
ಸುರಪುರ: ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಮೂರ್ನಾಲ್ಕು ವರ್ಷಗಳು ಓಡಿದ ಬೈಕ್‌ಗಳನ್ನು ಗುರಿಯಾಗಿಸಿಕೊಂಡು ಕದಿಯುತ್ತಿದ್ದ ಅಂತರರಾಜ್ಯ ಕಳ್ಳರ ಜಾಲವನ್ನು ಸುರಪುರ ಠಾಣೆಯ ಪೊಲೀಸ್ ಅಧಿಕಾರಿಗಳು ಬೇಧಿಸಿ, ಒಬ್ಬನನ್ನು ಬಂಧಿಸಿದ್ದಾರೆ. ತಲೆ ಮರೆಸಿಕೊಂಡ ಆರು ಮಂದಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಹುಣಸಗಿ ತಾಲ್ಲೂಕಿನ ಮಾನಪ್ಪ ತಿಪ್ಪಣ್ಣ ಕಟ್ಟಿಮನಿ ಬಂಧಿತ ಆರೋಪಿ. ಆತನಿಂದ 57 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ತಲೆ ಮರೆಸಿಕೊಂಡಿರುವ ಬೈರಿಮಡ್ಡಿ, ರತ್ತಾಳ, ಸಿದ್ದಾಪುರ, ಹಸನಾಪುರ ಗ್ರಾಮದ 6 ಮಂದಿ ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ.
ಈ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ‘ತಾಲ್ಲೂಕಿನ ಸತ್ಯಂಪೇಟೆ ನಿಂಗಪ್ಪ ಮರೆಪ್ಪ ಮಕಾಶಿ ಅವರು ಜನವರಿ 15ರಂದು ತಮ್ಮ ಬೈಕ್ ಕಳ್ಳತನದ ದೂರು ದಾಖಲಿಸಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ನಮ್ಮ ಸಿಬ್ಬಂದಿ ಪತ್ತೆ ಕಾರ್ಯ ಆರಂಭಿಸಿ, ಶಂಕಿತ ಮಾನಪ್ಪನನ್ನು ವಶಕ್ಕೆ ಪಡೆದರು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಬೈಕ್ ಕಳ್ಳತನ ಮಾಡಿರುವುದು ಒಪ್ಪಿಕೊಂಡಿದ್ದಾನೆ’ ಎಂದರು.
‘ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಬೈಕ್ ಕಳ್ಳತನ ಮಾಡಿದ್ದಾನೆ. ರಾಯಚೂರಿನಲ್ಲಿ 8, ಯಾದಗಿರಿಯಲ್ಲಿ 5, ಶಹಾಪುರದಲ್ಲಿ 2, ಭೀಮರಾಯನ ಗುಡಿ, ವಡಗೇರಾ ಹಾಗೂ ಸುರಪುರ ವ್ಯಾಪ್ತಿಯಲ್ಲಿ ತಲಾ ಒಂದು ಸೇರಿ ಒಟ್ಟು 18 ಬೈಕ್ ಕಳ್ಳತನ ಮಾಡಿದ್ದಾನೆ. ಕಳ್ಳತನದ ಕೃತ್ಯಗಳಿಗೆ ತಲೆ ಮರಿಸಿಕೊಂಡಿರುವ ಆರು ಮಂದಿಯೂ ಸಹಕರಿಸಿದ್ದರು ಎಂದೂ ಬಾಯಿಬಿಟ್ಟಿದ್ದಾನೆ’ ಎಂದು ಹೇಳಿದರು.
ಆರೋಪಿ ಬಂಧನಕ್ಕೆ ಡಿವೈಎಸ್‌ಪಿ ಜಾವೇದ್ ಇನಾಮದಾರ್ ಮಾರ್ಗದರ್ಶನದಲ್ಲಿ ಪಿಐ ಉಮೇಶ್ ಎಂ.ನಾಯಕ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಅಭಿನಂದಿಸಿ, ಪ್ರಶಂಸೆ ಪತ್ರನ ನೀಡುವುದಾಗಿ ಎಸ್‌ಪಿ ತಿಳಿಸಿದರು.
