ಹುಣಸಗಿ ತಾಲ್ಲೂಕಿನ ಹನುಮಸಾಗರ ಗ್ರಾಮದಲ್ಲಿ ಹಳ್ಳದ ನೀರಿಗೆ ಕೊಚ್ಚಿ ಹೊದ ಎತ್ತಿನ ಬಂಡಿ
ಹುಣಸಗಿ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಹಲವೆಡೆ ಭಾನುವಾರ ತಡರಾತ್ರಿ ಸುರಿದ ಮಳೆಯಿಂದಾಗಿ ಹಳ್ಳಕೊಳ್ಳಗಳು ಉಕ್ಕಿ ಹರಿದಿದ್ದು, ಹಳ್ಳದ ನೀರಿಗೆ ಕುರಿ, ಕೋಳಿಗಳು ಕೊಚ್ಚಿಕೊಂಡು ಹೋಗಿವೆ.
ಹುಣಸಗಿ ಪಟ್ಟಣದ ಹಿರೇಹಳ್ಳದಿಂದ ದೇವಪುರವರೆಗಿನ ಹಳ್ಳ ತುಂಬಿ ಹರಿಯುತ್ತಿದೆ. ಇದರಿಂದಾಗಿ ಹಳ್ಳದ ಪಕ್ಕದಲ್ಲಿರುವ ಜಮೀನುಗಳಿಗೆ ಹಳ್ಳದ ನೀರು ನುಗ್ಗಿದೆ. ತಾಲ್ಲೂಕಿನ ಹೆಬ್ಬಾಳ ಕೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲೆ ನೀರು ತುಂಬಿ ಹರಿಯುತ್ತಿದೆ.
ತಾಲ್ಲೂಕಿನ ಗೆದ್ದಲಮರಿ ಬಲಶೆಟ್ಟಿಹಾಳ ಮಧ್ಯದ ಸೇತುವೆ ಕೂಡ ತುಂಬಿ ಹರಿಯುತ್ತಿದ್ದು, ಸೇತುವೆಯೂ ಮುಳುಗಡೆಯಾಗಿದೆ. ಗೆದ್ದಲಮರಿ- ಹುಣಸಗಿ ಸಂಪರ್ಕ ಕಡಿತಗೊಂಡಿದೆ. ಹನುಮಸಾಗರ ಗ್ರಾಮದಲ್ಲಿ ಮಳೆಯ ಹೊಡೆತಕ್ಕೆ ಸುಮಾರು 20ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಕುರಿಗಳೂ ಸಾವನ್ನಪ್ಪಿದ್ದು, ಕೆಲವು ಕೊಚ್ಚಿಕೊಂಡು ಹೋಗಿವೆ. ನೀರಿನ ರಭಸಕ್ಕೆ ಎತ್ತಿನ ಬಂಡೆಯೊಂದು ಕೊಚ್ಚಿಕೊಂಡು ಹೋಗಿ ತಗ್ಗಿಗೆ ಬಿದ್ದಿದೆ ಎಂದು ರೈತರು ತಿಳಿಸಿದ್ದಾರೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಪರಶುರಾಮ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.