
ಶಹಾಪುರ: ರಾಜ್ಯ ವಕೀಲರ ಪರಿಷತ್‌ನ 25 ಸ್ಥಾನಗಳಿಗೆ ಮಾ.11 ರಂದು ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 581 ಮತದಾರರಿದ್ದಾರೆ.
ಈ ಪೈಕಿ ಯಾದಗಿರಿ ತಾಲ್ಲೂಕಿನಲ್ಲಿ 264, ಶಹಾಪುರ ತಾಲ್ಲೂಕಿನಲ್ಲಿ 147, ಸುರಪುರ ತಾಲ್ಲೂಕಿನಲ್ಲಿ 170 ವಕೀಲರು ಮತದಾನದ ಹಕ್ಕು ಹೊಂದಿದ್ದಾರೆ. ಈಗಾಗಲೇ ವಕೀಲರ ಪರಿಷತ್ ಚುನಾವಣೆ ಅಧಿಕಾರಿಯ ನಿರ್ದೇಶನದಂತೆ ಶಹಾಪುರ ವಕೀಲರ ಸಂಘಕ್ಕೆ ಮತಗಟ್ಟೆ ಅಧಿಕಾರಿಯಾಗಿ ಹಿರಿಯ ವಕೀಲ ಎಸ್.ಗೋಪಾಲ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿ ಅಮರೇಶ ಇಟಗಾ ಅವರನ್ನು ನೇಮಿಸಿದೆ’ ಎಂದು ವಕೀಲರ ಸಂಘದ ಅಧ್ಯಕ್ಷ ಯೂಸೂಫ್ ಸಿದ್ದಿಕಿ ಮಾಹಿತಿ ನೀಡಿದರು.
ವಿಧಾನ ಸಭೆಯ ಚುನಾವಣೆಯ ಪ್ರಚಾರದಂತೆ ವಕೀಲರ ಪರಿಷತ್ ಚುನಾವಣೆಯು ಅಬ್ಬರ ಜೋರಾಗಿದೆ. ವಕೀಲರು ಪ್ರಜಾತಂತ್ರದ ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ವಿವಿಧ ರಾಜಕೀಯ ಪಟ್ಟುಗಳನ್ನು ಹಾಕಿ ಗೋಪ್ಯವಾಗಿ ಜಾತಿ, ಮತ, ಧರ್ಮ ಹೆಸರಿನಲ್ಲಿ ಮತಯಾಚನೆ ನಡೆಸಿದ್ದಾರೆ.
‘ಆಧುನಿಕ ತಂತ್ರಗಾರಿಕೆಯ ರೂಪವಾಗಿರುವ ಫೇಸ್‌ಬುಕ್, ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿದ್ದಾರೆ. ಅಲ್ಲದೆ ದಿನಾಲು ಯಾವ ವಕೀಲರ ಸಂಘಕ್ಕೆ ಭೇಟಿ ನೀಡಿದ ಮಾಹಿತಿ ಹಾಗೂ ಲೈವ್ ಕೂಡಾ ನೀಡುತ್ತಿದ್ದಾರೆ. ಅದರಲ್ಲಿ ಅಭ್ಯರ್ಥಿಯು ತನ್ನ ಸ್ಫರ್ಧೆಯ ಕ್ರಮ ಸಂಖ್ಯೆಯನ್ನು ನಮೂದಿಸಿ ದಿನಾಲು ಮೊಬೈಲ್ ನಲ್ಲಿ ಪ್ರಚಾರದ ಸರಕಿನಂತೆ ಹರಿದಾಡುತ್ತಲಿದೆ ಎನ್ನುತ್ತಾರೆ’ ಸಂಘದ ಹಿರಿಯ ವಕೀಲರು ಒಬ್ಬರು.
ಆಯಾ ತಾಲ್ಲೂಕು ವಕೀಲರ ಸಂಘದ ಕಚೇರಿಯಲ್ಲಿ ಮತದಾನ ನಡೆಯಲಿದೆ. ಮತದಾನಕ್ಕೆ ಅಗತ್ಯವಾದ ಸಕಲ ವ್ಯವಸ್ಥೆ ಮಾಡಿಕೊಂಡಿದೆ. ರಾಜ್ಯ ಪರಿಷತ್ ನಿರ್ಧೇಶನದಂತೆ ಕೆಲಸ ನಿರ್ವಹಿಸುತ್ತಿದ್ದೇವೆ- ಯೂಸೂಫ್ ಸಿದ್ದಿಕಿ, ವಕೀಲರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.