ಯಾದಗಿರಿ: ‘ಕೆಕೆಆರ್‌ಡಿಬಿ ಮ್ಯಾಕ್ರೊ ಕ್ರಿಯಾ ಯೋಜನೆಯಡಿ ಜಿಲ್ಲೆಯ ಸ್ಥಳೀಯ ಲೇಖಕರು ಬರೆದ ಪುಸ್ತಕಗಳ ಖರೀದಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಪ್ರಸಕ್ತ ಓದುಗರ ಅಭಿರುಚಿಗೆ ಅನುಗುಣವಾದ ಪುಸ್ತಕಗಳನ್ನು ಪುನರ್ ಆಯ್ಕೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಬಿ. ಸುಶೀಲಾ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಕೆಕೆಆರ್‌ಡಿಬಿ ಮ್ಯಾಕ್ರೊ ಯೋಜನೆಯಡಿ ಸ್ಥಳೀಯ ಲೇಖಕರ ಪುಸ್ತಕ ಖರೀದಿಯ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
‘ಕೆಕೆಆರ್‌ಡಿಬಿ ಕಾರ್ಯದರ್ಶಿ ಅವರ ನಿರ್ದೇಶನದಂತೆ 2024-25ನೇ ಸಾಲಿನ ಕ್ರಿಯಾ ಯೋಜನೆಯಡಿ ಪುಸ್ತಕ ಖರೀದಿಗಾಗಿ ₹25 ಲಕ್ಷ ಮಂಜೂರಾಗಿದೆ. ಅನುದಾನಕ್ಕೆ ಅನುಗುಣವಾಗಿ ನಿಗದಿತ ದರಗಳಲ್ಲಿ ಪ್ರತಿ ಪುಸ್ತಕ ತಲಾ 1,300 ಪ್ರತಿಗಳನ್ನು ಖರೀದಿಸಬೇಕು. ಇವನ್ನು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಸರಬರಾಜು ಮಾಡಬೇಕು’ ಎಂದು ಸೂಚಿಸಿದರು.
‘ಪುಸ್ತಕ ಖರೀದಿಸಲು ಜಿಲ್ಲೆಯಲ್ಲಿ 135 ಅರ್ಜಿಗಳನ್ನು ಸ್ವೀಕೃತವಾಗಿದ್ದು, ಅವುಗಳಲ್ಲಿ ಅರ್ಹತೆಯುಳ್ಳ ಅರ್ಜಿಗಳನ್ನು ಮಾತ್ರ ಪರಿಶೀಲಿಸಲು ಮತ್ತು ಜಿಲ್ಲೆಯ ಸ್ಥಳಿಯ ಲೇಖಕರೆಂದು ಗುರುತಿಸಲು ಪ್ರಕಟಣೆಯಲ್ಲಿ ತಿಳಿಸಿರುವಂತೆ ಅರ್ಜಿಯೊಂದಿಗೆ ರೇಷನ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ಸಲ್ಲಿಸಿದವರ 2023-24ನೇ ಸಾಲಿನ ಪುಸ್ತಕಗಳ ಖರೀದಿಗೆ ಆದ್ಯತೆ ನೀಡಲು ಸಮಿತಿ ಸದಸ್ಯರೊಂದಿಗೆ ಚರ್ಚಿಸಿ ವರದಿ ಸಲ್ಲಿಸಿ’ ಎಂದು ಗ್ರಂಥಾಲಯ ಇಲಾಖೆ ಅಧಿಕಾರಿಗಳಿ ಸೂಚಿಸಿದರು.
ಜಿಲ್ಲಾ ಗ್ರಂಥಾಲಯ ಅಧಿಕಾರಿ ಜಯಪ್ರಕಾಶ, ಮೆಹಬೂಬ್ ಪಟೇಲ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.