ಕೆಂಭಾವಿ ಪಟ್ಟಣದ ಮಾಸಾಬಿ ದರ್ಗಾದ ಹತ್ತಿರ ಭಾನುವಾರ ರಾತ್ರಿ ರಸ್ತೆ ಪಕ್ಕದ ಮಣ್ಣು ಕುಸಿದು ಚರಂಡಿಗೆ ಉರುಳಿದ ರಸಗೊಬ್ಬರ ತುಂಬಿದ ಲಾರಿ
ಕೆಂಭಾವಿ: ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಲಾರಿಯೊಂದು ರಸ್ತೆಯ ಮಣ್ಣು ಕುಸಿದು ಚರಂಡಿಗೆ ಉರುಳಿದೆ ಎಂದು ಪುರಸಭೆ ಸದಸ್ಯ ರಾಘುದೊರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪುರಸಭೆ ಅಧಿಕಾರಿಗಳು ಈಚೆಗೆ ಚರಂಡಿ ಸ್ವಚ್ಛತೆ ನೆಪದಲ್ಲಿ ರಸ್ತೆ ಪಕ್ಕದಲ್ಲಿರುವ ಎಲ್ಲ ಗೂಡಂಗಡಿಗಳನ್ನು ತೆಗೆಸಿದ್ದಾರೆ. ಆದರೆ ಚರಂಡಿ ಸ್ವಚ್ಛತೆ ಮಾಡಿದ ನಂತರ ಅವುಗಳನ್ನು ಸರಿಯಾದ ರೀತಿಯಲ್ಲಿ ಸಿಮೆಂಟ್, ಕಂಕರ್ ಹಾಕಿ ಮುಚ್ಚುವುದಿಲ್ಲ. ಕೇವಲ ಮಣ್ಣು ಹಾಕಿ ಮುಚ್ಚಿದ್ದಾರೆ. ಇದನ್ನು ಅರಿಯದ ಲಾರಿ ಡ್ರೈವರ್ ರಸ್ತೆಯ ಪಕ್ಕ ಗಾಡಿ ನಿಲ್ಲಿಸಲು ಹೋದಾಗ ದುರ್ಘಟನೆ ಸಂಭವಿಸಿದೆ ಎಂದು ದೂರಿದ್ದಾರೆ.
ಅವಘಡಕ್ಕೆ ಕಾರಣರಾದ ಪುರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಹಿನ್ನೆಲೆ: ಭಾನುವಾರ ರಾತ್ರಿ ರಸಗೊಬ್ಬರ ಹೊತ್ತುಕೊಂಡು ಗೋಗಿಯಿಂದ ಆಗಮಿಸಿದ್ದ ಲಾರಿಯೊಂದು ರಸ್ತೆಯ ಕೆಳಭಾಗದ ಮಣ್ಣು ಕುಸಿದು ಚರಂಡಿಗೆ ಉರುಳಿದೆ. ಅದೃಷ್ಟಾವಶ ಚಾಲಕ ಹಾಗೂ ಕ್ಲಿನರ‌್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.