ಸುರಪುರ: ನಗರದ ಗಾಂಧಿವೃತ್ತದಿಂದ ಪೊಲೀಸ್ ಠಾಣೆ ಮಾರ್ಗವಾಗಿ ಮುಂದೆ ಸಾಗಿದರೆ, ಸರ್ಕಾರಿ ಪ್ರೌಢಶಾಲೆ ಹತ್ತಿರ ಸುಂದರ ದೇಗುಲ ಕೈಬೀಸಿ ಕರೆಯುತ್ತದೆ. ದೇವಸ್ಥಾನದ ಒಳಗೆ ಪ್ರವೇಶಿಸಿದರೆ ಎಂತಹ ನಾಸ್ತಿಕನಿಗೂ ಭಕ್ತಿಯ ಭಾವ ಮೂಡುತ್ತದೆ.
ಸುಮಾರು 300 ವರ್ಷಗಳ ಹಿಂದೆ ಈ ದೇವಸ್ಥಾನ ಸ್ಥಾಪನೆಯಾಗಿದೆ ಎಂಬ ಉಲ್ಲೇಖಗಳಿವೆ. 3 ಅಡಿ ಎತ್ತರದ ಸುಂದರ ಆಂಜನೇಯಸ್ವಾಮಿಯ ಮೂರ್ತಿ ಆಕರ್ಷಕವಾಗಿದೆ. ವಿಶಾಲವಾದ ಪ್ರಾಂಗಣ, ಪಕ್ಕದಲ್ಲಿರುವ ಅಶ್ವಥನಾರಾಯಣ ವೃಕ್ಷ ಕೆಲ ಹೊತ್ತು ಭಕ್ತರನ್ನು ಅಲ್ಲೆ ಕಾಲ ಕಳೆಯುವಂತೆ ಮಾಡುತ್ತವೆ.
ಇತಿಹಾಸ:
ವಿಜಯನಗರ ಸಂಸ್ಥಾನದ ರಾಜಗುರುವಾಗಿದ್ದ ವ್ಯಾಸತೀರ್ಥರು ಆಂಜನೇಯನಿಂದ ಪ್ರಭಾವಿತರಾಗಿದ್ದರು. ವಿಜಯನಗರದಲ್ಲೇ ಹನುಮಂತನ ರಾಜಧಾನಿ ಕಿಷ್ಕಿಂದೆ ಮತ್ತು ಅನತಿ ದೂರದಲ್ಲಿ ಹನುಮನ ಜನ್ಮಸ್ಥಳ ಅಂಜನಾದ್ರಿ ಇರುವುದು ಇದನ್ನು ಪುಷ್ಟಿಕರಿಸುತ್ತವೆ.
ರಾಮಾಯಣವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದ ವ್ಯಾಸತೀರ್ಥರು ಹಂಪಿಯ ಯಂತ್ರೋದ್ಧಾರಕ ಸೇರಿ 730ಕ್ಕೂ ಹೆಚ್ಚು ಆಂಜನೇಯನ ದೇವಸ್ಥಾನಗಳನ್ನು ನಿರ್ಮಿಸುತ್ತಾರೆ. ರಾಮಾಯಣ ಕಾಲದಲ್ಲಿ ಎಲ್ಲೆಲ್ಲಿ ರಾಮ, ಲಕ್ಷ್ಮಣ, ಸೀತೆ ಮತ್ತು ಆಂಜನೇಯ ಸಂಚರಿಸುತ್ತಾರೆ ಅಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ. ಆದರೂ ಅನೇಕ ಕಡೆಗಳಲ್ಲಿ ದೇಗುಲ ನಿರ್ಮಿಸುವ ಅವರ ಕನಸು ಈಡೇರಲಿಲ್ಲ. ತಮ್ಮ ಈ ಮಹತ್ಕಾರ್ಯವನ್ನು ತಮ್ಮ ಶಿಷ್ಯರಿಗೆ ವಹಿಸುತ್ತಾರೆ.
ಈ ವೃತ್ತಾಂತ ತಿಳಿದ ವ್ಯಾಸತೀರ್ಥರ ಶಿಷ್ಯ ಪರಂಪರೆಯವರಾದ ರತ್ನಾಕರ ತೀರ್ಥರು ಈ ಬಯಲು ಹನುಮಾನ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ವ್ಯಾಸತೀರ್ಥರು ಅಳವಡಿಸಿಕೊಂಡಿದ್ದ ಎಲ್ಲ ಅಂಶಗಳನ್ನು ಈ ವಿಗ್ರಹ ಹೊಂದಿದೆ.
