ADVERTISEMENT

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಹಿಂದುಳಿದ ‘ಕಲ್ಯಾಣ’ದ 6 ಜಿಲ್ಲೆಗಳು

ಜನಸಂಖ್ಯೆ ಮಾಹಿತಿ ಸಂಗ್ರಹ; ಚಿಕ್ಕಮಗಳೂರು ಪ್ರಥಮ, ಯಾದಗಿರಿಗೆ ಕೊನೆ ಸ್ಥಾನ

ಮಲ್ಲಿಕಾರ್ಜುನ ನಾಲವಾರ
Published 14 ಅಕ್ಟೋಬರ್ 2025, 23:45 IST
Last Updated 14 ಅಕ್ಟೋಬರ್ 2025, 23:45 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಯಾದಗಿರಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮಾಹಿತಿ ಸಂಗ್ರಹದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳು ಹಿಂದೆ ಬಿದ್ದಿವೆ.

ರಾಜ್ಯದಲ್ಲಿ 1.48 ಕೋಟಿ ಕುಟುಂಬಗಳ ಸುಮಾರು 6.14 ಕೋಟಿ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸುವುದು ಗುರಿ. ಅಕ್ಟೋಬರ್ 13ರ ಸಂಜೆ 6.30ರ ವೇಳೆಗೆ ಸಮೀಕ್ಷೆಯಲ್ಲಿ 4.92 ಕೋಟಿ ಜನರ ಮಾಹಿತಿಯನ್ನು ಕ್ರೋಢೀಕರಣ ಮಾಡಿ ಶೇ 80.15ರಷ್ಟು ಪೂರ್ಣಗೊಳಿಸಲಾಗಿದೆ.

ಕೊಪ್ಪಳ ಹೊರತುಪಡಿಸಿ ‘ಕಲ್ಯಾಣ’ದ ಉಳಿದ ಆರು ಜಿಲ್ಲೆಗಳು ಕೊನೆಯಲ್ಲಿರುವ 10 ಜಿಲ್ಲೆಗಳಲ್ಲಿ ಸ್ಥಾನ ಪಡೆದಿವೆ. ಅದರಲ್ಲಿ ಕೊಡಗು, ಚಿಕ್ಕಬಳ್ಳಾಪುರ, ಮೈಸೂರು ಹಾಗೂ ವಿಜಯಪುರ ಜಿಲ್ಲೆಗಳೂ ಇವೆ. ಯಾದಗಿರಿ ಜಿಲ್ಲೆಯಲ್ಲಿ ಶೇ 69.37ರಷ್ಟು ಪ್ರಗತಿಯಾಗಿದ್ದು, ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದೆ. 

ADVERTISEMENT

ಜನಸಂಖ್ಯೆ ಮಾಹಿತಿ ಸಂಗ್ರಹದಲ್ಲಿ ಚಿಕ್ಕಮಗಳೂರು (ಶೇ 91.32), ತುಮಕೂರು (90.03), ಮಂಡ್ಯ (90) ಮೊದಲ ಮೂರು ಸ್ಥಾನದಲ್ಲಿವೆ. ಹಾವೇರಿ (89.87), ದಾವಣಗೆರೆ (87), ಬೆಂಗಳೂರು ದಕ್ಷಿಣ (87.35), ಹಾಸನ (86), ಶಿವಮೊಗ್ಗ (86), ಚಿತ್ರದುರ್ಗ (86.11), ಉಡುಪಿ (85.11) ಅಗ್ರ 10 ಸ್ಥಾನದಲ್ಲಿವೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 1.44 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸುವ ಗುರಿ ಇತ್ತು. ಈವರೆಗೆ 1.07 ಕೋಟಿ ಜನರ ಮಾಹಿತಿ ಸಂಗ್ರಹಿಸಲಾಗಿದೆ. ಕೊಪ್ಪಳ (ಶೇ 82.27) ರಾಜ್ಯದಲ್ಲಿ 14ನೇ ಸ್ಥಾನದಲ್ಲಿದೆ. ಉಳಿದಂತೆ ಬೀದರ್ 25, ರಾಯಚೂರು 26, ಬಳ್ಳಾರಿ 27, ಕಲಬುರಗಿ 28ನೇ ಸ್ಥಾನದಲ್ಲಿವೆ. 

‘ಕೆಲ ಕುಟುಂಬಗಳು ಹಳೇ, ಹೊಸ ಪಡಿತರ ಚೀಟಿ ಹೊಂದಿವೆ. ಹೊಸ ಪಡಿತರ ಚೀಟಿ ಅನ್ವಯ ಕುಟುಂಬದ ಸದಸ್ಯರ ಹೆಸರು ಸೇರ್ಪಡೆ ಮಾಡಿದ್ದರೂ ಹಳೇ ಪಡಿತರ ಚೀಟಿಯಲ್ಲಿನ ಹೆಸರುಗಳು ಸಮೀಕ್ಷೆಯ ಉಳಿಕೆ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿವೆ’ ಇದೂ ಹಿನ್ನಡೆಗೆ ಕಾರಣ’ ಎನ್ನುತ್ತಾರೆ ಡಿಡಿಪಿಐ ಚನ್ನಬಸಪ್ಪ ಮುಧೋಳ.

ಕಲ್ಯಾಣ ಕರ್ನಾಟಕ ನಕ್ಷೆ
ತಾಂತ್ರಿಕ ಸಮಸ್ಯೆ ಜತೆಗೆ ಕೆಲವೆಡೆ ಕುಟುಂಬದ ಸದಸ್ಯರು ಇದ್ದರೂ ಇಲ್ಲ ಎನ್ನುವ ಮಾಹಿತಿ ನೀಡಲಾಗುತ್ತಿದೆ. ಇದರಿಂದಲೂ ವಿಳಂಬ ಆಗುತ್ತಿದೆ.
ಹರ್ಷಲ್ ಭೋಯರ್ ಯಾದಗಿರಿ ಜಿಲ್ಲಾಧಿಕಾರಿ

ಅವಧಿ ವಿಸ್ತರಣೆ ಇಲ್ಲ: ಶಾಲಿನಿ ರಜನೀಶ್‌

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ. ಅ.18ರ ಒಳಗೆ ಬಾಕಿ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಹೇಳಿದ್ದಾರೆ.

18ರೊಳಗೆ ಮುಗಿಯಲಿದೆ –ಸಚಿವ 

ಬೆಳಗಾವಿ: ‘ಬೆಂಗಳೂರು ಬಿಟ್ಟರೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸಮೀಕ್ಷೆಯನ್ನು ಅ.18ರೊಳಗೆ ಪೂರ್ಣ ಗೊಳಿಸುತ್ತೇವೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

‘ಈವರೆಗೆ 5.34 ಕೋಟಿ ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರು ನಗರದಲ್ಲಿ 41 ಲಕ್ಷ ಜನರು ಭಾಗಿಯಾಗಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಶೇ 100ರಷ್ಟು ಮುಗಿದಿದೆ. ಬೆಂಗಳೂರಿಲ್ಲಿ ಮಾತ್ರ ವಿಳಂಬವಾಗುತ್ತಿದೆ. ಅದನ್ನು ಬೇಗ ಮುಗಿಸುವ ಸವಾಲು ಮುಂದಿದೆ’ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.