ಯಾದಗಿರಿ: ಧಾರಾಕಾರ ಮಳೆಯಿಂದಾಗಿ ಕಲಬುರಗಿ ಸಣ್ಣ ನೀರಾವರಿ ವಿಭಾಗ ವ್ಯಾಪ್ತಿಯಲ್ಲಿನ ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಯ 91 ಕೆರೆಗಳು ಮೈದುಂಬಿದ್ದು, 132 ಕೆರೆಗಳು ಒಡಲು ತುಂಬಿಸಿಕೊಳ್ಳಲು ಸಜ್ಜಾಗಿವೆ.
ಸಣ್ಣ ನೀರಾವರಿ ಅಧೀನದ ಕಲಬುರಗಿಯಲ್ಲಿ 169 ಹಾಗೂ ಯಾದಗಿರಿಯಲ್ಲಿ 71 ಸೇರಿ ಒಟ್ಟು 240 ಕೆರೆಗಳಿವೆ. ಅವುಗಳ ಪೈಕಿ 91 ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿವೆ. ಕಲಬುರಗಿಯಲ್ಲಿನ 67 ಕೆರೆಗಳು ಒಡಲು ತುಂಬಿದ್ದರೆ, ಯಾದಗಿರಿಯಲ್ಲಿ ಅವುಗಳ ಸಂಖ್ಯೆ 24 ಇದೆ.
132 ಕೆರೆಗಳು ಶೇ 51ರಿಂದ ಶೇ 99ರಷ್ಟು ಭರ್ತಿಯಾಗಿವೆ. ಇನ್ನಷ್ಟು ಮಳೆ ಬಿದ್ದರೆ ಅವುಗಳಲ್ಲಿ ಬಹುತೇಕವು ಕೋಡಿ ಬಿದ್ದು, ಹಳ್ಳಗಳಲ್ಲಿ ಹಾಲ್ನೊರೆ ಹರಿಸಲಿವೆ. ಯಾದಗಿರಿಯಲ್ಲಿ 44 ಕೆರೆಗಳು ಭರ್ತಿಯತ್ತ ಮುಖ ಮಾಡಿದ್ದರೆ, ಕಲಬುರಗಿಯಲ್ಲಿ 88 ಕೆರೆಗಳಿವೆ. 132 ಕೆರೆಗಳ ಒಡಲಿಗೆ ಜಲರಾಶಿ ತುಂಬಿಕೊಂಡರೆ ಭರ್ತಿಯ ಸಂಖ್ಯೆ 223ಕ್ಕೆ ತಲುಪಲಿದೆ. ಶೇ 92.91 ರಷ್ಟು ಕೆರೆಗಳು ಭರ್ತಿಯಾದಂತೆ ಆಗಲಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯು ಎರಡೂ ಜಿಲ್ಲೆಗಳಲ್ಲಿ ಜೀವಕಳೆ ತಂದಿದೆ. ಕೆರೆ–ಕಟ್ಟೆಗಳಿಗೆ ಸಾಕಷ್ಟು ನೀರು ಹರಿದು ಬಂದಿದ್ದು, ಅಂತರ್ಜಲ ಹೆಚ್ಚಳಕ್ಕೆ ಕಾರಣವಾಗಿದೆ. ಈ ವರ್ಷ ಉತ್ತಮ ಮಳೆಯಾಗಿರುವುದು ಭೀಮಾ– ಕೃಷ್ಣಾ ತೀರದ ರೈತರಲ್ಲಿ ನೆಮ್ಮದಿ ತರಿಸಿದೆ. ಅದರಲ್ಲಿ ಕೆರೆ ನೀರು ಆಶ್ರಯಿಸಿರುವ ರೈತರು ಹಾಗೂ ಮೀನುಗಾರರಲ್ಲಿ ಹುಮ್ಮಸ್ಸು ದುಪ್ಪಟ್ಟಾಗಿದೆ.
