆಕ್ಕದಲ್ಲಿ ₹ 78 ಲಕ್ಷ ವ್ಯತ್ಯಾಸವಾಗಿತ್ತು. ಲೋಕಾಯುಕ್ತರವರೆಗೆ ಹೋಗಿದ್ದು, ಕೇಸ್‌ ವರ್ಕ್‌ನಿಂದ ಹಿಡಿದು ಮೇಲಾಧಿಕಾರಿವರೆಗೆ ಅಷ್ಟೂ ಹಣ ವಸೂಲಿ ಮಾಡುವ ಆದೇಶವಾಗಿದೆ’ ಎಂದು ತಿಳಿಸಿದರು.

‘ಕೆಲವು ನೌಕರರಿಗೆ ಕಡತಗಳನ್ನು ಹೇಗೆ ಬರೆಯಬೇಕು, ಫೈಲ್‌ ಅನ್ನು ಯಾವ ರೀತಿ ಕಟ್ಟಬೇಕು ಎಂಬುದು ಸಹ ಗೊತ್ತಿಲ್ಲ. ಕಡತಗಳನ್ನು ಬರೆಯುವಾಗ ಕಾನೂನು, ನಿಯಮಗಳನ್ನು ಉಲ್ಲೇಖಿಸುವುದನ್ನು ಕಲಿಯಬೇಕು. ಅದು ನಮ್ಮ ಕೆಲಸದ ಒತ್ತಡವನ್ನು ತಗ್ಗಿಸುತ್ತದೆ. ಯಾರೋ ಹೇಳಿದ್ದಕ್ಕೆ ಬರೆದು ಕೆಲಸ ಮಾಡಿದರೆ ನೀವೇ ಹೊಣೆಗಾರರು ಆಗುತ್ತೀರಿ’ ಎಂದು ಎಚ್ಚರಿಸಿದರು.

ಸಂಘದ ರಾಜ್ಯ ಅಧ್ಯಕ್ಷ ನವೀನ್ ಎಸ್‌.ಆರ್. ಮಾತನಾಡಿ, ‘ಬೋಧಕೇತರ ವೃಂದದ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. 1967ರಿಂದ ಜಾರಿಯಲ್ಲಿರುವ ವೃಂದ ಮತ್ತು ನೇಮಕಾತಿ ನಿಯಮಗಳು ಪರಿಷ್ಕರಣೆ ಆಗಬೇಕು. ಪರಿಷ್ಕರಣೆ ಆಗದೆ ಇದ್ದರೆ ‘ಡಿ’ ಗ್ರೂಪ್ ನೌಕರ ‘ಡಿ’ ನೌಕರನಾಗಿ, ಎಸ್‌ಡಿಎ ನೌಕರ ಎಸ್‌ಡಿಎ ನೌಕರನಾಗಿ ನಿವೃತ್ತ ಆಗುತ್ತಿದ್ದಾನೆ. ಬಡ್ತಿ ಸಹ ಸಿಗುತ್ತಿಲ್ಲ’ ಎಂದರು.

ಕಾರ್ಯಕ್ರಮದಲ್ಲಿ ಎಸ್ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳು, ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಆದೆಪ್ಪ ಬಾಗ್ಲಿ, ಬಿಇಒಗಳಾದ ವೀರಪ್ಪ ಕನ್ನಳಿ, ಯಮನೂರಪ್ಪ ಸಿದ್ದಪ್ಪ ಹರಗಿ, ಯಲ್ಲಪ್ಪ ಕಾಡ್ಲೂರ, ಅಧಿಕಾರಿಗಳಾದ ಮಲ್ಲಿಕಾರ್ಜುನ ಪೋಸ್ತಿ, ಚನ್ನಬಸರೆಡ್ಡಿ, ಲಕ್ಷ್ಮಿಕಾಂತರೆಡ್ಡಿ ಸೇರಿ ಹಲವರು ಉಪಸ್ಥಿತರಿದ್ದರು.

ಕಚೇರಿಯಲ್ಲಿ ‌ಕಾರ್ಯನಿರ್ವಾಹಕ ಅಧಿಕಾರಿಗಳ ವರ್ಗ ಸಮರ್ಥವಾಗಿ ಮುನ್ನಡೆಯಬೇಕಾದರೆ ಬೋಧಕೇತರ ತಂಡದ ಬೆಂಬಲ ಅವಶ್ಯವಿದ್ದು ಒಂದು ತಂಡವಾಗಿ ಕೆಲಸ ಮಾಡಬೇಕು
ವೃಷಭೇಂದ್ರ ಜಿ.ಎಂ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ (ಅಭಿವೃದ್ಧಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.