ಗುರುಮಠಕಲ್: ತಾಲ್ಲೂಕಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಟಾವಿಗೆ ಬಂದಿದ್ದ ಹೆಸರು ಬೆಳೆ ಗಿಡದಲ್ಲೇ ಮೊಳಕೆಯೊಡೆಯುತ್ತಿದ್ದು, ‘ಕೈಗೆ ಬಂದ ತುತ್ತು ಬಾಯಿಗೆ ಬಾರದಂತ’ ಸ್ಥಿತಿ ರೈತರದು.
ಎಡೆಬಿಡದೆ ಸುರಿಯುವ ವರ್ಷಧಾರೆಗೆ ವಾತಾವರಣ ತಂಪಾಗಿದೆ. ಇದರಿಂದ ಆರೋಗ್ಯ ಸಮಸ್ಯೆ ಹೆಚ್ಚುವ ಆತಂಕವಿದೆ. ಈ ಮಳೆಯು ಬೇಕಾದಾಗ ಬಾರದೆ, ಬೇಡವಾದಾಗ ನಿಲ್ಲದೆ ಜೀವನವನ್ನು ಹಾಳುಮಾಡುತ್ತಿದೆ ಎಂದು ಮಳೆಯಿಂದ ಕನಲಿದ ಜನಜೀವನವು ಮಳೆರಾಯನಿಗೆ ಹಿಡಿಶಾಪ ಹಾಕುತ್ತಿದೆ.
‘ಕೆಲವೆಡೆ ಹೆಸರು ಕಟಾವು ಮುಗಿದಿದೆ. ಹಲವೆಡೆ ಕಟಾವು ಮಾಡಬೇಕಿದೆ. ಆದರೆ, ಮಳೆಯಿಂದಾಗಿ ಹೆಸರು ಕಾಯಿಯಿಂದ ಮೊಳಕೆಯೊಡೆಯಲು ಆರಂಭವಾಗಿದೆ. ತೊಗರಿ ಬೇರು ಕೊಳೆತು, ಬೆಳೆ ನಾಶದ ಭೀತಿ ಕಾಡುತ್ತಿದೆ’ ಎನ್ನುತ್ತಾರೆ ರೈತರಾದ ಪ್ರಸಾದ, ಮಾಣಿಕಪ್ಪ, ಹುಸೇನ.
ಮನೆಗೆ ಹಿಂದಿರುಗಿದ ಮಕ್ಕಳು: ಸುರಿಯುತ್ತಿರುವ ಮಳೆಯಲ್ಲೇ ಮಂಗಳವಾರ (ಆ.19) ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ಬಂದಿದ್ದರು. ಆದರೆ, ಆ.19 ಮತ್ತು ಆ.20 ರಂದು ಶಾಲಾ-ಕಾಲೇಜುಗಳಿಗೆ ಬಿಇಒ ರಜೆ ಘೋಷಿಸಿದ್ದರಿಂದ ವಿದ್ಯಾರ್ಥಿಗಳು ಮನೆಗೆ ಹಿಂದಿರುಗಿದರು.
‘ಭಯಬೇಡ ಮುನ್ನೆಚ್ಚರಿಕೆ ಅವಶ್ಯ’
‘ಸತತ ಮಳೆಯಿಂದಾಗಿ ಕೆಮ್ಮು ನೆಗಡಿ ಶೀತ ಸಾಮಾನ್ಯ. ಆದರೆ ವೈರಲ್ ಫೀವರ್ ಡೆಂಗಿ ಕಾಲರಾ ಮಲೇರಿಯಾ ಟೈಫಾಯಿಡ್ ಹರಡುವ ಸಾಧ್ಯತೆ ಹೆಚ್ಚು. ಡೈಯಾಬಿಟಿಕ್ ಹೈಪರ್ ಟೆನ್ಶನ್ ಸಿಒಪಿಡಿ ಸಮಸ್ಯೆಯುಳ್ಳವರ ವೃದ್ಧರ ಮತ್ತು ಮಕ್ಕಳ ಆರೋಗ್ಯದ ಕಾಳಜಿ ವಹಿಸಬೇಕು’ ಎನ್ನುತ್ತಾರೆ ಮಕ್ಕಳತಜ್ಞ ಡಾ.ಗುರುರಾಜ ಎನ್.ಬಿಚ್ಚಲ್. ‘ಉಣ್ಣೆಬಟ್ಟೆ ಧರಿಸಿ ನೀರನ್ನು ಕಾಯಿಸಿ ಕುಡಿಯುವುದು ಬಿಸಿ ಶುಚಿ ಆಹಾರ ಸೇವನೆ ಅನವಶ್ಯಕ ಮಳೆಯಲ್ಲಿ ನೆನೆಯದಿರಿ ಮತ್ತು ರಸ್ತೆಬದಿ ಆಹಾರ ಸೇವಿಸದಿರಿ. ಇನ್ ಫ್ಲೂವೆಂಜಾ ಲಸಿಕೆ ಅವಶ್ಯವಿದ್ದರೆ ಪಡೆಯಿರಿ. ಭಯಬೇಡ. ಆದರೆ ಮುನ್ನೆಚ್ಚರಿಕೆ ಅವಶ್ಯ’ ಎನ್ನುವುದು ಅವರ ಸಲಹೆ.
ಗ್ರಾಮೀಣ ಮಟ್ಟದಲ್ಲಿ ನಮ್ಮ ಸಿಬ್ಬಂದಿ ಭೇಟಿ ನೀಡಿ ಬೆಳೆಗಳನ್ನು ಪರಿಶೀಲಿಸುತ್ತಿದ್ದಾರೆ. ಮೇಲಧಿಕಾರಿಗಳ ನಿರ್ದೇಶನದಂತೆ ಮುಂದಿನ ಕ್ರಮ ವಹಿಸಲಾಗುವುದುಶಾಂತಗೌಡ ಬಿರಾದಾರ, ತಹಶೀಲ್ದಾರ್
ಮಳೆಯಿಂದ ಬೇರು ಕೊಳೆಯದಂತೆ ಸಾಲುಗಳ ನಡುವೆ ಬಸಿ ಕಾಲುವೆಗಳನ್ನು ನಿರ್ಮಿಸಬೇಕು. ಮಳೆ ನಿಂತ ನಂತರ ಸಸಿಗಳಿಗಾದ ಪೋಷಕಾಂಶಗಳ ಕೊರತೆ ನೀಗಿಸಲು 19:19:19 (ವಾಟರ್ ಬೇಸಡ್ ಫರ್ಟಿಲೈಸರ್) ಸಿಂಪಡಿಸಬೇಕುಮಲ್ಲಿಕಾರ್ಜುನ ವಾರದ, ಕೃಷಿ ಅಧಿಕಾರಿ
ಸತತ ಮಳೆಗೆ ಈಗಾಗಲೇ ಕಟಾವಿಗೆ ಬಂದ ಹೆಸರು ಬೆಳೆ ಕೈತಪ್ಪಲಿದೆ. ತೊಗರಿ ಬೆಳೆಯ ಬೇರು ಕೊಳೆಯುವ ಸಾಧ್ಯತೆಯಿದ್ದು ಕೃಷಿ ಮತ್ತು ಕಂದಾಯ ಅಧಿಕಾರಿಗಳು ಪರಿಹಾರ ಕೊಡಿಸಲು ಆದ್ಯತೆ ನೀಡಲಿಬಸವಂತರೆಡ್ಡಿ ಪೆದ್ದನಾಗಮ್ಮೋಳ, ರೈತ ಸಂಘದ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.