
ಕೆಂಭಾವಿ: ಅಧಿಕಾರ ಹಸ್ತಾಂತರದ ಒಳ ಒಪ್ಪಂದದ ಪಟ್ಟಣದ ಪುರಸಭೆಗೆ ತಟ್ಟಿದೆ. ಹಲವು ಅಡೆತಡೆಗಳನ್ನು ದಾಟಿದ್ದ 4ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ರಹೆಮಾನ್ ಪಟೇಲ್ ಯಲಗೋಡ ಅವರು ಪುರಸಭೆ ಅಧ್ಯಕ್ಷ ಗಾದಿಗೆ ಏರುವಲ್ಲಿ ಯಶಸ್ವಿಯಾಗಿದ್ದರು. ಈಗ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ಒಟ್ಟು 23 ಸದಸ್ಯ ಬಲದ ಪುರಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿದ್ದರೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾಗಿತ್ತು. ಕಾಂಗ್ರೆಸ್ ಮುಖಂಡರು ಬೀಸಿದ ಬಲೆಯಲ್ಲಿ ಸಿಲುಕಿ, ಅಧಿಕಾರವನ್ನು ಕೈಚಲ್ಲಿದರು. ಸದಸ್ಯರ ಸಂಖ್ಯಾ ಬಲದ ಕೊರತೆ ಇದ್ದರೂ ಒಬ್ಬ ಪಕ್ಷೇತರ ಸದಸ್ಯರ ಬೆಂಬಲ ಪಡೆದು ಪುರಸಭೆ ಗದ್ದುಗೆ ಏರುವ ಆಸೆಯು ಕಾಂಗ್ರೆಸ್‌ನಲ್ಲಿ ಮತ್ತೆ ಚಿಗುರಿತ್ತು.
ರಾಜಕೀಯ ದಾಳಗಳನ್ನು ಎಸೆಯುವ ಹಲವು ಪ್ರಹಸನಗಳು ನಡೆದಿದ್ದು, ಬಿಜೆಪಿಯ ಐವರು ಸದಸ್ಯರು ಅಧಿಕೃತವಾಗಿ ಕಾಂಗ್ರೆಸ್ ‘ಕೈ’ ಹಿಡಿದಿದ್ದಾರೆ. ಮತ್ತೊಮ್ಮೆ ‘ಕೈ’ ಪಡೆ ಅಧಿಕಾರದ ಗದ್ದುಗೆ ಏರಲು ತನ್ನೆಲ್ಲ ಪಟ್ಟುಗಳನ್ನು ಪ್ರಯೋಗಿಸಿದೆ. ಅಧಿಕಾರದ ಹಂಚಿಗೆ ಬಂದಿದ್ದರೂ ‘ಕಮಲ’ ಪಾಳೆಯಕ್ಕೆ ಗದ್ದುಗೆ ಹತ್ತಲು ಆಗುತ್ತಿಲ್ಲ.
ಪುರಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ 13, ಕಾಂಗ್ರೆಸ್‌ನಿಂದ 8 ಹಾಗೂ ಇಬ್ಬರು ಪಕ್ಷೇತರ ಗೆಲುವು ಸಾಧಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಯ ಐವರು ಸದಸ್ಯರು ತಟಸ್ಥ ನಿಲುವು ತಳಿದಿದ್ದರು. ಇಬ್ಬರು ಪಕ್ಷೇತರ ಬೆಂಬಲದೊಂದಿಗೆ ಕಾಂಗ್ರೆಸ್‌ನ ಸದಸ್ಯರ ಬಲ 10ಕ್ಕೆ ಏರಿಕೆಯಾಗಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.