ಮೂರ್ತಿಯ ಬಲಗೈ ಭಕ್ತರ ಕಡೆಗೆ ತೆರೆದುಕೊಂಡಿದೆ. ತಲೆಯ ಮೇಲಿನಿಂದ ಬಾಲ ವೃತ್ತಾಕಾರದಲ್ಲಿ ಹೋಗುತ್ತದೆ. ಬಾಲದ ತುದಿಗೆ ಗಂಟೆ ಕಟ್ಟಲಾಗಿದೆ. ಪಾದದ ಕೆಳಗೆ ರಾಕ್ಷಸನ ಸಂಹಾರವಾಗಿರುತ್ತದೆ. ಕೈಯಲ್ಲಿ ಸೌಗಂಧಿಕೆ ಪುಷ್ಪ ಇದೆ.
ರಾಜನ ದರ್ಶನ:
ಸುರಪುರದ ಗೋಸಲ ದೊರೆಗಳ ಮೊದಲ ರಾಜಧಾನಿ ವಾಗಣಗೇರಿ. ಒಮ್ಮೆ ಅರಸ ಸುರಪುರದ ಬೆಟ್ಟದಲ್ಲಿ ಬೇಟೆಗೆ ಬರುತ್ತಾನೆ. ಮೊಲವೊಂದು ನಾಯಿಯನ್ನು ಅಟ್ಟಿಸಿಕೊಂಡು ಹೋದದನ್ನು ನೋಡುತ್ತಾನೆ. ಈ ಸ್ಥಳ ನೈಸರ್ಗಿಕ ಬೆಟ್ಟದಂತಿದ್ದು ವಿಶೇಷತೆ ಹೊಂದಿದೆ ಎಂದು ಸುರಪುರವನ್ನು ರಾಜಧಾನಿಯನ್ನಾಗಿ ಮಾಡುತ್ತಾನೆ.
ಅದೇ ಸಮಯದಲ್ಲಿ ಬಯಲು ಹನುಮಾನ ಮೂರ್ತಿಯ ದರ್ಶನವಾಗುತ್ತದೆ. ದೇವಸ್ಥಾನ ನಿರ್ಮಾಣಕ್ಕೆ ಕೈ ಹಾಕುತ್ತಾನೆ. ಸ್ವಪ್ನದಲ್ಲಿ ಬಂದ ಹನುಮಾನ ನನಗೆ ಛತ್ತು ಹಾಕುವುದು ಬೇಡ ಬಯಲಲ್ಲೆ ಇರುತ್ತೇನೆ ಎನ್ನುತ್ತಾನೆ. ಅಂದಿನಿಂದ ಈ ದೇಗುಲಕ್ಕೆ ಬಯಲು ಹನುಮಾನ ದೇವಸ್ಥಾನ ಎಂಬ ಹೆಸರು ಇದೆ. ಅಂದಿನಿಂದ ಬಯಲು ಹನುಮಾನ ಭಕ್ತರ ಕಷ್ಟಗಳ ಪರಿಹಾರಕನಾಗಿದ್ದಾನೆ.
ಕಾರ್ಯಕ್ರಮಗಳು:
ಪುರಾತನ ದೇಗುಲ ಭಕ್ತರ ಸಹಕಾರದಿಂದ ಅಭೂತಪೂರ್ವವಾಗಿ ಜೀರ್ಣೋದ್ಧಾರಗೊಂಡಿದೆ. ದೇವಸ್ಥಾನ ಸಮಿತಿ ಡಿಸೆಂಬರ್ 13 ರಂದು ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಿದೆ. ಬೆಳಿಗ್ಗೆ ಸುಪ್ರಭಾತ, ಧ್ವಜಾರೋಹಣ, ಅಭಿಷೇಕ, ಪವಮಾನ ಹೋಮ, ಅನ್ನಸಂತರ್ಪಣೆ, ಸಂಜೆ ಸತ್ಯನಾರಾಯಣ ಪೂಜೆ, ಕಾರ್ತಿಕೋತ್ಸವ, ಭಜನೆ ಏರ್ಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.