ADVERTISEMENT

ಗ್ರಾಮ ಪಂಚಾಯಿತಿ ಚುನಾವಣೆ: ಅಳಿಯ–ಮಾವ ಇಲ್ಲಿ ಎದುರಾಳಿಗಳು!

ಎರಡನೇ ಹಂತದ ಚುನಾವಣಾ ಅಬ್ಬರ ಪ್ರಚಾರ, ಮತದಾನಕ್ಕೆ ನಾಲ್ಕು ದಿನ ಬಾಕಿ

ಬಿ.ಜಿ.ಪ್ರವೀಣಕುಮಾರ
Published 23 ಡಿಸೆಂಬರ್ 2020, 16:50 IST
Last Updated 23 ಡಿಸೆಂಬರ್ 2020, 16:50 IST
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಗುರುಸಣಗಿ ಗ್ರಾಮ ಪಂಚಾಯಿತಿ ಚುನಾವಣೆ ಅಂಗವಾಗಿ ಮತಪ್ರಚಾರ
ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನ ಗುರುಸಣಗಿ ಗ್ರಾಮ ಪಂಚಾಯಿತಿ ಚುನಾವಣೆ ಅಂಗವಾಗಿ ಮತಪ್ರಚಾರ   

ಯಾದಗಿರಿ: ಜಿಲ್ಲೆಯಲ್ಲಿ ಮೊದಲನೆ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಮುಕ್ತಾಯವಾಗಿದ್ದು, ಎರಡನೇ ಹಂತದಲ್ಲಿ (ಡಿ.27) ನಡೆಯುವ ಕದನಕ್ಕೆ ಅಬ್ಬರದ ಪ್ರಚಾರ ನಡೆದಿದೆ. ಅಳಿಯ– ಮಾವ, ಸಂಬಂಧಿಕರು ಎದುರಾಳಿಗಳಾಗಿ ಸ್ಪರ್ಧಿಸಿದ್ದಾರೆ.

ಮೊದಲನೇ ಹಂತದ ಶಹಾಪುರ, ಸುರಪುರ, ಹುಣಸಗಿ ತಾಲ್ಲೂಕುಗಳಲ್ಲಿ ಕಾಂಚಾಣ, ಮದ್ಯದ ಹೊಳೆ ಹರಿದಿದ್ದು, ಈಗ ಯಾದಗಿರಿ, ವಡಗೇರಾ, ಗುರುಮಠಕಲ್‌ ತಾಲ್ಲೂಕುಗಳಲ್ಲಿಯೂ ಭಿನ್ನವಾಗಿಲ್ಲ. ಕೆಲವೆಡೆ ಈ ಕುರಿತು ಪ್ರಕರಣಗಳೂ ದಾಖಲಾಗಿವೆ.

ವಡಗೇರಾ ತಾಲ್ಲೂಕಿನಲ್ಲಿ ಗುರುಸಣಗಿ (ಗುಲಸರಂ) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರದ ಅಬ್ಬರ ಜೋರಾಗಿದೆ. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಕರಪತ್ರ ನೀಡಿ ತಮಗೆ ಮತ ನೀಡುವಂತೆ ಮನವಿ ಮಾಡುವುದು ಬೆಳಿಗ್ಗೆ, ಸಂಜೆ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ.

ADVERTISEMENT

ಗುರುಸಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಗುರುಸಣಗಿ, ಹುಲಕಲ್‌ (ಜೆ), ಬಬಲಾದ, ಬೀರನಾಳ ಗ್ರಾಮಗಳು ಒಳಪಟ್ಟಿವೆ. ಗುಲಸರಂ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು, ಇಲ್ಲಿಯೇ ಹೆಚ್ಚು ಪ್ರಚಾರದ ಅಬ್ಬರವಿದೆ. ಇನ್ನುಳಿದ ಗ್ರಾಮಗಳಲ್ಲಿ ತಕ್ಕಮಟ್ಟಿಗಿದ್ದು, ಅಷ್ಟೇನೂ ಪ್ರಚಾರ ಕಂಡು ಬಂದಿಲ್ಲ. ಒಂದು, ಎರಡು ವಾರ್ಡ್‌ಗಳಿರುವುದರಿಂದ ಅಭ್ಯರ್ಥಿಗಳು ಹೆಚ್ಚು ಸ್ಪರ್ಧಿಸಿಲ್ಲ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ 10 ಸ್ಪರ್ಧಾರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಅಳಿಯ–ಸೋದರ ಮಾವ ಎದುರಾಳಿ: ಗುಲಸರಂ ಪಂಚಾಯಿತಿ ವ್ಯಾಪ್ತಿಯ ಬಬಲಾದ ಗ್ರಾಮದಲ್ಲಿ ಅಳಿಯ– ಸೋದರ ಮಾವ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ದೇವೇಂದ್ರಪ್ಪ ಗುಂಡಳ್ಳಿ ಮಾವ, ಗೌತಮ ಅಳಿಯ. ದೇವೇಂದ್ರಪ್ಪ ಈಗಾಗಲೇ ಸ್ಪರ್ಧಿಸಿ ಸದಸ್ಯರಾಗಿದ್ದರು. ಗೌತಮ ಮೊದಲ ಬಾರಿಗೆ ಸ್ಪರ್ಧಿಸಿದ್ದಾರೆ.