ಮೊದಲ 30 ತಿಂಗಳ ಅಧಿಕಾರಾದ ಅಧಿಯ ಅಧ್ಯಕ್ಷ ಸ್ಥಾನ ಬಿಸಿಎಗೆ ಮೀಸಲಾಗಿತ್ತು. ರಹೆಮಾನ್ ಪಟೇಲ್ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಪಕ್ಷದ ಆಂತರಿಕ ಅಧಿಕಾರದ ಒಳ ಒಪ್ಪಂದ ಅನ್ವಯ ಒಂಬತ್ತು ತಿಂಗಳ ನಂತರ ಈಗ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಕಂಡು ಬರುವ ಲಕ್ಷಣಗಳು ಕಾಣಿಸುತ್ತಿವೆ. ಪುರಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ ನಂತರ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದ 11ನೇ ವಾರ್ಡನ್ ಪ್ರಿಯಾ ರಾಮನಗೌಡ ಅವರ ಹೆಸರು 2ನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ಇದರ ಜೊತೆಗೆ ಬಿಜೆಪಿ ಪಕ್ಷದಿಂದ ಹಾರಿ ಬಂದಿದ್ದ ಕೆಲವು ಸದಸ್ಯರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಇದ್ದಾರೆ ಎಂಬ ಮಾತುಗಳು ಸಹ ಇವೆ.
ಜಿಲ್ಲಾ ಉಸ್ತುವಾರಿ ಸಚಿವರೆ ಹೈಕಮಾಂಡ್: ಪುರಸಭೆ ಗದ್ದುಗೆ ಏರುವಲ್ಲಿ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರ ಹಲವು ಪ್ರಯತ್ನಗಳು ಮಾಡಿದ್ದರೂ ಪಕ್ಷ ಅಧಿಕಾರಕ್ಕೆ ತರುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರೇ ಹೈ ಕಮಾಂಡ್. ಪಕ್ಷ ಅಧಿಕಾರಕ್ಕೆ ತರುವಲ್ಲಿ ಪ್ರಯತ್ನಿಸಿದ್ದ ಸಚಿವರೇ ಅಧ್ಯಕ್ಷ ಚುನಾವಣೆಯ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದಾರೆ ಎನ್ನಲಾಗುತ್ತಿದೆ. 2ನೇ ಅವಧಿಯ ಅಧ್ಯಕ್ಷ ಸ್ಥಾನದ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ. ಮುಂದಿನ ಅವಧಿಯ ಅಧ್ಯಕ್ಷ ಗಾದಿಗೆ ಯಾರು ಹತ್ತುವರು ಎಂಬ ಕುತೂಹಲ ಸ್ಥಳೀಯರಲ್ಲಿ ಮೂಡಿದೆ.
ನಮ್ಮ ನಾಯಕರಾದ ಶರಣಬಸಪ್ಪ ದರ್ಶನಾಪುರ ಅವರ ತೀರ್ಮಾನವೆ ಅಂತಿಮವಾಗಿದೆ. ಪಕ್ಷ ಸೂಚಿಸಿದ ಹಿನ್ನೆಲೆಯಲ್ಲಿ ರಾಜೀನಾಮೆ ಸಲ್ಲಿಸಿದ್ದೇನೆ. ನನ್ನ ಸೇವಾ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ತೃಪ್ತಿ ಇದೆ
-ರಹೆಮಾನ್ ಪಟೇಲ್ ಯಲಗೋಡ ಪುರಸಭೆ ಅಧ್ಯಕ್ಷ
ನ.25ರಂದು ಚುನಾವಣೆ ರಹೆಮಾನ್ ಪಟೇಲ್ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನವೆಂಬರ್ 25ರಂದು ಚುನಾವಣೆ ನಿಗದಿ ಮಾಡಿ ಚುನಾವಣಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಶ್ರೀಧರ ಗೊಟೂರ ಆದೇಶ ಹೊರಡಿಸಿದ್ದಾರೆ. ಅಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ನಾಮಪತ್ರ ಸಲ್ಲಿಕೆ ಮಧ್ಯಾಹ್ನ 12ರಿಂದ ನಾಮಪತ್ರ ಪರಿಶೀಲನೆ ನಡೆಯಲಿದೆ. ಒಂದಕ್ಕಿಂತ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾದರೆ ಅದೇ ದಿನ ಚುನಾವಣೆಯನ್ನು ನಡೆಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.