ADVERTISEMENT

ಹುಣಸಗಿ | ಕಣ್ಣು ಹಾಯಿಸಿದಷ್ಟು ಹಸಿರು ಹೊದಿಕೆ: ಅಧಿಕ ಇಳುವರಿಯ ನಿರೀಕ್ಷೆ

ಭೀಮಶೇನರಾವ ಕುಲಕರ್ಣಿ
Published 28 ಅಕ್ಟೋಬರ್ 2025, 7:01 IST
Last Updated 28 ಅಕ್ಟೋಬರ್ 2025, 7:01 IST
ಹುಣಸಗಿ ಪಟ್ಟಣದ ಹೊರ ವಲಯದಲ್ಲಿ ಮುಖ್ಯರಸ್ತೆಯ ಪಕ್ಕದಲ್ಲಯೇ ಹಸಿರಿನಿಂದ ಕಂಗೊಳಿಸುತ್ತಿರುವ ಭತ್ತದ ಗದ್ದೆ
ಹುಣಸಗಿ ಪಟ್ಟಣದ ಹೊರ ವಲಯದಲ್ಲಿ ಮುಖ್ಯರಸ್ತೆಯ ಪಕ್ಕದಲ್ಲಯೇ ಹಸಿರಿನಿಂದ ಕಂಗೊಳಿಸುತ್ತಿರುವ ಭತ್ತದ ಗದ್ದೆ    

ಹುಣಸಗಿ: ಕೃಷ್ಣಾ ಅಚ್ಚಕಟ್ಟು ಪ್ರದೇಶದ ಗ್ರಾಮಗಳ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಹಸಿರು ಹೊದಿಕೆ ಎದ್ದು ಕಾಣುತ್ತಿದೆ.

ಕಳೆದ ತಿಂಗಳು ಸುರಿದ ಅಧಿಕ ಮಳೆಯಿಂದಾಗಿ ಒಂದೆಡೆ ತೊಗರಿ, ಹತ್ತಿ ಹಾನಿಯಾದರೆ, ಇನ್ನೊಂದೆಡೆ ಭತ್ತದ ಜಮೀನುಗಳು ಮಾತ್ರ ಹಚ್ಚ ಹಸಿರಿನಿಂದ ಕಂಗೋಳಿಸುತ್ತಿವೆ.

ತಾಲ್ಲೂಕಿನ ಹುಣಸಗಿ ಹಾಗೂ ಕೊಡೇಕಲ್ಲ ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಸದ್ಯ ಕಾಳು ಕಟ್ಟುವ ಹಂತದಲ್ಲಿವೆ. ಇದರಿಂದ ಜಮೀನುಗಳಲ್ಲಿ ಕಣ್ಣು ಹಾಯಿಸಿದಷ್ಟು ಭತ್ತದ ಪೈರಿನ ಹಸಿರು ಹೊದಿಕೆ ಕಾಣುತ್ತಿದ್ದು, ಎಲ್ಲರೂ ತನ್ನತ್ತ ನೋಡುವಂತೆ ಗಮನ ಸೆಳೆಯುತ್ತಿವೆ.

ADVERTISEMENT

ನಸುಕಿನ ಸಮಯದಲ್ಲಿ ಇಬ್ಬನಿಯ ಹನಿಗಳು ಭತ್ತದ ತೆನೆ ಹಾಗೂ ಗರಿಗಳ ಮೇಲೆ ಮುತ್ತುಗಳಿಂದ ಶೃಂಗರಿಸಿದಂತೆ ಕಾಣುವ ಸೋಬಗು ನೋಡುರನ್ನು ಪುಳಕಿತಗೊಳ್ಳುವಂತೆ ಮಾಡುತ್ತಿದೆ ಎನ್ನುತ್ತಾರೆ ವಾಯುವಿಹಾರಿ ಶಿವಲಿಂಗಸ್ವಾಮಿ ವಿರಕ್ತಮಠ ಹಾಗೂ ವಿಜಯಕುಮಾರ ಮೋದಿ, ಗುರುಲಿಂಗಪ್ಪ ಸಜ್ಜನ.