‘ಗ್ರಾಮದಲ್ಲಿ ನಮ್ಮ ಸೋದರ ಮಾವ (ಅಮ್ಮನ ತಮ್ಮ) ಅಧಿಕಾರ ಅನುಭವಿಸಿದ್ದಾರೆ. ಹೀಗಾಗಿ ತಮಗೆ ಬಿಟ್ಟು ಕೊಡುವಂತೆ ಮನವಿ ಮಾಡ ಲಾಗಿತ್ತು. ಇದು ನನ್ನ ಕೊನೆ ಚುನಾವಣೆ ಎಂದು ಮತ್ತೆ ಸ್ಪರ್ಧಿಸಿದ್ದಾರೆ. ಇದರಿಂದ ನಾನೂ ಸ್ಪರ್ಧಿಸಿದ್ದೇನೆ. ಗ್ರಾಮಸ್ಥರು ಯಾವ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದ್ಧನಾಗುತ್ತೇನೆ’ ಎಂದು ಗೌತಮ ಹೇಳುತ್ತಾರೆ.

ಗುಂಪು ಕಟ್ಟಿಕೊಂಡು ಪ್ರಚಾರ:
ಅಭ್ಯರ್ಥಿಗಳು ತಮ್ಮ ಬೆಂಬಲಿಗರ ಗುಂಪು ಕಟ್ಟಿಕೊಂಡು ಮತದಾರರ ಮನೆ ಮನೆಗೆ ಎಡತಾಕುತ್ತಿದ್ದಾರೆ. ಮನೆಯ ಮುಂದೆ ಕುಳಿತುಕೊಂಡ ಹಿರಿಯ ಜೀವಿಗಳಿಗೆ ತಾವು ಸ್ಪರ್ಧಿಸಿರುವ ಚಿನ್ಹೆ ತೋರಿಸಿ ಗಟ್ಟಿ ಧ್ವನಿಯಲ್ಲಿ ತಮಗೆ ಮತ ಮಾಡಲು ಕೇಳಿಕೊಳ್ಳುತ್ತಿದ್ದಾರೆ.

ಅಲ್ಲದೆ 20–30 ಜನರ ಗುಂಪು ಕಟ್ಟಿಕೊಂಡು ತಮ್ಮ ಬೆಂಬಲಿಗರ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಬೆಳಿಗ್ಗೆ ತಿಂಡಿ ಮಾಡಿಸಿಕೊಂಡು ಪ್ರಚಾರಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಬೆಳಿಗ್ಗೆ, ಸಂಜೆ ಬೇರೆಯವರ ಬೆಂಬಲಿ ಗರಿಂದ ಪ್ರಚಾರ ಮಾಡಿಸುತ್ತಿದ್ದಾರೆ.

***

20 ಸ್ಥಾನಗಳಿಗೆ 47 ಜನ ಸ್ಪರ್ಧೆ

ಗುಲಸರಂ ಗ್ರಾಮ ಪಂಚಾಯಿತಿಯಲ್ಲಿ 20 ಸ್ಥಾನಗಳಿದ್ದು, 47 ಜನ ಸ್ಪರ್ಧೆ ಮಾಡಿದ್ದಾರೆ.

ಗುಲಸರಂನಲ್ಲಿ 10 ಸ್ಥಾನಗಳಿಗೆ 25 ಜನ ಸ್ಪರ್ಧೆ ಮಾಡಿದ್ದಾರೆ. ಹುಲಕಲ್‌ (ಜೆ) 4 ಸ್ಥಾನಕ್ಕೆ 11 ಜನ, ಬಿರನಾಳದಲ್ಲಿ 2 ಸ್ಥಾನಕ್ಕೆ 5 ಮಂದಿ ಸ್ಪರ್ಧೆ, ಬಬಲಾದನಲ್ಲಿ 4 ಸ್ಥಾನಕ್ಕೆ 6 ಮಂದಿ ಸ್ಪರ್ಧಿಸಿದ್ದಾರೆ. ಗುಲಸರಂ ಮತ್ತು ಬಬಲಾದ ಗ್ರಾಮದಲ್ಲಿ ಒಬ್ಬರು ಅವಿರೋಧ ಆಯ್ಕೆಯಾಗಿದ್ದಾರೆ.

ಗುಲಸರಂದಲ್ಲಿ ಅಜರಾ ಬಿ ಕಾಸಿಂಸಾಬ, ಬಬಲಾದ ಗ್ರಾಮದ ಮರಲಿಂಗಮ್ಮ ಮಾಳಪ್ಪ ಇಬ್ಬರು ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

***

ಮತದಾರರ ವಿವರ

ಪರಿಶಿಷ್ಟ ಜಾತಿ; 550

ಪರಿಶಿಷ್ಟ ಪಂಗಡ; 193

ಹಿಂದುಳಿದ ಅ ವರ್ಗ; 220

ಹಿಂದುಳಿದಬಿವರ್ಗ; 41

ಸಾಮಾನ್ಯ ವರ್ಗ; 1069

ಒಟ್ಟು; 2070

ಗ್ರಾಮ ಪಂಚಾಯಿತಿಗಳು

ಯಾದಗಿರಿ; 22

ಗುರುಮಠಕಲ್; 17‌

ವಡಗೇರಾ; 17

ಒಟ್ಟು; 56

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.