ADVERTISEMENT

ಕೆಂಭಾವಿ | ರಸ್ತೆ ಹಾಳು: ಬಸ್‌ ಸಂಚಾರ ಬಂದ್

ಪವನ ಕುಲಕರ್ಣಿ
Published 10 ಸೆಪ್ಟೆಂಬರ್ 2025, 6:34 IST
Last Updated 10 ಸೆಪ್ಟೆಂಬರ್ 2025, 6:34 IST
ಸಂಪೂರ್ಣ ಹಾಳಾದ ಕೆಂಭಾವಿ-ಯಡಿಯಾಪು ರಸ್ತೆ
ಸಂಪೂರ್ಣ ಹಾಳಾದ ಕೆಂಭಾವಿ-ಯಡಿಯಾಪು ರಸ್ತೆ   

ಕೆಂಭಾವಿ: ರಸ್ತೆ ಹಾಳಾಗಿದ್ದರಿಂದ ಕೆಂಭಾವಿ ಯಡಿಯಾಪುರ ಮಾರ್ಗವಾಗಿ ನಡಕೂರ ಗ್ರಾಮದಿಂದ ಸುರಪುರಕ್ಕೆ ತೆರಳುತ್ತಿದ್ದ ಏಕೈಕ ಬಸ್ ಸಂಚಾರ ಸ್ಥಗಿತಗೊಂಡಿದೆ. ಜನ, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಗೆ ಸಿಲುಕಿದ್ದಾರೆ.

ಈ ಮಾರ್ಗವಾಗಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಬಸ್ ಬರುತ್ತಿತ್ತು. ಆದರೆ ಈಗ ರಸ್ತೆ ಹಾಳಾಗಿದ್ದರಿಂದ ಸಾರಿಗೆ ಇಲಾಖೆ ಅಧಿಕಾರಿಗಳು ಬಸ್‌ ಸಂಚಾರ ನಿಲ್ಲಿಸಿದ್ದಾರೆ. 

ಯಡಿಯಾಪುರ ಮತ್ತು ನಡಕೂರ ಗ್ರಾಮಗಳಿಂದ ಪ್ರತಿದಿನ ತಲಾ 30–35 ವಿದ್ಯಾರ್ಥಿಗಳು ಕೆಂಭಾವಿಯ ವಿವಿಧ ಶಾಲೆ– ಕಾಲೇಜುಗಳಿಗೆ ಬರುತ್ತಾರೆ. ನಿತ್ಯ 2 ಸಲ ಸಂಚರಿಸುತ್ತಿದ್ದ ಒಂದೇ ಬಸ್‌ ಅವರಿಗೆ ಅನುಕೂಲವಾಗಿತ್ತು. 

ADVERTISEMENT

ಕೆಂಭಾವಿ-ಯಡಿಯಾಪುರ ರಸ್ತೆ ಕೇವಲ 6ಕಿ.ಮೀ ಇದ್ದು ಇದರಲ್ಲಿ ಸುರಪುರ ಹಾಗೂ ಶಹಾಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ತಲಾ 3 ಕಿ.ಮೀ ಬರುತ್ತದೆ.

‘ಶಹಾಪುರ ಕ್ಷೇತ್ರದ ಶಾಸಕರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಸುರಪುರ ಶಾಸಕರು ಯುವನಾಯಕರಾಗಿದ್ದು ರಸ್ತೆ ಸಮಸ್ಯೆಯಿಂದ ವಿದ್ಯಾರ್ಥಿಗಳ ಕಲಿಕೆ ಹಾಳಾಗುತ್ತಿರುವುದನ್ನು ಗಮನಿಸಿ ಶೀಘ್ರದಲ್ಲಿ ರಸ್ತೆ ದುರಸ್ತಿಗೆ ಕ್ರಮ ಜರುಗಿಸಿ ಬಸ್ ಸಂಚಾರ ಆರಂಭಿಸಬೇಕು’ ಎಂದು ಯಡಿಯಾಪುರ ಗ್ರಾಮದ ಮುಖಂಡ ಮಲ್ಲಿಕಾರ್ಜುನ ಕುಂಬಾರ ಮನವಿ ಮಾಡಿದ್ದಾರೆ.

ನಿತ್ಯ ಹಲವು ಜನ ಬೇರೆ ಬೇರೆ ಕೆಲಸಗಳಿಗಾಗಿ ಕೆಂಭಾವಿಗೆ ಬರುತ್ತದ್ದರು. ಈಗ ಸಂಚಾರ ಇಲ್ಲದ್ದರಿಂದ  ಖಾಸಗಿ ವಾಹನಗಳನ್ನೇ ನೆಚ್ಚಿಕೊಳ್ಳಬೇಕಿದೆ. ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ದ್ವಿಚಕ್ರ ವಾಹನ ಸವಾರರು ಅನೇಕ ಬಾರಿ ಬಿದ್ದು ಆಸ್ಪತ್ರೆ ಸೇರುವಂತಾಗಿದೆ.

ಸುರಪುರದಿಂದ ಯಡಿಯಾಪುರ ಮಾರ್ಗವಾಗಿ ಬಸ್ ಓಡಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದೇವೆ. ‘ಅಕ್ಕಪಕ್ಕ ಜಾಲಿಮರಗಳು ಬೆಳೆದು ರಸ್ತೆ ಕಿರಿದಾಗಿ ಮತ್ತು ಪರಸನಹಳ್ಳಿ ಬಳಿ ಬಾವಿ ತೊಡಲಾದ ಕಾರಣ ಬಸ್ ಸಂಚರಿಸಲು ಆಗುವುದಿಲ್ಲ’ ಎಂದು ಹೇಳುತ್ತಿದ್ದಾರೆ. ಪರಸನಹಳ್ಳಿ ಬಳಿ ಬಸ್ ಸಂಚರಿಸಲು ರಸ್ತೆ ದುರಸ್ತಿಯಾಗಿದೆ ಬಸ್ ಸಂಚಾರ ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವಂತೆ ಚಿದಾನಂದ, ಸಿದ್ದು ಮಾಸ್ತಾರ, ಸಿದ್ದಣ್ಣ ನಡಕೂರ ಸೇರಿದಂತೆ ಎರಡೂ ಗ್ರಾಮದ ಗ್ರಾಮಸ್ಥರು ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಬಸ್ ಇಲ್ಲದ ಕಾರಣ ಖಾಸಗಿ ವಾಹನಗಳ ಟಾಪ್ ಮೇಲೆ ವಿದ್ಯಾರ್ಥಿಗಳು ಸಂಚರಿಸುವಂತಾಗಿದೆ 
ಮಡಿವಾಳಪ್ಪ ನಡಕೂರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.