ಯಾದಗಿರಿ: ‘ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರ ಇಳಿಕೆ ಮಾಡಿದ್ದರಿಂದ ಅದರ ನೇರಲಾಭ ಜನರಿಗೆ ಲಭಿಸಿ, ಅವರಲ್ಲಿ ಹಣ ಉಳಿತಾಯವಾಗಿ ಖರೀದಿ ಸಾಮರ್ಥ್ಯ ಹೆಚ್ಚಳವಾಗಲಿದೆ’ ಎಂದು ಆರ್ಥಿಕ ತಜ್ಞ ಕೆ.ವಿಶ್ವನಾಥ ಭಟ್ ಅಭಿಪ್ರಾಯಪಟ್ಟರು.
ಬಿಜೆಪಿ ಜಿಲ್ಲಾ ಘಟಕವು ನಗರದಲ್ಲಿ ಶನಿವಾರ ಜಿಎಸ್‌ಟಿ ವಿನಾಯಿತಿ ಕುರಿತು ವಿಚಾರಸಂಕಿರಣ ಮತ್ತು ಬೆಲೆ ಇಳಿಕೆಯ ಉಡುಗೊರೆ ಮೋದಿ ಸರ್ಕಾರಕ್ಕೆ ಧನ್ಯವಾದ ಅರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಿಎಸ್‌ಟಿ ಕಡಿತದಿಂದ ದೇಶದ ಆರ್ಥಿಕತೆಯು ತಳ ಮಟ್ಟದಿಂದ ಬಲಿಷ್ಠವಾಗಲಿದೆ. ಖರೀದಿ ಮತ್ತು ಉಪಭೋಗಕ್ಕೆ ದೊಡ್ಡ ಮಟ್ಟದ ಉತ್ತೇಜನೆ ಕೊಟ್ಟು, ಆರ್ಥಿಕತೆಗೆ ಸುಮಾರು ₹ 2 ಲಕ್ಷ ಕೋಟಿ ಹರಿದುಬರಲಿದೆ. ತೆರಿಗೆ ಪಾವತಿದಾರರಲ್ಲಿ ಮತ್ತು ಸಂಗ್ರಹಣೆಯಲ್ಲಿ ಏರಿಕೆಯಾಗಲಿದ್ದು, ಬೇಡಿಕೆ ಮತ್ತು ಉತ್ಪಾದನೆಯೂ ವೃದ್ಧಿಗೊಳ್ಳಲಿದೆ’ ಎಂದು ಹೇಳಿದರು.
‘ಸ್ವಾತಂತ್ರ್ಯದ ಬಳಿಕ ತೆರಿಗೆ ಪದ್ಧತಿಯಲ್ಲಿ ತೆಗೆದುಕೊಂಡು ಕ್ರಾಂತಿಕಾರಕ ಸುಧಾರಣೆ ಇದು. ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಎಲ್ಲ ರಾಜ್ಯಗಳು ಸರ್ವಾನುಮತದಿಂದ ಅಂಗೀಕರಿಸಿ, ದರ ಇಳಿಕೆಗೆ ಸಮ್ಮತಿಸಿವೆ. ಎನ್‌ಡಿಎ ಸರ್ಕಾರ ರಾಜಕೀಯ ಪ್ರಬುದ್ಧತೆ ಮತ್ತು ಚತುರತೆಗೆ ಸಾಕ್ಷಿಯಾಗಿರುವ ನಿರ್ಧಾರವಿದು. ಇದನ್ನು ರಾತ್ರೋರಾತ್ರಿ ತೆಗೆದುಕೊಂಡ ನಿರ್ಣಯವಲ್ಲ’ ಎಂದರು.