ಭರ್ತಿಯಾದ ದೊಡ್ಡ ಕೆರೆಗಳು: ಕಲಬುರಗಿ ಜಿಲ್ಲೆಯಲ್ಲಿ ಅಫಜಲಪುರದ ಗೊಬ್ಬುರ ಕೆರೆ, ಆಳಂದದ ಬೆಳಂಬಗಿ ಹೊಸ ಕೆರೆ, ಚಿಂಚೋಳಿಯ ಕೋಡ್ಲಿ ಕೆರೆ, ಚಿಕ್ಕಲಿಂಗದಹಳ್ಳಿ ಕೆರೆ, ಚಿತ್ತಾಪುರದ ಕರದಾಳ ಕೆರೆ, ಜೇವರ್ಗಿಯ ಅವರಾದ ಕೆರೆ, ಕಲಬುರಗಿಯ ಖಾಜಾಕೋಟನೂರ ಕೆರೆ ಹಾಗೂ ಕಮಲಾಪುರದ ಭೂಂಯರ ಕೆರೆಗಳು ತುಂಬಿವೆ.
ಯಾದಗಿರಿಯಲ್ಲಿ ಗುರುಮಠಕಲ್‌ನ ಧರ್ಮಪುರದ ಹೊಸ ಕೆರೆ, ಶಹಾಪುರದ ಶಂಕರನಾರಾಯಣ ಕೆರೆ, ಸುರಪುರದ ಮಾವಿನ ಹಟ್ಟಿ ಹೊಸ ಕೆರೆ, ವಡಗೇರಾದ ಹೊಸ ಕೆರೆ ಹಾಗೂ ಯಾದಗಿರಿಯ ದೊಡ್ಡ ಕೆರೆಗಳು ತುಂಬಿ ಕೋಡಿ ಬಿದ್ದಿವೆ.
ಗುರುಮಠಕಲ್ ತಾಲ್ಲೂಕಿನ 25 ಕೆರೆಗಳ ಪೈಕಿ 21 ಕೆರೆಗಳು ಭರ್ತಿಯತ್ತ ಸಾಗುತ್ತಿದ್ದು, ನಾಲ್ಕು ಸಂಪೂರ್ಣವಾಗಿ ತುಂಬಿವೆ. ಯಾದಗಿರಿ ತಾಲ್ಲೂಕಿನ 31 ಕೆರೆಗಳಲ್ಲಿ 7 ಭರ್ತಿಯಾಗಿವೆ. ಹುಣಸಗಿ ಹಾಗೂ ವಡಗೇರಾದಲ್ಲಿ ತಲಾ ಎರಡು, ಶಹಾಪುರದಲ್ಲಿ 6 ಕೆರೆಗಳ ಪೈಕಿ 5 ಹಾಗೂ ಸುರಪುರದಲ್ಲಿ ನಾಲ್ಕು ಕೆರೆಗಳು ತುಂಬಿವೆ.
ಅಂತರ್ಜಲ ಮಟ್ಟದಲ್ಲಿ ಏರಿಕೆ: ಕೆರೆ– ಕಟ್ಟೆಗಳು ಭರ್ತಿಯಾದರೆ ಅಂತರ್ಜಲದ ಮಟ್ಟದಲ್ಲಿಯೂ ಏರಿಕೆಯಾಗಲಿದೆ. ಕೆರೆ ಆಶ್ರಿತ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆದು ಕೃಷಿಯಲ್ಲಿ ತೊಡಗಿರುವ ರೈತರಿಗೂ ಅನುಕೂಲ ಆಗಲಿದೆ. ಬೇಸಿಗೆಯಲ್ಲಿ ಜನ–ಜಾನುವಾರಿಗಳಿಗೂ ಕುಡಿಯುವ ನೀರಿನ ಕೊರತೆಯೂ ತಗ್ಗಲಿದೆ ಎನ್ನುತ್ತಾರೆ ರೈತರು.
ಕೆರೆ ನೀರಿನ ಗರಿಷ್ಠ ಬಳಕೆಯ ಬಗ್ಗೆ ಮಾಹಿತಿ ನೀಡಿ ಉತ್ತಮವಾದ ಇಳುವರಿ ತರುವ ಪ್ರಯತ್ನ ಮಾಡುತ್ತೇವೆ. ಕೆರೆ ಕಾಲುವೆಗಳಲ್ಲಿನ ಹುಳು ತೆಗೆಯಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದುನಾಗನಗೌಡ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಸಣ್ಣ ನೀರಾವರಿ ಯಾದಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.