ಯಾದಗಿರಿ: ‘ದುಷ್ಟ ಜನರನ್ನು ಶಿಕ್ಷಿಸಿ, ಶಿಷ್ಟ ಸಮುದಾಯದ ರಕ್ಷಣೆಗೆಂದು ಕೃಷ್ಣ ಭಗವಾನರು ಜನ್ಮಿಸಿದರು ಎಂದು ನಮ್ಮ ಪುರಾಣಗಳು ಹೇಳುತ್ತವೆ. ಜನ ಸಮುದಾಯದ ರಕ್ಷಣೆ, ಧರ್ಮ ಪರಿಪಾಲನೆಗೆ ಸಂಬಂಧಿಸಿದಂತೆ ಕೃಷ್ಣನು ನೀಡಿದ ಮಾರ್ಗದರ್ಶನ ಮತ್ತು ಆತನ ಆದರ್ಶಗಳನ್ನು ನಾವೆಲ್ಲಾ ಪಾಲಿಸೋಣ’ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಕರೆ ನೀಡಿದರು.
ನಗರದ ಗಾಂಧಿ ವೃತ್ತದಲ್ಲಿ ಶನಿವಾರ ಗಿರಿನಾಡು ಗೆಳೆಯರ ಬಳಗದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಆಯೋಜಿಸಿದ್ದ ಮೊಸರಿನ ಗಡಿಗೆ ಒಡೆಯುವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭೂಮಿಯಲ್ಲಿನ ಪಾಪಕರ್ಮಗಳು ತೊಡೆದು, ಉತ್ತಮ ಕಾರ್ಯಗಳಿಗೆ ಅನುವಾಗಿಸಲು ಕೃಷ್ಣನ ಅವತಾರವಾಯಿತು. ಕೃಷ್ಣ ಪರಮಾತ್ಮನ ವಾಣಿ ಮತ್ತು ಬದುಕಿನ ರೀತಿಯನ್ನು ನಾವೆಲ್ಲಾ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ನಡೆಸೋಣ’ ಎಂದರು.
ಯಾದಗಿರಿ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ ಮಾತನಾಡಿ, ‘ಗಿರಿನಾಡು ಗೆಳೆಯರ ಬಳಗ ಪ್ರತಿವರ್ಷವು ಕಾರ್ಯಕ್ರಮ ಆಯೋಜಿಸುವ ಮೂಲಕ ಕೃಷ್ಣನ ಜೀವನ ಪರಿಚಯ ಮತ್ತು ಪರಂಪರೆ ಉಳಿಸಿ ಬೇಳೆಸುತ್ತಿದೆ. ಉತ್ತಮ ಬದುಕಿಗೆ ಕೃಷ್ಣ ದೇವರ ಬೋಧನೆಗಳು ದಾರಿದೀಪವಾಗಿವೆ’ ಎಂದರು.
ಶಾಸಕ ಶರಣಗೌಡ ಕಂದಕೂರ ವೈಯಕ್ತಿಕವಾಗಿ ವಿಜೇತ ತಂಡಕ್ಕೆ ₹25 ಸಾವಿರ ಬಹುಮಾನ ನೀಡಿದರು.
ಆರು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ವಿನಾಯಕ ಯುವಕರ ತಂಡದವರು ವಿಜೇತರಾದರು. ಜೈಕರ್ನಾಟಕ ತಂಡದ ಮಲ್ಲಕಂಬ ಪ್ರದರ್ಶನ ಗಮನ ಸೆಳೆಯಿತು.
ಗಿರಿನಾಡು ಗೆಳೆಯರ ಬಳಗದ ದೊಡ್ಡಪ್ಪ ಚಂಡರ್ಕಿ, ಸಾಬಣ್ಣ ನಾಯ್ಕಲ್, ಬಸ್ಸುಗೌಡ ಕ್ಯಾತ್ನಾಳ, ವಿಶ್ವನಾಥ ಜಾಕನಳ್ಳಿ, ಆಂಜನೇಯ ಬಂಗಿ, ಆನಂದ ಮಸಿಮಟ್, ಆನಂದ ಕೋರಿ, ಉಮೇಶ ಮಡಿವಾಳ, ವಿಶ್ವ ಗಣಪುರ, ವೆಂಕಟೇಶ, ಜಗದೀಶ ಕಟ್ಟಿಮನಿ, ರಮೇಶ ಪರೇಟ್, ರಾಘವೇಂದ್ರ ಗೌಳಿ, ಬಂದೇಶ ಪಾಂಚಾಳ, ಸಚಿನ ಪಡಶೆಟ್ಟಿ, ಪ್ರಭು ದೇವಶೆಟ್ಟಿ, ಮಹೇಶ ಚಿಂತನಹಳ್ಳಿ, ಸಾಬಣ್ಣ ಮುಂಡರಗಿ, ನಾಗರಾಜ ಸಜ್ಜನ, ಶಿವು ಹಡಪದ, ಚೇತನ ಸುರಪುರ, ಮುರಗೇಂದ್ರ ಕಟ್ಟಿಮನಿ, ರಾಜು ಮುದ್ನಾಳ ಮತ್ತು ಮಲ್ಲಪ್ಪ ನಾಯಕ್ ಅವರು ಸ್ಪರ್ಧೆಗಳನ್ನು ನಿಭಾಯಿಸಿದರು.
ಬಳಗದ ಅಧ್ಯಕ್ಷ ಶಶಾಂಕ ನಾಲಡಗಿ, ಜಿಲ್ಲಾ ಗೊಲ್ಲ(ಯಾದವ) ಸಂಘದ ಅಧ್ಯಕ್ಷ ತಾಯಪ್ಪ ಯಾದವ ಕಾಳೆಬೆಳಗುಂದಿ, ಯುವ ಮುಖಂಡ ಮಹೇಶ ಅನಪುರ, ಕೋಲಿ ಸಮಾಜ ಯುವ ಅಧ್ಯಕ್ಷ ನಿಂಗಪ್ಪ ಜಾಲಗಾರ, ಅಜಯರೆಡ್ಡಿ ಯೆಲ್ಹೆರಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸುಭಾಶಚಂದ್ರ ಕಟಕಟಿ, ಮುಖಂಡರಾದ ರಜನಿ ಕಟ್ಟಾ, ಬಂದಪ್ಪ ಅರಳಿ, ಉದ್ಯಮಿ ವಿಕಾಸ ಶಿಂದೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.