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಈ ಬಾರಿ ಪೂರ್ವಮುಂಗಾರು ಆರಂಭವಾಗಿದ್ದರಿಂದ ನಾರಾಯಣಪುರ ಬಸವಸಾಗರ ಹಾಗೂ ಆಲಮಟ್ಟಿ ಲಾಲ್‌ಬಹದ್ದೂರ ಶಾಸ್ತ್ರಿ ಜಲಾಶಯಕ್ಕೆ ನೀರಿನ ಹರಿವು ಸಾಕಷ್ಟು ಇತ್ತು. ಈ ಹಿನ್ನೆಲೆಯಲ್ಲಿ ಕಾಲುವೆಗೆ ನೀರು ಬೇಗ ಬಂದಿದ್ದರಿಂದ ಭತ್ತ ನಾಟಿ ಏಕಕಾಲಕ್ಕೆ ಆರಂಭವಾಗಿತ್ತು ಎಂದು ರೈತರು ತಿಳಿಸಿದರು.

ಸದ್ಯ ಆರ್‌ಎನ್‌ಆರ್‌ ತಳಿಯ ಸೋನಾ ಕಾಳು ಕಟ್ಟಿದ್ದು, ಹಸಿರು ಬಣ್ಣದಿಂದ ಬಂಗಾರ ಬಣ್ಣಕ್ಕೆ ತಿರುಗುತ್ತಿದೆ. ರಾಶಿ ಹಂತದಲ್ಲಿ ಸಂಪೂರ್ಣ ಹಳದಿ ಬಣ್ಣಕ್ಕೆ ಬರುತ್ತದೆ. ಆದರೆ ಮಳೆ ಅಥವಾ ಗಾಳಿ ಬರದಿದ್ದರೆ ಅಧಿಕ ಇಳುವರಿ ಬರುವ ನಿರೀಕ್ಷೆ ಇದೆ ಎಂದು ರೈತ ಲಕ್ಷ್ಮಿಕಾಂತ ದ್ಯಾಮನಹಾಳ, ನರಸಿಂಹ ಜಹಗೀರದಾರ ಹೇಳಿದರು.

‘ಈ ವರ್ಷ ಆಗಾಗ ಮಳೆಯಾಗಿದ್ದರಿಂದ ಕಾಲುವೆ ನೀರಿಗಿಂತ ಮಳೆ ನೀರನ್ನು ಬಳಸಿದ್ದೇವೆ. ಬಹುತೇಕ ಭತ್ತ ಚನ್ನಾಗಿ ಬೆಳೆದಿದೆ.ಆದರೆ ಸೋನಾ ತಳಿಯ ಭತ್ತದ ಪೈರು ಹಾಲು ತುಂಬುವ ಹಂತದಲ್ಲಿದೆ. ಇನ್ನೂ ಹದಿನೈದು ದಿನಗಳಲ್ಲಿ ಕಾಳು ಸಂಪೂರ್ಣ ಕಟ್ಟುತ್ತದೆ’ ಎಂದು ನಿಂಗನಗೌಡ ಬಸನಗೌಡ್ರ ಮಾಹಿತಿ ನೀಡಿದರು.

ಈ ಹಿಂದೆ ನಡೆದ ಐಸಿಸಿ ಸಭೆ ತೀರ್ಮಾನದಂತೆ ಕಾಲುವೆಗೆ ನೀರನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೆಬಿಜೆಎನ್‌ಎಲ್‌ ಅಧಿಕಾರಿಗಳು ತಿಳಿಸಿದರು.

ಹುಣಸಗಿ ಪಟ್ಟಣದ ಹೊರ ವಲಯದಲ್ಲಿ ಬೆಳೆದಿರುವ ಭತ್ತ ಕಾಳು ಕಟ್ಟಿರುವದು
ಹುಣಸಗಿ ಪಟ್ಟಣದ ಹೊರ ವಲಯದಲ್ಲಿ ಹಸಿರಿನಿಂದ ಕಂಗೊಳಿಸುತ್ತಿರುವ ಭತ್ತದ ಗದ್ದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.