
ಶಹಾಪುರ: ‘ಪ್ರೀತಿಗೆ ಯಾವುದೇ ಜಾತಿ ಇರುವುದಿಲ್ಲ. ಮರ್ಯಾದೆಗೇಡು ಹತ್ಯೆಯ ಎಂಬ ರಾಕ್ಷಸ ಕೃತ್ಯವು ಕರಳು ಬಳ್ಳಿಯನ್ನು ಕತ್ತರಿಸಿ ಹಾಕುತ್ತಿರುವ ನಾವು ಜಾತಿ ಮೌಢ್ಯದ ಸಮಾಜ ನಮ್ಮದಾಗಿದೆ. ಸತ್ಯವನ್ನು ಹೇಳುವ ಎದೆಗಾರಿಕೆ ಬೇಕು’ ಎಂದು ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಸಲಹೆ ನೀಡಿದರು.
ಇಲ್ಲಿನ ವೆಂಕಟೇಶ್ವರ ನಗರದಲ್ಲಿ ಭಾನುವಾರ ಅಹಿಂದ ಮುಖಂಡ ಹನುಮೇಗೌಡ ಮರಕಲ್ ಅವರ ಗೃಹ ಕಚೇರಿ ಉದ್ಘಾಟನೆ ನೆಪದಲ್ಲಿ ಹಮ್ಮಿಕೊಂಡಿದ್ದ ‘ಮೌಢ್ಯ ವಿರುದ್ಧ ಒಂದು ಹೆಜ್ಜೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪೂರ್ಜಜರ ಹೆಸರು ಹೇಳುತ್ತಾನೆ ದೊಡ್ಡ ಶಕ್ತಿ ಅವರ ಬಳಿ ಇದೆ ಎಂದು ಮುಗ್ಧ ಜನತೆಯನ್ನು ನಂಬಿಸುವುದರ ಜತೆಯಲ್ಲಿ ವಂಚಿಸುತ್ತಿರುವ ನಮ್ಮ ತಾಲ್ಲೂಕಿನಲ್ಲಿ ಒಬ್ಬ ವ್ಯಕ್ತಿ ಓಡಾಡುತ್ತಿದ್ದಾನೆ. ಅವರ ತಂದೆ ಯಾವ ಕಾರಣಕ್ಕೆ ಕೊಲೆಯಾದ ಎಂಬ ಪ್ರಶ್ನೆ ಮಾಡಬೇಕು. ದೇವರ ಹೆಸರಿನಲ್ಲಿ ನಡೆಯುವ ಮಾಟ, ಮಂತ್ರದ ಬಗ್ಗೆ ಪ್ರಶ್ನೆ ಮಾಡುವ ಮನೋಭಾವ ಬೆಳೆಯಿಸಿಕೊಳ್ಳಿ. ಮುಲ್ಲಾ, ಪಾದ್ರಿ, ಪೂಜಾರಿಗಳಿಂದ ನಾವು ಹೊರ ಬಂದು ಅಕ್ಷರದ ಬೆಳಕಿನ ಅರಿವಿನ ಕಡೆ ನಾವು ಸಾಗಬೇಕು’ ಎಂದರು.
‘ವೇದ, ಶಾಸ್ತ್ರಗಳು ಮನುಕುಲಕ್ಕೆ ಅಂಟಿದ ಶಾಪವಾಗಿವೆ. ನಮ್ಮ ಹಸಿವು ನಾವು ಇಂಗಿಸಿಕೊಳ್ಳಬೇಕು. ಪ್ರಾಮಾಣಿಕವಾಗಿ ನಾವು ದುಡಿಯುಬೇಕು. ನಮ್ಮ ತೋಳ್ಬಲವೇ ನಮ್ಮ ಭರವಸೆಯ ಶಕ್ತಿ. ಮನೆ ವಾಸ್ತವ ನಮಗೆ ಬೇಕಿಲ್ಲ. ಗಾಳಿ, ಬೆಳಕು ಬರುವ ಮನೆ ನಿರ್ಮಿಸಲು ವಾಸ್ತವದ ಚಿಂತನೆ ಮಾಡಿ’ ಎಂದು ಹೇಳಿದರು.
