ADVERTISEMENT

ಸುರಪುರ: ಬಸಣ್ಣ ಮೋನಪ್ಪ ಬಡಿಗೇರ ಅವರಿಗೆ ಒಲಿದ ರಾಜ್ಯೋತ್ಸವ ಗರಿ

ಅಶೋಕ ಸಾಲವಾಡಗಿ
Published 31 ಅಕ್ಟೋಬರ್ 2025, 7:32 IST
Last Updated 31 ಅಕ್ಟೋಬರ್ 2025, 7:32 IST
ಕೆತ್ತನೆಯಲ್ಲಿ ತೊಡಗಿರುವ ಬಸಣ್ಣ
ಕೆತ್ತನೆಯಲ್ಲಿ ತೊಡಗಿರುವ ಬಸಣ್ಣ   

ಸುರಪುರ: ಪ್ರಸ್ತುತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ತಾಲ್ಲೂಕಿನ ಹಂದ್ರಾಳ ಎಸ್.ಡಿ. ಗ್ರಾಮದ ಬಸಣ್ಣ ಮೋನಪ್ಪ ಬಡಿಗೇರ ಅವರಿಗೆ ಲಭಿಸಿದೆ.

ಬಸಣ್ಣ ಅವರು ಜೂನ್ 1, 1933 ರಂದು ಜನಿಸಿದರು. ಬಾಲ್ಯದಲ್ಲಿಯೇ ತಲೆತಲಾಂತರದಿಂದ ಬಳುವಳಿಯಾಗಿ ಬಂದ ಕಾಷ್ಠಶಿಲ್ಪ ಕಾಯಕವನ್ನು ಅಪ್ಪಿಕೊಂಡರು. ಲಯಬದ್ಧವಾದ ಅನೇಕ ಕಲಾಕೃತಿ, ಮನೆಗಳನ್ನು ನಿರ್ಮಿಸಿದ್ದಾರೆ.

ಚದುರಂಗ ಪಡಸಾಲೆ, ಐದು ಮತ್ತು ಏಳು ಅಂಕಣ ಪಡಸಾಲೆ, ತೊಲೆ, ಬೋದು, ಬಿತ್ತಿತೊಲೆ, ಪಂಕಬೋದು, ಖಂಡೆ, ಮೋದಕಾನಿ, ಕಮಾನ, ನಾಗಬಂಧ, ಗಡಿಗೆ ಕಂಬ, ಪಲ್ಲಕ್ಕಿ, ತೇರು, ಮಂಟಪ, ತೋರಣ, ಪ್ರಾಣಿ, ಪಕ್ಷಿ, ದೇವತೆಗಳ ಅನೇಕ ಕಲಾತ್ಮಕ ಕೆತ್ತನೆ ಅವರ ಕುಸುರಿಯಲ್ಲಿ ಅರಳಿವೆ.

ADVERTISEMENT

ಅವರ ಕೆತ್ತನೆಗಳು ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳು, ಬೆಂಗಳೂರು, ಮಹಾರಾಷ್ಟ್ರ, ಆಂಧ್ರಪ್ರದೇಶ ರಾಜ್ಯಗಳಲ್ಲಿ ನೋಡಲು ಸಿಗುತ್ತವೆ. 

1985 ರಲ್ಲಿ ಸುರಪುರದಲ್ಲಿ ನಡೆದ ಸಗರನಾಡು ದರ್ಶನ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಏರ್ಪಡಿಸುವ ವಾರ್ಷಿಕ ಶಿಬಿರಗಳಲ್ಲಿ ಸತತವಾಗಿ 2005 ರಿಂದ 2010ರ ವರೆಗೆ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.

ಆಯೋಧ್ಯೆಯ ರಾಮಲಲ್ಲಾ ಮೂರ್ತಿಯ ಸ್ತಪತಿಯಾಗಿದ್ದ ಮಾನಯ್ಯ ಬಡಿಗೇರ ಮತ್ತು ರಾಮಲಲ್ಲಾ ಮೂರ್ತಿ ಶಿಲಾ ತಜ್ಞರಾಗಿದ್ದ ಸುರೇಂದ್ರ ವಿಶ್ವಕರ್ಮ ಅವರು ಬಸಣ್ಣ ಅವರ ಶಿಷ್ಯರು. ಖ್ಯಾತ ಕಲಾವಿದರಾದ ಮಲ್ಲಿಕಾರ್ಜುನ ಚಿಕ್ಕನಳ್ಳಿ, ಶ್ರೀಶೈಲ ಬಡಿಗೇರ, ಶಕುಂತಲಾ ಬಡಿಗೇರ, ಚಂದ್ರಶೇಖರ ಶಿಲ್ಪಿ ಇತರ ಹಲವರು ಅವರ ಶಿಷ್ಯ ಬಳಗದಲ್ಲಿದ್ದಾರೆ.

ಪ್ರತಿನಿತ್ಯ 8 ರಿಂದ 10 ಗಂಟೆ ಕಾಯಕದಲ್ಲಿ ತೊಡಗುತ್ತಿದ್ದ ಅವರು ಕಳೆದ 4 ವರ್ಷಗಳಿಂದ ಕೆತ್ತನೆಗೆ ವಿರಾಮ ನೀಡಿದ್ದಾರೆ. ಈಗ ಕಲಬುರಗಿಯ ಅವರ ಮಗನ ಮನೆಯಲ್ಲಿ ವಾಸವಾಗಿದ್ದಾರೆ.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಗೌರವ ಪ್ರಶಸ್ತಿ ಮತ್ತು ಜಕಣಾಚಾರಿ ಪ್ರಶಸ್ತಿಗಳು ಲಭಿಸಿವೆ. ಈಗ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ಅವರ ಜೀವನಪೂರ್ತಿ ಸಾಧನೆಗೆ ಸಂದ ಗೌರವವಾಗಿದೆ.

ಬಸಣ್ಣ ಅವರ ಕೈಯಲ್ಲಿ ಅರಳಿರುವ ಸುಂದರ ಹೆಬ್ಬಾಗಿಲು
ತಾವೇ ಕೆತ್ತಿರುವ ಹಯವದನವನ್ನು ವೀಕ್ಷಿಸುತ್ತಿರುವ ಶಿಲ್ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.