ಕೆಂಭಾವಿ: ಭಾರಿ ಮಳೆಯಿಂದ ಪಟ್ಟಣದ ಕೆಲವು ರಸ್ತೆಗಳು ಮತ್ತು ಸ್ಮಶಾನದಲ್ಲಿ ನೀರು ತುಂಬಿ ಕೆರೆಯಂತಾಗಿದ್ದು, ಜನರ ನಿತ್ಯ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಇತ್ತ ಪಟ್ಟಣದಲ್ಲಿ ನಡೆಯುತ್ತಿರುವ ಜಲಧಾರೆ ಕಾಮಗಾರಿಯಿಂದಲೂ ಸದಾ ಒಂದಿಲ್ಲೊಂದು ಅವಾಂತರ ಸೃಷ್ಠಿಯಾಗುತ್ತಿದೆ. ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಜನ ಆರೋಪಿಸುತ್ತಿದ್ದಾರೆ.
ಜಲಧಾರೆ ಕಾಮಗಾರಿಗಾಗಿ ಪಟ್ಟಣದ ರಸ್ತೆಗಳನ್ನು ಅಗೆದು ಹಾಕಲಾಗಿದೆ. ಆದರೆ, ಸದ್ಯ ಮಳೆಗಾಲ ಇರುವುದರಿಂದ ಅಗೆದಿರುವ ಮಣ್ಣು ಚರಂಡಿ ಸೇರಿದ ಪರಿಣಾಮ ಮಳೆ ನೀರು ರಸ್ತೆಗಳು ಕೆರೆಗಳಾಗಿವೆ. ಒಳಗಿರುವ ಮಣ್ಣು ಮತ್ತಷ್ಟು ಕುಸಿದು ರಸ್ತೆಯಲ್ಲಿ ಗುಂಡಿ ಹಾಗೂ ಕಂದಕ ಸೃಷ್ಠಿಯಾಗಿ ಜೀವ ಭಯದಲ್ಲಿ ವಾಹನ ಸವಾರರು ಸಂಚಾರ ಮಾಡುವಂತಾಗಿದೆ.
ಅವೈಜ್ಞಾನಿಕವಾಗಿ ರಸ್ತೆ ಅಗೆಯುತ್ತಿರುವುದರಿಂದ ಕಂದಕಗಳು ಬಾಯಿ ತೆರೆದು ಕುಳಿತಿವೆ ಎನ್ನುವ ಆರೋವೂ ಕೇಳಿಬರುತ್ತಿದೆ. ಅಗತ್ಯಕ್ಕಿಂತ ಹೆಚ್ಚು ರಸ್ತೆ ಅಗೆದು ಅಚ್ಚುಕಟ್ಟುಯಾಗಿರುವ ರಸ್ತೆಗಳು ಹಾಳು ಮಾಡುತ್ತಿದ್ದಾರೆ ಎಂದು ಬಡಾವಣೆಯ ಜನತೆ ಆರೋಪಿಸಿದ್ದಾರೆ.
ಇನ್ನೊಂದೆಡೆ ಮಳೆ ಎಡೆಬಿಡದೆ ಸುರಿದಿದ್ದು ಇದರಿಂದ ಹಿಲ್‍ಟಾಪ್ ಕಾಲೊನಿಗೆ ಹೋಗುವ ರಸ್ತೆ ಮತ್ತು ಕೆಂಗೇರಿ ಬಡಾವಣೆಗೆ ತೆರಳುವ ರಸ್ತೆಗಳಲ್ಲಿ ಸಂಪೂರ್ಣ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು.
ವಿಪ್ರ ಸಮಾಜಕ್ಕೆ ಸೇರಿದ ರುದ್ರಭೂಮಿಗೆ ಪಟ್ಟಣದ ಹಲವು ಬಡಾವಣೆಗಳಿಂದ ಬಂದ ನೀರು ಮತ್ತು ಚರಂಡಿ ನೀರು ನುಗ್ಗಿ ಸುಮಾರು ಮೂರು ಅಡಿಗಳಷ್ಟು ನೀರು ನಿಂತಿದ್ದು ಸ್ಮಶಾನದ ಗೋಡೆ ಬೀಳುವ ಹಂತಕ್ಕೆ ತಲುಪಿದೆ.
ಸ್ಮಶಾನದ ಅವ್ಯವಸ್ಥೆ ಕುರಿತು ಸಮಾಜದ ವತಿಯಿಂದ ಪುರಸಭೆಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗದೆ ಸ್ಮಶಾನದಲ್ಲಿ ನೀರು ನಿಂತಿದ್ದು ಇನ್ನೆರಡು ದಿನಗಳಲ್ಲಿ ಸ್ಮಶಾನವನ್ನು ಸ್ವಚ್ಚಗೊಳಿಸಿ ತಾಂತ್ರಿಕವಾಗಿ ಸರಿಪಡಿಸದಿದ್ದರೆ ಸಮಾಜದ ಜೊತೆಗೂಡಿ ಪುರಸಭೆ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿಪ್ರ ಸಮಾಜದ ಪ್ರಮುಖರು ಎಚ್ಚರಿಸಿದ್ದಾರೆ.
ಪೈಪ್ ಅಳವಡಿಕೆ ನಂತರ ಅಗೆದಿರುವ ರಸ್ತೆಯನ್ನು ಮುಚ್ಚಲಾಗುವುದು. ಮುಂದೆ ನೀರು ಸರಬರಾಜು ಆರಂಭವಾದ ನಂತರ ನಾವು ತೋಡಿದಷ್ಟು ರಸ್ತೆಯನ್ನು ನಿರ್ಮಾಣ ಮಾಡಿಕೊಡಲಾಗುವುದುಶಂಕರಗೌಡ ಎಇಇ ನಗರ ನೀರು ಸರಬರಾಜು ಮಂಡಳಿ
ಡಿಪಿಆರ್‌ನಂತೆ ಆಳದಲ್ಲಿ ಪೈಪ್‍ಗಳನ್ನು ಹಾಕಬೇಕು. ಆದರೆ ಅನೇಕ ಕಡೆ ಅರ್ಧ 1 ರಿಂದ 1.5 ಅಡಿಗಳಿಗೆ ಮಾತ್ರ ಪೈಪ್‍ಗಳನ್ನು ಅಳವಡಿಸಲಾಗಿದೆ. ಪಟ್ಟಣದ ಬಹುಪಾಲು ರಸ್ತೆಗಳಲ್ಲಿ ಗುಂಡಿ ಬಿದ್ದು ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆಕುಮಾರ ಭೋವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.