
ಕೆಂಭಾವಿ: ಇಬ್ಬರು ಗೆಳೆಯರ ನಡುವೆ ಜಗಳವಾಗಿ ಅದು ವಿಕೋಪಕ್ಕೆ ತಿರುಗಿ ಒಬ್ಬ ಮೃತಪಟ್ಟಿದ್ದು, ಕೊಲೆ ಆರೋಪದಲ್ಲಿ ಮತ್ತೊಬ್ಬನನ್ನು ಕೆಂಭಾವಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಹೊಸಳ್ಳಿ ನಿವಾಸಿ, ಪಟ್ಟಣದ ಸ್ಟೋನ್ ಕ್ರಷರ್ ಒಂದರಲ್ಲಿ ವಾಹನ ಚಾಲಕನಾಗಿದ್ದ ಬಸನಗೌಡ ನಿಂಗಪ್ಪ (35) ಕೊಲೆಯಾದವರು. ಕೊಲೆ ಆರೋಪದಲ್ಲಿ ಗೊಟಗುಣಕಿಯ ಬಸನಗೌಡ ಸಂಗನಗೌಡನನ್ನು ಬಂಧಿಸಲಾಗಿದೆ. ಕೊಲೆಗೆ ಪ್ರಚೋದನೆ ನೀಡಿದ ಆರೋಪದಡಿ ಬಂಟನೂರಿನ ಶರಣಗೌಡ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರೂ ವಾಹನ ಚಾಲಕರಾಗಿದ್ದು, ಸ್ಟೋನ್ ಕ್ರಷರ್ ಮುಂಭಾಗದಲ್ಲಿ ಮಾತನಾಡುತ್ತಾ ಕುಳಿತ್ತಿದ್ದರು. ವಿನಾಕಾರಣ ಇಬ್ಬರ ನಡುವೆ ಜಗಳ ಶುರುವಾಗಿದೆ. ಕಪಾಳಕ್ಕೆ ಹೊಡೆದು, ನೆಲಕ್ಕೆ ದಬ್ಬಿ ಹಲ್ಲೆ ಮಾಡಿದ್ದರಿಂದ ಬಸನಗೌಡ ನಿಂಗಪ್ಪ ಅವರು ಪ್ರಜ್ಞೆ ತಪ್ಪಿ ಬಿದ್ದರು. ಕೆಂಭಾವಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ, ಆತ ಮೃತಪಟ್ಟಿದ್ದಾಗಿ ವೈದ್ಯರ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ಮೃತರ ಪತ್ನಿ ವೈಮನಸ್ಸು ತಾಳಿ ಶರಣಗೌಡ ಪ್ರಚೋದನೆಯಿಂದಾಗಿ ಬಸನಗೌಡ ಸಂಗನಗೌಡ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಪಿಎಸ್‌ಐ ಅಮೋಜ್ ಕಾಂಬಳೆ ಸೇರಿ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಹಲ್ಲೆಯಿಂದಾಗಿ ಬಸನಗೌಡ ನಿಂಗಪ್ಪ ಮೃತಪಟ್ಟಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಎಸ್‌ಪಿ ಪೃಥ್ವಿಕ್ ಶಂಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮದುವೆ ಆಮಿಷ
ಲೈಂಗಿಕ ದೌರ್ಜನ್ಯ ಯಾದಗಿರಿ: ಯುವತಿಯನ್ನು ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮದುವೆಗೆ ನಿರಾಕರಿಸಿದ ಆರೋಪಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 19 ವರ್ಷದ ಯುವತಿ ನೀಡಿದ ದೂರಿನ ಅನ್ವಯ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕಡಬೂರು ನಿವಾಸಿ ಸಾಬಣ್ಣ ಅರಕೇರಿ (25) ವಿರುದ್ಧ ಪ್ರಕರಣ ದಾಖಲಾಗಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಗೆ ಸಾಬಣ್ಣ ಮದುವೆ ಕಾರ್ಯಕ್ರಮದಲ್ಲಿ ಪರಿಚಯವಾಗಿದ್ದ. ಆಕೆಯ ಮೊಬೈಲ್ ನಂಬರ್ ಪಡೆದು ಆಗಾಗ ಮಾತನಾಡುತ್ತಿದ್ದರು. ಯುವತಿಯನ್ನು ಪ್ರೀತಿಸಿ ಮದುವೆ ಆಗುವುದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಯುವತಿ ಗರ್ಭಿಯಾಗಿರುವ ವಿಷಯ ತಿಳಿಸುತ್ತಿದ್ದಂತೆ ಮದುವೆ ಆಗುವುದಿಲ್ಲ ಎಂದು ನಿರಾಕರಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.