ADVERTISEMENT

Karnataka Politics | ಸಿದ್ದರಾಮಯ್ಯ ಬಜೆಟ್ ಮಂಡಿಸುವ ಭರವಸೆ ಇದೆ: ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 4:20 IST
Last Updated 30 ಡಿಸೆಂಬರ್ 2025, 4:20 IST
ಸತೀಶ್‌ ಜಾರಕಿಹೊಳಿ
ಸತೀಶ್‌ ಜಾರಕಿಹೊಳಿ   

ಯಾದಗಿರಿ: ‘ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದು, ಮುಂಬರುವ ಬಜೆಟ್‌ ಅನ್ನು ಅವರೇ ಮಂಡಿಸುತ್ತಾರೆ ಎಂಬ ಭರವಸೆ ಇದೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಂಕ್ರಾಂತಿ ಮುಗಿದ ಮೇಲೆ ಈ ಬಗ್ಗೆ ಹೇಳೋಣ. ಅದಕ್ಕೆ ಪಕ್ಷ, ಹೈಕಮಾಂಡ್ ಇದೆ. ನಾವು ಯಾರೂ ದೆಹಲಿಗೆ ಹೋಗುವುದಿಲ್ಲ. ಸಿಎಂ ಬಗ್ಗೆ ಹಾದಿಯಲ್ಲಿ ಹೇಳುವುದಲ್ಲ, ಅದು ಹಾದಿಯಲ್ಲಿ ಸಿಗುವುದಿಲ್ಲ. ಅದಕ್ಕೆ ತನ್ನದೆ ಆದ ದಾರಿ, ದಾಟಿ ಇದೆ’ ಎಂದರು. ಇದೇ ವೇಳೆ ಅವರ ಹಿಂದೆ ನಿಂತಿದ್ದ ಬೆಂಬಲಿಗರು, ‘ಮುಂದಿನ ಸಿಎಂ ಸತೀಶ ಜಾರಕಿಹೊಳಿ’ ಎಂದು ಘೋಷಣೆ ಕೂಗಿದರು.

‘ಬೆಂಗಳೂರಿನಲ್ಲಿ ಅಕ್ರಮ ಒತ್ತವರಿ ಪ್ರದೇಶ ನೆಲಸಮ ಮಾಡಿರುವ ಪ್ರಕರಣದಲ್ಲಿ ಭೂಮಿಯ ಮಾಲೀಕರು ಯಾರು? ಏಕೆ ತೆರವು ಮಾಡಿದರು ಎಂಬುದನ್ನು ಚರ್ಚಿಸಿ, ಮಾನವೀಯತೆ ದೃಷ್ಟಿಯಿಂದ ವಸತಿ ವ್ಯವಸ್ಥೆ ಕಲ್ಪಿಸಬೇಕಾಗುತ್ತದೆ’ ಎಂದರು.‌

ADVERTISEMENT

‘ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಾಗ ಡ್ರಗ್ಸ್‌ ದಂಧೆಯೇ ಮೊದಲ ಶತ್ರು. ಎಲ್ಲ ಸರ್ಕಾರಗಳು ಅದನ್ನು ನಿಗ್ರಹ ಮಾಡಬೇಕಾಗುತ್ತದೆ. ಡ್ರಗ್ಸ್ ಮತ್ತು ಹೊಸ ವರ್ಷ ಆಚರಣೆಗೂ ಸಂಬಂಧ ಇರಬಹುದು. ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರು ಜಂಟಿಯಾಗಿ ತನಿಖೆ ಮಾಡಲಿ. ಬಿಜೆಪಿಯವರು ಹೇಳಿದ ಮಾತ್ರಕ್ಕೆ ಗೃಹ ಸಚಿವರು ರಾಜೀನಾಮೆ ಕೊಡಬೇಕಾಗಿಲ್ಲ. ಅವರ ಸರ್ಕಾರದಲ್ಲಿಯೂ ಸಾಕಷ್ಟು ವೈಫಲ್ಯಗಳು ಆಗಿದ್ದವು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.