ADVERTISEMENT

ಹುಣಸಗಿ: ಭರ್ತಿಯತ್ತ ಬಸವಸಾಗರ ಜಲಾಶಯ

ಭೀಮಶೇನರಾವ ಕುಲಕರ್ಣಿ
Published 13 ಜೂನ್ 2025, 5:35 IST
Last Updated 13 ಜೂನ್ 2025, 5:35 IST
<div class="paragraphs"><p>ಹುಣಸಗಿ ತಾಲ್ಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ಗುರುವಾರ ನೀರು ಸಂಗ್ರಹವಾಗಿರುವುದು</p></div>

ಹುಣಸಗಿ ತಾಲ್ಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಲ್ಲಿ ಗುರುವಾರ ನೀರು ಸಂಗ್ರಹವಾಗಿರುವುದು

   

ಹುಣಸಗಿ: ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ನೀರಾವರಿ ಪ್ರದೇಶ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಮತ್ತೆ ಒಳ ಹರಿವು ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳಲ್ಲಿ ಭರ್ತಿಯಾಗುವ ಲಕ್ಷಣಗಳಿವೆ.

ಕಳೆದ ವಾರ ನೀರಿನ ಒಳಹರಿವು ಕಡಿಮೆಯಾಗಿತ್ತು. ಆದರೆ ಜೂ.12ರಿಂದ ಮತ್ತೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ಮಳೆಯಾಗಿದ ಹಿನ್ನೆಲೆಯಲ್ಲಿ ಜೂನ್‌ 11ರಂದು 2500 ಕ್ಯುಸೆಕ್‌ ಇದ್ದ ಒಳಹರಿವು ಜೂನ್‌ 12ರ ಬೆಳಿಗ್ಗೆ 4750 ಕ್ಯುಸೆಕ್‌ಗೆ ತಲುಪಿದೆ. ಇದರಲ್ಲಿ 2700 ಕ್ಯುಸೆಕ್ ಘಟಪ್ರಭಾ ನದಿಯಿಂದ ನೀರು ಹರಿದು ಬರುತ್ತಿರುವುದು ವಿಶೇಷ.

ADVERTISEMENT

ಒಟ್ಟು 492.252 ಮೀಟರ್ ಎತ್ತರದ 33 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 490.56 ಮೀಟರ್‌, 26.119 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಶೇ 80 ರಷ್ಟು ಭರ್ತಿಯಾಗಿದೆ. ಪ್ರತಿ ವರ್ಷ ಜುಲೈ ಆರಂಭದಿಂದ ಒಳ ಹರಿವು ಆರಂಭವಾಗುತ್ತಿತ್ತು. ಆದರೆ ಈ ಬಾರಿ ಎರಡು ವಾರ ಮೊದಲು ಆರಂಭವಾಗಿದೆ. ಅದರಂತೆ ಆಲಮಟ್ಟಿಯ ಲಾಲ್‌ ಬಹದ್ದೂರ್‌ ಶಾಸ್ತ್ರೀ ಜಲಾಶಯಕ್ಕೂ ಒಳಹರಿವು ಹೆಚ್ಚಾಗಿದ್ದು, ಜೂ.12ರಂದು 12640 ಕ್ಯುಸೆಕ್‌ ನೀರು ಹರಿದು ಬಂದಿದೆ. ಸದ್ಯ 61 ಟಿಎಂಸಿ ನೀರು ಸಂಗ್ರಹವಿದೆ ಎಂದು ಡ್ಯಾಂ ಡಿವಿಜನ್ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ಹುಣಸಗಿ ತಾಲ್ಲೂಕು ಸೇರಿದಂತೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿರುವ ರೈತರು ಭತ್ತ ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

‘ಹಿಂಗಾರು ಹಂಗಾಮಿನಲ್ಲಿ ನೀರಿಗಾಗಿ ರೈತರು ಸಾಕಷ್ಟು ಹರಸಾಹಸ ಪಡುವಂತಾಯಿತು. ಲಭ್ಯವಿರುವ ನೀರನ್ನು ಸರಿಯಾಗಿ ನೀಡುವ ಮೂಲಕ ಅಧಿಕಾರಿಗಳು ರೈತರ ಪರ ಕಾಳಜಿ ತೋರಿಸಲಿ’ ಎನ್ನುತ್ತಾರೆ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲನಗೌಡ ಹಗರಟಗಿ ಹಾಗೂ ಮಲ್ಲನಗೌಡ ನಗನೂರು.

‘ಪ್ರತಿ ಬಾರಿ ಧಾರಣೆ, ಇಳುವರಿ ಕುಸಿತದಿಂದ ನಷ್ಟ ಅನುಭವಿಸಿದರೂ ಭತ್ತ ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಮುದನೂರು ಗ್ರಾಮದ ಸತೀಶ ರಸ್ತಾಪುರ, ರಾಮನಗೌಡ ಬಿಕಿನಾಳ ಹೇಳಿದರು.

‘ಲಾಭವಿರಲಿ, ನಷ್ಟವಿರಲಿ ಕೃಷಿ ಬಿಡುವಂತಿಲ್ಲ. ಆದ್ದರಿಂದ ಜೂ.15 ರಿಂದ ಭತ್ತ ನಾಟಿಗೆ ಬೀಜ ಚೆಲ್ಲುತ್ತಿರುವದಾಗಿ ಅಗತೀರ್ಥ ಗ್ರಾಮದ ರಾಮನಗೌಡ ಪಾಟೀಲ ಹಾಗೂ ಬಸವರಾಜ ಸದಬ ಹೇಳಿದರು.

ಪ್ರತಿವರ್ಷಕ್ಕಿಂತ ಈ ಬಾರಿ ಮೊದಲೇ ಒಳಹರಿವು ದಾಖಲಾಗಿದ್ದು ಜಲಾಶಯ ಭರ್ತಿಯತ್ತ ಸಾಗಿರುವದು ಸಂತಸ ತಂದಿದೆ
ರಾಜಾ ವೇಣುಗೋಪಾಲ ನಾಯಕ ಶಾಸಕ

ಯಾವುದೇ ಸಂದರ್ಭದಲ್ಲಿ ನದಿಗೆ ನೀರು

ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಸಮಯದಲ್ಲಾದರೂ ಕೃಷ್ಣಾ ನದಿಗೆ ನೀರು ಹರಿಸಲಾಗುವುದು. ಆದ್ದರಿಂದ ನದಿ ತೀರದಲ್ಲಿರುವ ಗ್ರಾಮಗಳ ಜನತೆ ಎಚ್ಚರಿಕೆಯಿಂದ ಇರಬೇಕು. ಜನ ಜಾನುವಾರುಗಳೊಂದಿಗೆ ನದಿ ತೀರಕ್ಕೆ ತೆರದಂತೆ ನಿಗಮದ ಮುಖ್ಯ ಎಂಜಿನಿಯರ್ ಆರ್.ಮಂಜುನಾಥ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.