ಅಹಿಂದ ಮುಖಂಡರಾದ ಹನುಮೇಗೌಡ ಮರಕಲ್, ಭೀಮಣ್ಣ ಮೇಟಿ, ಗೌಡಪ್ಪಗೌಡ ಆಲ್ದಾಳ, ಸುದರ್ಶನ ನಾಯಕ, ಶರಾವತಿ ಸತ್ಯಂಪೇಟೆ, ಬಿಜೆಪಿ ಜಿಲ್ಲಾಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಕಾಂಗ್ರೆಸ್‌ನ ಹಿರಿಯ ಮುಖಂಡ ಚಂದ್ರಶೇಖರ ಆರಬೋಳ, ವಕೀಲರ ಸಂಘದ ಅಧ್ಯಕ್ಷ ಯೂಸೂಫ್ ಸಿದ್ದಿಕಿ, ಹಿರಿಯ ವಕೀಲರಾದ ಶ್ರೀನಿವಾಸರಾವ ಕುಕಲರ್ಣಿ, ಚಂದ್ರಶೇಖರ ಲಿಂಗದಳ್ಳಿ, ರಮೇಶ ದೇಶಪಾಂಡೆ, ಮಲ್ಲಣ್ಣ ಹೊಸಮನಿ, ಪುನಿತ ಮರಕಲ್, ವಾಸುದೇವ ಕಟ್ಟಿಮನಿ, ತಿಮ್ಮಯ್ಯ ಪುರ್ಲೆ, ಆರ್.ಚೆನ್ನಬಸ್ಸು ವನದುರ್ಗ, ಮಲ್ಲಿಕಾರ್ಜುನ ಪೂಜಾರಿ, ಎಸ್.ಎಸ್.ನಾಯಕ, ಬಸವರಾಜ ಹೇರುಂಡಿ, ಬಸನಗೌಡ ಮರಕಲ್ ಭಾಗವಹಿಸಿದ್ದರು.
ಜಾತಿ ಭ್ರಮೆಯಿಂದ ಹೊರ ಬನ್ನಿ ದೇವರ ಹೆಸರಲ್ಲಿ ವಂಚನೆ ಬೇಡ | ನಮ್ಮ ತೋಳ್ಬಲ ಭರವಸೆಯ ಶಕ್ತಿ
ನಮ್ಮ ಮನಸ್ಸಿನಲ್ಲಿ ಅಡಗಿರುವ ಮೌಢ್ಯವನ್ನು ತೊರೆಯಬೇಕಾದರೆ ಶಿಕ್ಷಣವೇ ಅದರ ಅಸ್ತ್ರ. ಎಲ್ಲರಂತೆ ಗೋವಿಂದನ ಹಾಡು ಬೇಡ. ವೈಜ್ಞಾನಿಕ ಹಾಗೂ ವೈಚಾರಿಕ ಚಿಂತೆಯನ್ನು ನಾವೆಲ್ಲರು ಜೀವನದಲ್ಲಿ ಅಳಡಿಸಿಕೊಳ್ಳಬೇಕುಹನುಮೇಗೌಡ ಮರಕಲ್ ಅಹಿಂದ ಮುಖಂಡ
ಸ್ಮಶಾನ ಭೀತಿ ಓಡಿಸಲು...!
ಮನುವಾದಿಗಳು ಸ್ಮಶಾನ ಅಮವಾಸ್ಯೆ ಭಯವನ್ನು ಹುಟ್ಟಿಸಿ ಮೌಢ್ಯವನ್ನು ಬೆಳೆಸುವ ಕುತಂತ್ರದ ಭಾಗ ಅಷ್ಟೆ. ಸ್ಮಶಾನ ಭಯ ಓಡಿಸಲು ಮತ್ತು ಅಮವಾಸ್ಯೆ ರಾತ್ರಿಯಲ್ಲಿ ಪೂಜೆ ನೆರವೇರಿಸುವುದು ಮುಖ್ಯ ಉದ್ದೇಶ ಜನತೆಯನ್ನು ಮೌಢ್ಯದಿಂದ ಭಯ ಮುಕ್ತಗೊಳಿಸಲು ಸಚಿವ ಸತೀಶ ಜಾರಕಿಹೊಳಿ ಶ್ರಮಿಸುತ್ತಿದ್ದಾರೆ.ಅದಕ್ಕೆಲ್ಲ ನಾವೆಲ್ಲರು ಹೆಗಲೆಣೆಯಾಗಿದ್ದೇವೆ ಎಂದು ರಾಜ್ಯ ವೈಜ್ಞಾನಿಕ ಪರಿಷತ್ ಸಮ್ಮೇಳನದ ಮಾಜಿ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ತಿರುಗೇಟು ನೀಡಿದರು. ಈಚೆಗೆ ಬೆಳಗಾವಿ ಕಾರ್ಯಕ್ರಮದಲ್ಲಿ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರದಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಅವರು ಸ್ಮಶಾನದಲ್ಲಿ ಪೂಜೆ ಅಮವಾಸ್ಯೆ ದಿನ ಮದುವೆ ಕುರಿತು. ನಮ್ಮ ನಮ್ಮ ಸಮಾಜ ಎತ್ತ ಸಾಗಿದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಅವರು ಉತ್ತರಿಸಿದ ಪರಿ ಇದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.