‘ಈ ಹಿಂದಿನ 4 ಸ್ಲ್ಯಾಬ್‌ಗಳನ್ನು ಶೇ 5 ಮತ್ತು ಶೇ 18ಕ್ಕೆ ನಿಗದಿಪಡಿಸಿ 140 ಕೋಟಿ ಭಾರತೀಯರಿಗೆ ಅನುಕೂಲ ಮಾಡಿಕೊಡಲಾಗಿದೆ. ಶೇ 12ರಷ್ಟು ಸ್ಲ್ಯಾಬ್‌ನಲ್ಲಿದ್ದ ಶೇ 99ರಷ್ಟು ಸರಕುಗಳು ಹಾಗೂ ಶೇ 28ರಷ್ಟು ಸ್ಲ್ಯಾಬ್‌ನಲ್ಲಿದ್ದ ಶೇ 90ರಷ್ಟು ಸೇವಾ ದರಗಳಲ್ಲಿ ಭಾರಿ ಕಡಿತವಾಗಿದೆ. ಇದು ಪ್ರತಿಯೊಬ್ಬರಿಗೂ ಸಿಕ್ಕು ಗೆಲುವು. ಆದರೆ, ವಿರೋಧ ಪಕ್ಷಗಳು ಅನಗತ್ಯವಾಗಿ ಟೀಕಿಸಿ, ವಿರೋಧಿಸುತ್ತಿವೆ’ ಎಂದು ಹೇಳಿದರು.
‘ದರ ಕಡಿತದಿಂದ ಕೇಂದ್ರದ ಬೊಕ್ಕಸಕ್ಕೆ ₹ 93 ಸಾವಿರ ಕೋಟಿ ಕೊರತೆಯಾದರೂ ಐಷರಾಮಿ ಸರಕುಗಳ ಮೇಲಿನ ದರ ಏರಿಕೆಯಿಂದ ಸುಮಾರು ₹ 40 ಸಾವಿರ ಕೋಟಿ ಹರಿದು ಬರಲಿದೆ. ಹೀಗಾಗಿ, ₹ 48 ಸಾವಿರ ಕೋಟಿ ಕೊರತೆಯಲ್ಲಿ ಕೇಂದ್ರದ ಖಜಾನೆಗೆ ₹ 24 ಸಾವಿರ ಕೋಟಿಯಷ್ಟು ಅಭಾವ ಆಗಲಿದೆ. ರಾಜ್ಯಗಳಿಗೆ ಸಾವಿರಾರು ಕೋಟಿ ರೂಪಾಯಿಷ್ಟು ನಷ್ಟವಾದರೂ ಸಕಾರಾತ್ಮಕ ಪರಿಣಾಮಗಳು ಬೀರಲಿದೆ’ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲಪ್ಪ ಗುಳಗಿ ಮಾತನಾಡಿ, ‘ಏಳು ದಶಕಗಳು ದೇಶವನ್ನು ಆಳಿದ್ದ ಕಾಂಗ್ರೆಸ್ ಪಕ್ಷವು ದೇಶ ವಾಸಿಗಳ ಮೇಲೆ ತೆರಿಗೆ ಭಾರ ಹಾಕಿತ್ತು. ಪ್ರಧಾನಿ ಮೋದಿ ಅವರು ಏಕರೂಪದ ತೆರಿಗೆ ಪದ್ಧತಿಯನ್ನು ಜಾರಿಗೆ ತಂದು, ಹೊರೆಯನ್ನು ಕಡಿಮೆ ಹಾಗೂ ಸರಳೀಕರಣ ಮಾಡಿದರು’ ಎಂದರು.
ವಿಶ್ವನಾಥ ಭಟ್ ಅವರನ್ನು ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಮುಖಂಡ ಮಹೇಶರೆಡ್ಡಿ ಮುದ್ನಾಳ ಅವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರಕುಂದಿ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೊರ, ಅಲೆಮಾರಿ, ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ದೇವಿಂದ್ರನಾಥ ನಾದ, ಜಿಎಸ್‌ಟಿ ಅಭಿಯಾನದ ಜಿಲ್ಲಾ ಸಂಚಾಲಕ ಲಕ್ಷ್ಮಿಪುತ್ರ ಮಾಲಿಪಾಟೀಲ, ಸಹ ಸಂಚಾಲಕ ಜಗದೀಶ್ ಪಾಟೀಲ, ಮುಖಂಡರಾದ ನಾಗರತ್ನ ಕುಪ್ಪಿ ಸೇರಿ ಹಲವರು ಉಪಸ್ಥಿತರಿದ್ದರು.
ಶಿವು ಕೊಂಕಲ್ ನಿರೂಪಿಸಿದರು.
ತೆರಿಗೆ ಪಾವತಿಯಿಂದ ನಿತ್ಯದ ಬದುಕಿನಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ಸಂಕಷ್ಟ ಪಡಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಜಿಎಸ್‌ಟಿ ದರ ತಗ್ಗಿಸಿದೆಕೆ.ವಿಶ್ವನಾಥ ಭಟ್ ಆರ್ಥಿಕ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.