ADVERTISEMENT

ಹುಣಸಗಿ: ಗ್ರಾಮ ಪಂಚಾಯಿತಿ ಚುನಾವಣೆ; ಜಾತಿ ಪ್ರಮಾಣ ಪತ್ರಕ್ಕಾಗಿ ಸರದಿ

ಒಂದೇ ದಿನ 400 ಅರ್ಜಿ ಸ್ವೀಕೃತಿ: ಇಲ್ಲಿಯವರೆಗೂ 1250 ಪತ್ರ ವಿತರಣೆ

ಭೀಮಶೇನರಾವ ಕುಲಕರ್ಣಿ
Published 9 ಡಿಸೆಂಬರ್ 2020, 19:30 IST
Last Updated 9 ಡಿಸೆಂಬರ್ 2020, 19:30 IST
ಹುಣಸಗಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಲು ಜನರು ನಿಂತಿರುವುದು
ಹುಣಸಗಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಲು ಜನರು ನಿಂತಿರುವುದು   

ಹುಣಸಗಿ: ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಅಂತಿಮ ದಿನಾಂಕ ಹತ್ತಿರವಾಗುತ್ತಿದ್ದಂತೆ ಆಕಾಂಕ್ಷಿಗಳು ತಮ್ಮ ದಾಖಲಾತಿಗಳನ್ನು ಪಡೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ಪಟ್ಟಣದ ತಹಶೀಲ್ದಾರ್ ಕಚೇರಿಯತ್ತ ಧಾವಿಸುತ್ತಿದ್ದಾರೆ.

ಮೂರು ದಿನಗಳಿಂದಲೂ ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿ ಜನಜಂಗುಳಿ ಕಂಡುಬರುತ್ತಿದೆ. ಬಹುತೇಕರು ದಾಖಲಾತಿ ಬ್ಯಾಗ್‌ಗಳೊಂದಿಗೆ ಆಗಮಿಸುತ್ತಿದ್ದಾರೆ. ಒಂದು ದಾಖಲಾತಿಯನ್ನು ಪಡೆದುಕೊಳ್ಳಲು ನಾಲ್ಕೈದು ಜನರ ಬರುತ್ತಿದ್ದಾರೆ. ಬುಧವಾರ ತಹಶೀಲ್ದಾರ್ ಕಚೇರಿ ಮತ್ತು ಸಿದ್ಧಸಿರಿ ಸೌಹಾರ್ಧ ಕಚೇರಿ ಬಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂತು.

‘ಕಚೇರಿಯ ಸಿಬ್ಬಂದಿ ಕೂಡ ಬೇಸರ ಇಲ್ಲದಂತೆ ಕೆಲಸ ನಿರ್ವಹಿಸುತ್ತಿದ್ದು, ಈಗಾಗಲೇ 1250ಕ್ಕೂ ಹೆಚ್ಚು ಜನರು ತಮ್ಮ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದು, ಹಗಲು ರಾತ್ರಿ ಎನ್ನದೇ ಕಾರ್ಯ ನಿರ್ವಹಿಸಲಾಗುತ್ತಿದೆ‘ ಎಂದು ಹುಣಸಗಿ ತಹಶೀಲ್ದಾರ್ ವಿನಯಕುಮಾರ ಪಾಟೀಲ ಮಾಹಿತಿ ನೀಡಿದರು.

ADVERTISEMENT

ಬುಧವಾರದ ವರೆಗೂ ತಾಲ್ಲೂಕಿನ ವಿವಿಧ ಗ್ರಾಮಗಳ ಅನುಸೂಚಿತ ಜಾತಿ ಮತ್ತು ಪಂಗಡದವರು 450ಕ್ಕೂ ಹೆಚ್ಚು ಜನರು ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ. ಬುಧವಾರ ಒಂದೇ ದಿನ ಮತ್ತೆ 400 ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿಗಳು ಬಂದಿದ್ದು, ಚುನಾವಣೆಗಾಗಿ ಮ್ಯಾನ್ಯೂವಲ್ ಸರ್ಟಿಫೀಕೇಟ್ ನೀಡಲಾಗುತ್ತಿದೆ ಎಂದು ಶಿರಸ್ತೇದಾರ ಶ್ರೀಧರ ಪವಾರ ತಿಳಿಸಿದರು.

‘ಚುನಾವಣೆ ದೃಷ್ಟಿಯಿಂದ ಜಾತಿ ಪ್ರಮಾಣ ಪತ್ರ ಪಡೆಯಲು ತಾಲ್ಲೂಕಿನ ಉಪ್ಪಲದಿನ್ನಿ ಗ್ರಾಮದಿಂದ ಬಂದಿದ್ದು, ಒಂದೇ ದಿನದಲ್ಲಿ ಜಾತಿ ಪ್ರಮಾಣ ಪತ್ರ ನೀಡುವ ಮೂಲಕ ನಮಗೆ ಸಮಯ ಉಳಿತಾಯ ಮಾಡಿದ್ದು ಸಹಾಯವಾಯಿತು‘ ಎಂದು ಗುಂಡಪ್ಪ ಗಡ್ಡಿ ಹಾಗೂ ಕೂಡಲಗಿ ಗ್ರಾಮದ ರೇವಣೆಪ್ಪ ರುಮ್ಮಾ ಹೇಳಿದರು.

ಚುನಾವಣೆಗೆ ಸ್ಪರ್ಧಿಸಲು ಜಾತಿ ಪ್ರಮಾಣ ಪತ್ರ ಅಗತ್ಯವಿದ್ದು, ಅದಕ್ಕಾಗಿ ಸರದಿಯಲ್ಲಿ ನಿಂತಿರುವುದಾಗಿ ಬೈಲಾಪುರ ತಾಂಡಾದ ಯುವಕ ಶಿವಾನಂದ ಚವ್ವಾಣ ಹೇಳಿದರು.

ಶೌಚಾಲಯದ ಘೋಷಣಾ ಪತ್ರ (ಬಾಂಡ್) ಅಫಿಡವಿಟ್ ಕುರಿತು ಆಕಾಂಕ್ಷಿಗಳಲ್ಲಿ ಗೊಂದಲವಿದ್ದು, ಅದನ್ನು ಅಧಿಕಾರಿಗಳು ಸೂಕ್ತ ಮಾಹಿತಿ ನೀಡುವುದು ಅಗತ್ಯವಿದೆ ಎಂದು ವಜ್ಜಲದ ಮಲ್ಲಿಕಾರ್ಜುನ ದೊಡ್ಡಮನಿ ಹೇಳಿದರು.

*
ಚುನಾವಣೆಗೆ ಸ್ಪರ್ಧಿಸುವವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಜಾತಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ.
-ವಿನಯಕುಮಾರ ಪಾಟೀಲ, ತಹಶೀಲ್ದಾರ್, ಹುಣಸಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.