ಪಿಎಸ್‌ಐ ಸಿದ್ದಣ್ಣ ಯಡ್ರಾಮಿ, ಕೃಷ್ಣಾ ಸುಬೇದಾರ, ಹೆಡ್‌ಕಾನ್‌ಸ್ಟೆಬಲ್ ಸಣ್ಣೆಕ್ಕಪ್ಪ ಪೂಜಾರಿ, ನಾಗರಾಜ, ಮಲ್ಲಯ್ಯ, ಪ್ರಕಾಶ, ಹುಸೇನ್ ಬಾಷಾ, ಲಕ್ಷ್ಮಣ, ಜಗದೀಶ, ಹುಲಿಗೆಪ್ಪ, ಗೋವಿಂದ, ಆಂಜನೇಯ ತಾಯಣ್ಣ, ಮಲಕಾರಿ, ಬೆರಳಚ್ಟು ಪಿಐ ರಮೇಶ ಕಾಂಬ್ಳೆ, ಸಿಡಿಆರ್ ಘಟಕದ ಎಆರ್ ಎಸ್‌ಐ ಸುರೇಶ್ ತಂಡದಲ್ಲಿದ್ದರು.
ಇಸ್ಪೀಟ್ ಜೂಜಾಟಕ್ಕೆ ಕಳ್ಳತನದ ಹಣ
‘ಮೂರ್ನಾಲ್ಕು ವರ್ಷಗಳು ಓಡಿದ್ದ ಬೈಕ್‌ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದರು. ವಶಕ್ಕೆ ಪಡೆದ ಬೈಕ್‌ಗಳ ಪೈಕಿ 15 ಬೈಕ್‌ಗಳ ನೋಂದಣಿಯಾಗಿಲ್ಲ. ಉಳಿದ ವಾಹನಗಳಿಗೆ ನಕಲಿ ನಂಬರ್ ಹಾಕಲಾಗಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕಳ್ಳತನ ಮಾಡಿರುವ ಬೈಕ್‌ಗಳನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿ ಬಂಧಹ ಹಣವನ್ನು ಆರೋಪಿಯು ಇಸ್ಪೀಟ್ ಜೂಜಾಟದಲ್ಲಿ ಖರ್ಚು ಮಾಡುತ್ತಿದ್ದ’ ಎಂದು ಎಸ್‌ಪಿ ಪೃಥ್ವಿಕ್ ಶಂಕರ್ ತಿಳಿಸಿದರು.
ಪ್ರೇಮ ವೈಫಲ್ಯ, ಯುವಕ ಆತ್ಮಹತ್ಯೆ
ಪ್ರೇಮ ವೈಫಲ್ಯದಿಂದ ಮನನೊಂದ ಯುವಕನೊಬ್ಬ ಕ್ರಿಮಿನಾಶಕ ಕುಡಿದು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದು ಈ ಸಂಬಂಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೆರೆಯ ತೆಲಂಗಾಣ ರಾಜ್ಯದ ನಾರಾಯಣಪೇಟೆ ಜಿಲ್ಲೆಯ ಆಲಂಪಲ್ಲಿ ಗ್ರಾಮ ಮೂಲದ ಸೈದಾಪುರದಲ್ಲಿ ಐಟಿಐ ಓದುತ್ತಿದ್ದ ಭೀಮಣ್ಣ ಪೋತುಲೋರ (20) ಮೃತರು. ಭೀಮಣ್ಣ ಕಳೆದ ಒಂದು ವರ್ಷದಿಂದ ಮುನಗಲ್ ಗ್ರಾಮದ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ. ಪ್ರೀತಿಗೆ ಯುವತಿ ನಿರಾಕರಣೆ ಮಾಡಿದ್ದಳು. ಇದರಿಂದ ನೊಂದುಕೊಂಡು ಭೂಮಿಯ ಮೇಲೆ ಯಾರಿಗೋಸ್ಕರ ಬದುಕಬೇಕು ಎಂದು ಪದೇ ಪದೇ ಹೇಳುತ್ತಿದ. ಜನವರಿ 22ರ ಬೆಳಿಗ್ಗೆ ಕ್ರಿಮಿನಾಶಕ ಕುಡಿದು ಬಳಿಕ ತಂದೆಗೆ ಫೋನ್ ಮಾಡಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ರಾಯಚೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.